ಬೆಂಗಳೂರು: ಈ ಘಟನೆಯಲ್ಲಿ ಯಾರು ಸರಿ ಯಾರು ತಪ್ಪು ಎಂದು ತೀರ್ಮಾನಿಸುವುದೇ ಸ್ವಲ್ಪ ಕಷ್ಟದ ಕೆಲಸ. ಆ ವರ್ಕ್‌ಶಾಪ್‌ನಲ್ಲಿ ಆಗಾಗ ಕಳ್ಳತನ ನಡೆಯುತ್ತಿತ್ತು. ರಾತ್ರಿಯ ಹೊತ್ತು ಯಾರೋ ಬಂದು ಕಳವು ಮಾಡುತ್ತಿದ್ದರು. ಬಹಳ ಸಾರಿ ಪ್ರಯತ್ನಿಸಿದರೂ ಪತ್ತೆ ಹಚ್ಚಲು ಸಾಧ್ಯವಾಗಿರಲಿರಲಿಲ್ಲ. ಹೀಗಾಗಿ ಒಂದು ರಾತ್ರಿ ಒಂದು ತಂಡ ಕಟ್ಟಿಕೊಂಡೇ ಕಾದು ನಿಂತರು ಮಾಲೀಕರು. ಆವತ್ತು ಕಳ್ಳ ಬಂದಿದ್ದ! ಇಡೀ ತಂಡ ಸೇರಿಕೊಂಡು ಅವನ ಹೊಡೆದು ಹಾಕಿತು. ಅವನು ಸತ್ತೇ ಹೋದ. ಮೇಲ್ನೋಟಕ್ಕೆ ಕಳ್ಳತನ ಮಾಡಿದವನೇ ತಪ್ಪಿತಸ್ಥ. ಆದರೆ, ಏನೇ ಮಾಡಿದರೂ ಕೊಲೆ ಮಾಡುವುದು ಕಳ್ಳತನಕ್ಕಿಂತಲೂ ಘೋರ ಅಪರಾಧ.
ಇಂಥಹುದೊಂದು ಘಟನೆ ನಡೆದಿರುವುದು ಬೆಂಗಳೂರು ಬಾಗಲೂರು ಬಳಿಯ ದ್ವಾರಕಾ ನಗರದಲ್ಲಿ. ಇಲ್ಲಿನ ಮಂಜುನಾಥ್ ಎಂಜಿನಿಯರಿಂಗ್ ವರ್ಕ್ಸ್‌ನಲ್ಲಿ ಕಳ್ಳತನಕ್ಕೆ ಬಂದಿದ್ದ ಅಮರನಾಥ್ ಮಹಾತೊ ಎಂಬಾತನನ್ನು ತಂಡವೊಂದು ಕಾದು ನಿಂತು ಹೊಡೆದಿದೆ. ಅವನು ಸತ್ತೇ ಹೋಗಿದ್ದಾನೆ.
ಮಂಜುನಾಥ್ ಎಂಜಿನಿಯರಿಂಗ್ ವರ್ಕ್ಸ್ ನಲ್ಲಿ ಹಿಂದೆ ಹಲವಾರು ಬಾರಿ ಕಳ್ಳತನ ನಡೆದಿತ್ತು ಎನ್ನಲಾಗಿದೆ. ಇದರಿಂದ ರೋಸಿ ಹೋದ ಮಾಲೀಕ ಕರುಣಾಕರನ್ ಒಂದು ತಂಡವನ್ನು ಕಟ್ಟಿಕೊಂಡು ಇವತ್ತು ಯಾರು ಬರುತ್ತಾರೆ ರಾತ್ರಿ ಕಾದು ಕುಳಿತಿದ್ದರು.
ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಅಮರನಾಥ ಮೊಹಾತೊ ಅಲ್ಲಿಗೆ ಬಂದಿದ್ದ. ಆತ ಕಬ್ಬಿಣ ಕದಿಯುವಾಗ ಕರುಣಾಕರನ್ ಮತ್ತು ತಂಡ ಆತನ ಮೇಲೆ ಮುಗಿಬಿದ್ದಿದೆ. ಜತೆಗೆ ಹಿಗ್ಗಾಮುಗ್ಗಾ ಹೊಡೆದಿದೆ. ಈ ನಡುವೆ ವಿಪರೀತ ಹೊಡೆತಗಳಿಂದ ಆತ ಜೀವನ್ಮರಣ ಸ್ಥಿತಿಗೆ ತಲುಪಿದ್ದಾನೆ. ಇದರಿಂದ ಕಂಗಾಲಾದ ಕರುಣಾಕರನ್ ಮತು ತಂಡ ತಮಗೆ ವಿಷಯವೇ ಗೊತ್ತಿಲ್ಲ ಎಂಬ ರಸ್ತೆ ಬದಿಯಲ್ಲಿ ತಂದು ಹಾಕಿ ಸೀನ್ ಕ್ರಿಯೇಟ್ ಮಾಡಿದೆ.
ಬಳಿಕ ಆತ ಬಿದ್ದಿರುವುದನ್ನು ತಾವೇ ನೋಡಿದ್ದು ಎಂಬಂತೆ ಬಿಂಬಿಸಿ ಯಲಹಂಕ ಸರ್ಕಾರಿ ಅಸ್ಪತ್ರೆಗೆ ಕರೆತಂದಿದ್ದರು. ಅಸ್ಪತ್ರೆಯಲ್ಲಿ ಅಮರನಾಥ್ ಪ್ರಾಣ ಕಳೆದುಕೊಂಡಿದ್ದಾನೆ. ಈಗ ಬಾಗಲೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ| Love story | ಆಂಟಿ ಮೇಲೆ ಪ್ರೀತಿ ಹೆಚ್ಚಾಗಿ ಅಂಕಲ್ ಕೊಲೆಗೆ ಸುಪಾರಿ ಕೊಟ್ಟ; ಕೊನೆಗೆ ಅವನೇ ಜೀವ ಬಿಟ್ಟ!