ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bangalore-Mysore Expressway) ಕಾಮಗಾರಿ ಪೂರ್ಣವಾಗದೆ ಟೋಲ್ ಕೇಂದ್ರಗಳ ಆರಂಭ ಹಾಗೂ ದುಬಾರಿ ಸುಂಕ ವಸೂಲಾತಿಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆದ್ದಾರಿಯ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣವಾಗುವವರೆಗೆ ಸುಂಕ ವಸೂಲಾತಿಯನ್ನು ಮುಂದೂಡಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.
ಈ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುಮಾರು 8000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bangalore–Mysore Expressway) ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಫೆ.28ರ ಬೆಳಗ್ಗೆ 8 ಗಂಟೆಯಿಂದ ಮೊದಲ ಹಂತದ ಟೋಲ್ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಕಟಣೆ ಹೊರಡಿಸಿತ್ತು. ಆದರೆ, ಇದೀಗ ಮಾರ್ಚ್ 14ರವರೆಗೆ ಯಾವುದೇ ಟೋಲ್ ಸಂಗ್ರಹವಿರುವುದಿಲ್ಲ ಎಂದು ಎನ್‌ಎಚ್‌ಎಐ ತಿಳಿಸಿದೆ.
ಇದನ್ನೂ ಓದಿ | Modi at Belagavi: ಕಾಂಗ್ರೆಸ್ ಕಾಲದಲ್ಲಾಗಿದ್ದರೆ 12 ಸಾವಿರ ಕೋಟಿ ಗುಳುಂ ಆಗುತ್ತಿತ್ತು: ಪಿಎಂ ಕಿಸಾನ್ ಹಣ ಪಾವತಿಸಿ ಮೋದಿ ಭಾಷಣ
ಒಟ್ಟು 118 ಕಿ.ಮೀ ಉದ್ದದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಈ ಪೈಕಿ ಬೆಂಗಳೂರು-ನಿಡಘಟ್ಟ ನಡುವಿನ ಮೊದಲ ಹಂತದ 55.63 ಕಿ.ಮೀ. ಕಾಮಗಾರಿ ಪೂರ್ಣವಾಗಿದೆ. ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. ಹೀಗಾಗಿ ಮಾಸಾಂತ್ಯದಿಂದಲೇ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವವರಿಂದ ಟೋಲ್ ಸಂಗ್ರಹಕ್ಕೆ ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್ ಕೇಂದ್ರ ನಿರ್ಮಾಣವಾಗಿದೆ. ಇನ್ನು ಮೈಸೂರು ಕಡೆಯಿಂದ ಪ್ರಯಾಣಿಸುವವರಿಗಾಗಿ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿ ಟೋಲ್ ಪ್ಲಾಜಾ ನಿರ್ಮಾಣವಾಗಿದೆ. ಈ ಕೇಂದ್ರಗಳು ತಲಾ 11 ಗೇಟ್‌ಗಳನ್ನು ಒಳಗೊಂಡಿವೆ.
ಕಾಮಗಾರಿ ಪೂರ್ಣವಾಗದೆ ಟೋಲ್ ಸಂಗ್ರಹಕ್ಕೆ ಸೋಷಿಯಲ್ ಮೀಡಿಯಾ ಸೇರಿದಂತೆ ಹಲವು ಕಡೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜನಾಕ್ರೋಶಕ್ಕೆ ಮಣಿದು ಕೇಂದ್ರ ಸರ್ಕಾರ ಟೋಲ್ ಸಂಗ್ರಹ ನಿರ್ಧಾರವನ್ನು ಹಿಂಪಡೆದಿದೆ. ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಸರ್ಕಾರದ ವಿರುದ್ಧ ಜನಾಕ್ರೋಶ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರಿಂದ ದುಬಾರಿ ಟೋಲ್ ಸಂಗ್ರಹ ಮಾಡುವುದರಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ ಎಂದು ಟೋಲ್ ಸಂಗ್ರಹ ನಿರ್ಧಾರ ಹಿಂಪಡೆಯಲಾಗಿದೆ.