ರಮೇಶ ದೊಡ್ಡಪುರ, ಬೆಂಗಳೂರು
ದೇಶಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಇದಕ್ಕೆ ಸಂಬಂಧಿತ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ನಿಷೇಧ ಐದು ವರ್ಷಗಳವರೆಗೆ ಇರುತ್ತದೆ. ನಂತರ ಸರ್ಕಾರ ನಿಷೇಧವನ್ನು ತೆರವುಗೊಳಿಸಬಹುದು ಅಥವಾ ಮುಂದುವರಿಸಬಹುದು.
ಈ ರೀತಿ ಸಂಘಟನೆಗಳ ನಿಷೇಧ ಮಾಡುವುದು ಸ್ವಾಗತಾರ್ಹವಾದರೂ, ನಿಜವಾಗಿಯೂ ಸಮಸ್ಯೆಗೆ ಪೂರ್ಣ ಪರಿಹಾರ ಸಿಗುತ್ತದೆಯೇ ಎನ್ನುವುದು ಮುಖ್ಯ ಪ್ರಶ್ನೆ. ಇದಕ್ಕೆ ಕಾರಣ ರಾಜಕೀಯ ಪಕ್ಷಗಳ ದ್ವಂದ್ವ ನೀತಿ.
ಎಷ್ಟು ನಿಷೇಧಿಸಿದರೂ ಮತ್ತೆ ತಲೆಯೆತ್ತುವ ಚಾಳಿ
ಭಾರತಕ್ಕೆ ಸ್ವಾತಂತ್ರ್ಯ ಲಭಿಸುವುದಕ್ಕೂ ಮುಂಚಿನಿಂದಲೇ ದೇಶದಲ್ಲಿ ಕೋಮು ಧೃವೀಕರಣಕ್ಕೆ ಮುಂದಾಗಿ ಮುಸ್ಲಿಂ ಲೀಗ್ ಸ್ಥಾಪನೆ ಮಾಡಲಾಯಿತು. ಸ್ವಾತಂತ್ರ್ಯಾನಂತರವೂ ದೇಶದಲ್ಲಿ ಮುಸ್ಲಿಂ ಲೀಗ್ ಇದೆಯಾದರೂ ಕೇರಳ ಹೊರತುಪಡಿಸಿ ಉಳಿದೆಡೆ ಪ್ರಭಾವವಿಲ್ಲ.
ಈ ಸಮಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಆಶ್ರಯವಾಗಿ ಕಂಡಿದ್ದು ಕಾಂಗ್ರೆಸ್ ಪಕ್ಷ. ಎಂದಿಗೂ ಸಂಘಟಿತವಾಗಿರುವ ಮುಸ್ಲಿಂ ಸಮುದಾಯ, ರಾಜಕೀಯವಾಗಿ ಬಹಳ ಜಾಗೃತಿ ಹೊಂದಿರುವ ಸಮುದಾಯವಾದ್ದರಿಂದ ಕಾಂಗ್ರೆಸ್‌ಗೂ ಒಟ್ಟಾಗಿ ಮತಗಳು ಲಭಿಸಲಾರಂಭಿಸಿದವು. ಈ ಮತಗಳ ಹಿಂದೆ ಬಿದ್ದ ಕಾಂಗ್ರೆಸ್ ಪಕ್ಷ, ಅಲ್ಪಸಂಖ್ಯಾತ ಮತದಾರರನ್ನೇ ಓಲೈಸತೊಡಗಿತು. ಆದರೆ ಕಾಂಗ್ರೆಸ್ ಯೋಜನೆಗಳಿಂದ ಮುಸ್ಲಿಂ ಸಮುದಾಯದ ಸ್ಥಿತಿಯಲ್ಲೇನೂ ಭಾರೀ ಸುಧಾರಣೆ ಆಗಿಲ್ಲ ಎನ್ನುವುದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ (2005) ರಲ್ಲಿ ರಚಿಸಲಾದ ರಾಜಿಂದರ್ ಸಾಚಾರ್ ಸಮಿತಿ ವರದಿಯಿಂದ ತಿಳಿದುಬಂದಿತು. ಸಮಿತಿ ಹೇಳಿದ ಶಿಫಾರಸುಗಳ ಕುರಿತು ಅನೇಕ ಭಿನ್ನಾಭಿಪ್ರಾಯಗಳು ಇವೆಯಾದರೂ, ಸ್ವಾತಂತ್ರ್ಯ ಲಭಿಸಿ ಆರು ದಶಕವಾದರೂ ಮುಸ್ಲಿಂ ಸಮುದಾಯದ ಶಿಕ್ಷಣ, ಆರೋಗ್ಯ ಮುಂತಾದ ವಿಚಾರಗಳಲ್ಲಿ ಅಭಿವೃದ್ಧಿಯಾಗಲು ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಸಾಧ್ಯವಾಗಿಲ್ಲ ಎನ್ನುವುದಂತೂ ಸಾಬೀತಾಯಿತು.
ಆದರೆ ಈ ಎಲ್ಲ ಅವಧಿಯಲ್ಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಂತಿತ್ತು. ಆದರೆ ಬರಬರುತ್ತ ಕಾಂಗ್ರೆಸ್‌ನ ಧೋರಣೆಯಿಂದ ಮುಸ್ಲಿಂ ಸಮುದಾಯದ ಮೂಲಭೂತವಾದಿ ಮಾನಸಿಕತೆಯ ನಾಯಕರು ಬೇಸರಗೊಂಡರು. ಇದೇ ಕಾರಣಕ್ಕೆ, ಕಾಂಗ್ರೆಸ್‌ನ ಪರಾವಲಂಬನೆಗಿಂತಲೂ ತಮ್ಮದೇ ಸ್ವತಂತ್ರ ವೇದಿಕೆ ಇರುವುದು ಉತ್ತಮವೆನಿಸಿ ವಿವಿಧ ಸಂಘಟನೆಗಳ ಸ್ಥಾಪನೆಗೆ ಮುಂದಾದರು.
1977ರಲ್ಲಿ ಅಲಿಗಢದಲ್ಲಿ ಆರಂಭವಾಗಿದ್ದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ (ದಾರ್ ಉಲ್ ಇಸ್ಲಾಮ್) ಮಾಡುವ ಹುನ್ನಾರ ನಡೆಸಿತ್ತು. ಆಗಿನಿಂದಲೂ ಈ ಸಂಘಟನೆಯ ಚಟುವಟಿಕೆಗಳ ಮಾಹಿತಿ ಇದ್ದಾಗ್ಯೂ ನಿಷೇಧ ಮಾಡಿದ್ದು 2001ರಲ್ಲಿ. ಅದೂ ಸಹ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಅಲ್ ಖೈದಾ ದಾಳಿ ನಡೆಸಿದ ನಂತರದಲ್ಲಿ.
ಈ ಸಂಘಟನೆಯನ್ನು ನಿಷೇಧಿಸಿದ ನಂತರ ಅಲ್ಲಿದ್ದವರೆಲ್ಲರೂ ಪಿಎಫ್‌ಐನಲ್ಲಿ ಸಕ್ರಿಯರಾದರು. ಪಿಎಫ್‌ಐ ಎನ್ನುವುದು ಸಿಮಿ ಸಂಘಟನೆಯ ಹೊಸ ರೂಪ ಎಂದು 2012ರಲ್ಲಿ ಕೇರಳ ಸರ್ಕಾರವೇ ತಿಳಿಸಿತು. ಆದರೆ ಅದಕ್ಕೂ ಮೊದಲು ದೇಶದ ವಿವಿಧೆಡೆ ಬೇರೆ ಬೇರೆ ರೂಪದಲ್ಲಿ ಪಿಎಫ್‌ಐ ಕೆಲಸ ಮಾಡುತ್ತಿತ್ತು.
ಕೇರಳದಲ್ಲಿ ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್, ಕರ್ನಾಟಕದಲ್ಲಿ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ(ಕೆಎಫ್‌ಡಿ), ತಮಿಳುನಾಡಿನಲ್ಲಿ ಮಣಿತಾ ನೀತಿ ಪಸರೈ, ಗೋವಾ ಸಿಟಿಜನ್ಸ್ ಫೋರಂ, ರಾಜಸ್ಥಾನದಲ್ಲಿ ಕಮ್ಯುನಿಟಿ ಸೋಷಿಯಲ್ ಮತ್ತು ಎಜುಕೇಷನಲ್ ಸೊಸೈಟಿ, ಪಶ್ಚಿಮ ಬಂಗಾಳದಲ್ಲಿ ನಾಗರಿಕ್ ಅಧಿಕಾರ್ ಸುರಕ್ಷಾ ಸಮಿತಿ, ಮಣಿಪುರದಲ್ಲಿ ಲೈಲಾಂಗ್ ಸೋಷಿಯಲ್ ಫೋರಮ್, ಆಂಧ್ರಪ್ರದೇಶದಲ್ಲಿ ಅಸೋಸಿಯೇಷನ್ ಆಫ್ ಸೋಷಿಯಲ್ ಜಸ್ಟೀಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇವೆಲ್ಲವನ್ನೂ ಒಟ್ಟಾಗಿಸುವ ಚಿಂತನೆಯ ಬೀಜಾಂಕುರವಾಗಿದ್ದೇ ಬೆಂಗಳೂರಿನಲ್ಲಿ.
ಬೆಂಗಳೂರಿನಲ್ಲಿ 2004ರ ಜನವರಿ 25-26ರಂದು ನಡೆದ ದಕ್ಷಿಣ ಭಾರತದ ಸಭೆಯಲ್ಲಿ, ಎಲ್ಲ ಸಂಘಟನೆಗಳನ್ನೂ ಸೇರಿಸಿ ಸಾಮಾನ್ಯ ವೇದಿಕೆ ನಿರ್ಮಿಸುವ ಚಿಂತನೆ ಮಾಡಲಾಗಿತ್ತು. ಸರ್ಕಾರಿ, ಖಾಸಗಿ ವಲಯದಲ್ಲಿ ಮೀಸಲಾತಿ ವಿಚಾರವನ್ನು ಈ ಸಮಯದಲ್ಲಿ ಮುಂದಿರಿಸಿಕೊಳ್ಳಲಾಗಿತ್ತು. ಮುಸ್ಲಿಂ ಸಂಸ್ಥೆಗಳ ಒಕ್ಕೂಟದ ಸಹಕಾರದಲ್ಲಿ ಹೈದರಾಬಾದ್‌ನಲ್ಲಿ 2005ರ ನವೆಂಬರ್ 26-27ರಂದು ಕಾರ್ಯಾಗಾರವನ್ನು ಏರ್ಪಡಿಸಿತು. ಈ ಕಾರ್ಯಾಗಾರವನ್ನು ಕರ್ನಾಟಕದವರೇ ಆದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ಉದ್ಘಾಟನೆ ಮಾಡಿದ್ದರು. ಈ ಚಿಂತನೆಗಳ ಫಲಸ್ವರೂಪವಾಗಿ ಪಿಎಫ್‌ಐ ಸಂಘಟನೆಯನ್ನು ರೂಪಿಸಲಾಯಿತು.
ಈ ರೀತಿ ಒಂದಲ್ಲ ಒಂದು ಸ್ವರೂಪದಲ್ಲಿ ಸಿಮಿ ಮರುಹುಟ್ಟು ಪಡೆಯಿತು. ಇದೀಗ ಪಿಎಫ್‌ಐ ಸಂಘಟನೆಯನ್ನೂ ನಿಷೇಧಿಸಲಾಗಿದೆ. ಆದರೆ ಈಗಲೂ ರಾಜಕಾರಣಿಗಳು ನೀಡುತ್ತಿರುವ ಹೇಳಿಕೆಗಳಲ್ಲಿ, ಸಮಸ್ಯೆಯ ಪರಿಹಾರವಾಗುವ ಮನಸ್ಸು ಇದ್ದಂತೆ ಕಾಣುತ್ತಿಲ್ಲ.
ಕಾಂಗ್ರೆಸ್‌ನ ಅನೇಕ ನಾಯಕರು ನಿಷೇಧವನ್ನು ಸ್ವಾಗತಿಸಿದ್ದಾರೆ. ಆದರೆ ಕೆಲವರು ಪಿಎಫ್‌ಐ ಮಾತ್ರ ಬ್ಯಾನ್ ಮಾಡಿದರೆ ಸಾಕೇ? ಆರೆಸ್ಸೆಸ್ ಅನ್ನೂ ಬ್ಯಾನ್ ಮಾಡಿ ಎನ್ನುವ ಮೂಲಕ ತಮ್ಮ ದ್ವಂದ್ವ ಧೋರಣೆಯನ್ನು ಮುಂದುವರಿಸಿದ್ದಾರೆ.
ಇನ್ನು ಕೆಲವರು ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪಿಎಫ್‌ಐ ಬ್ಯಾನ್ ಆಗುವುದರಿಂದ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ಹೇಗೆ ಸಹಕಾರಿಯಾಗುತ್ತದೆ ಎಂದು ಚಿಂತನೆ ನಡೆಸಿದ್ದಾರೆ. ಪಿಎಫ್‌ಐ ನಿಷೇಧ ಮಾಡಿದ್ದನ್ನು ಸ್ವಾಗತಿಸಿದ ವಿವಿಧ ಪಕ್ಷಗಳ ನಾಯಕರೂ ಇದೇ ಲೆಕ್ಕಾಚಾರದಲ್ಲಿದ್ದಾರೆ.
ನಿಷೇಧ ತಡವಾಗಿದ್ದೇಕೆ?
ಪಿಎಫ್‌ಐ ನಿಷೇಧಿಸುವುದಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಮುಖ್ಯವಾಗಿ 2016ರಲ್ಲಿ ತಮಿಳುನಾಡಿನ ಶಶಿಕುಮಾರ್, ಕರ್ನಾಟಕದ ರುದ್ರೇಶ್, ಪ್ರವೀಣ್ ಪೂಜಾರಿ, 2017ರಲ್ಲಿ ಕೇರಳದ ಬಿಬಿನ್, ಕರ್ನಾಟಕದ ಶರತ್ ಮಡಿವಾಳ, 2018ರಲ್ಲಿ ಕೇರಳದ ಅಭಿಮನ್ಯು, 2019ರಲ್ಲಿ ತಮಿಳುನಾಡಿನ ವಿ. ರಾಮಲಿಂಗಮ್, 2021ರಲ್ಲಿ ಕೇರಳದ ಸಜಿತ್, ಕೇರಳದ ನಂದು, 2022ರಲ್ಲಿ ಕರ್ನಾಟಕದ ಪ್ರವೀಣ್ ನೆಟ್ಟಾರು ಮುಂತಾದವರ ಹತ್ಯೆಯಲ್ಲಿ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಐಸಿಸ್, ಜಮಾತ್ ಉಲ್ ಮುಜಾಹಿದ್ದೀನ್ ಸೇರಿ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಪಿಎಫ್‌ಐ ಸಂಪರ್ಕವಿತ್ತು. ಪಿಎಫ್‌ಐ ನಿಷೇಧಿಸುವಂತೆ ಉತ್ತರ ಪ್ರದೇಶ, ಕರ್ನಾಟಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು ಎಂದೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2018ರ ವಿಧಾನಸಭೆ ಚುನಾವಣೆಗೂ ಮುನ್ನವೇ ಪಿಎಫ್‌ಐ ಕುರಿತು ಸಾಕಷ್ಟು ಪುರಾವೆ ಸಹಿತ ಆರೋಪಗಳಿದ್ದರೂ ನಿಷೇಧ ಮಾಡಿರಲಿಲ್ಲ. ರಾಜ್ಯ ಬಿಜೆಪಿಯ ಅನೇಕ ನಾಯಕರೇ ಈ ಕುರಿತು ಅಸಂತೋಷ ವ್ಯಕ್ತಪಡಿಸುತ್ತಿದ್ದರು. ತಮ್ಮದೇ ಸರ್ಕಾರ ಕೇಂದ್ರದಲ್ಲಿ ಎಂಟು ವರ್ಷದಿಂದ ಅಧಿಕಾರದಲ್ಲಿದ್ದರೂ ನಿಷೇಧ ಮಾಡಲು ಮೀನಮೇಷ ಎಣಿಸುತ್ತಿರುವುದಕ್ಕೆ ಕೋಪಗೊಂಡಿದ್ದರು. ಇಷ್ಟೆಲ್ಲ ಒತ್ತಡವಿದ್ದರೂ ಪಿಎಫ್‌ಐ ನಿಷೇಧಕ್ಕೆ ಬಿಜೆಪಿ ಸರ್ಕಾರ ದೀರ್ಘ ಸಮಯ ತೆಗೆದುಕೊಂಡಿದ್ದರ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಇದ್ದವೇ ಎಂಬ ಅನುಮಾನವನ್ನೂ ಹುಟ್ಟುಹಾಕುತ್ತದೆ. ಪಿಎಫ್‌ಐನಂತಹ ಸಂಘಟನೆಗಳು ಇರುವ ಕಾರಣಕ್ಕೇ ಮುಸ್ಲಿಂ ಮತಗಳ ವಿಭಜನೆಯಾಗಿ ಬಿಜೆಪಿಗೆ ಲಾಭವಾಗುತ್ತಿವೆ ಎಂಬ ಆರೋಪಗಳಿಗೆ ಪುಷ್ಟಿ ಸಿಗುತ್ತದೆ.
ಓಲೈಕೆಯಿಂದ ಪರಿಹಾರವಾಗುವುದಿಲ್ಲ
ರಾಜಕೀಯ ಪಕ್ಷಗಳು ದೇಶದ ಸುರಕ್ಷತೆಯ ವಿಚಾರದಲ್ಲೂ ಲೆಕ್ಕಾಚಾರ ಮಾಡುತ್ತಿರುವುದೇ ಇಂತಹ ಸಂಘಟನೆಗಳು ಮತ್ತೆ ತಲೆಯೆತ್ತಲು ಕಾರಣವಾಗುತ್ತಿವೆ. ತಮ್ಮ ಕುರಿತು ಮೃದು ಧೋರಣೆ ಇರುವವರ ಮೂಲಕವೇ ಮರುಹುಟ್ಟು ಪಡೆಯುತ್ತವೆ. ಈಗ ಪಿಎಫ್‌ಐ ಬ್ಯಾನ್ ಆಗಿದೆ. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಸಂಘಟನೆ ಮತ್ತೆ ಇನ್ನೊಂದು ರೂಪದಲ್ಲಿ ತಲೆಯೆತ್ತಲು ಪ್ರಯತ್ನಿಸುವ ಎಲ್ಲ ಸಾಧ್ಯತೆಯಿದೆ. ಆದರೆ ರಾಜಕಾರಣಿಗಳು ಓಲೈಕೆಯ ರಾಜಕಾರಣವನ್ನು, ರಾಜಕೀಯ ಲೆಕ್ಕಾಚಾರಗಳನ್ನು ಬಿಟ್ಟರೆ ಮಾತ್ರವೇ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇಂತಹ ಸಂಘಟನೆಗಳು ಮತ್ತೆ ತಲೆಯೆತ್ತಿದರೂ ಸಮಾಜದಲ್ಲಿ, ಮುಖ್ಯವಾಗಿ ರಾಜಕೀಯ ಆಶ್ರಯ ಸಿಗದಿದ್ದರೆ ಜೀವಂತವಾಗಿರಲು ಸಾಧ್ಯವೇ ಇಲ್ಲ. ಹಾಗಾಗಿ ಎಲ್ಲರೂ ಒಟ್ಟಾಗಿ ಸಮಾನ ಅಭಿಪ್ರಾಯವನ್ನು ಮೂಡಿಸಿಕೊಳ್ಳುವ ಅವಶ್ಯಕತೆ ಇಂದು ಇದೆ.
ಇದನ್ನೂ ಓದಿ | PFI Banned | ಪಿಎಫ್‌ಐ ನಿಷೇಧ ನೆಮ್ಮದಿ ತಂದಿದೆ; ಮರುಹುಟ್ಟದಂತೆ ನೋಡಿಕೊಳ್ಳಿ: ಪೇಜಾವರ ಶ್ರೀ