Site icon Vistara News

House theft | ಖ್ಯಾತ ಚಿತ್ರನಟಿ ವಿನಯಾ ಪ್ರಸಾದ್‌ ಮನೆಯಲ್ಲಿ ಕಳವು, ಊರಿಗೆ ಹೋಗಿದ್ದ ವೇಳೆ ಕಳ್ಳರ ಕೈಚಳಕ

vinaya prasad

ಬೆಂಗಳೂರು: ಖ್ಯಾತ ಚಿತ್ರ ನಟಿ ವಿನಯಾ ಪ್ರಸಾದ್‌ ಅವರಿಗೆ ಸೇರಿದ ಮನೆಗೆ ಕಳ್ಳರು ಕನ್ನ ಹಾಕಿದ್ದು, ಹಣವನ್ನು ದೋಚಿದ್ದಾರೆ. ವಿನಯ ಪ್ರಸಾದ್‌ ಅವರ ನಂದಿನಿ ಲೇಔಟ್‌ನಲ್ಲಿರುವ ಮನೆಯಲ್ಲಿ ಈ ಕಳವು ನಡೆದಿದೆ.
ದೀಪಾವಳಿ ಹಬ್ಬದ ವೇಳೆ ಊರಿಗೆ ಹೋಗಿದ್ದ ವೇಳೆ ಕಳ್ಳರು ಕೈಚಳಕ ಮೆರೆದಿದ್ದಾರೆ. ಈ ಅವಧಿಯಲ್ಲಿ ಹಲವು ಮನೆಗಳಲ್ಲಿ ಕಳವು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟಿ ವಿನಯಪ್ರಸಾದ್ ಅವರು ಅಕ್ಟೋಬರ್ 22ರಂದು ದೀಪಾವಳಿ ಹಬ್ಬದ ನಿಮಿತ್ತ ತಮ್ಮ ಊರಾದ ಉಡುಪಿಗೆ ಹೋಗಿದ್ದರು. ಅ. 26ರ ಸಂಜೆ 4.3೦ಕ್ಕೆ ವಾಪಸ್ ಬಂದಿದ್ದರು. ಮನೆಗೆ ಬಂದು ನೋಡಿದಾಗ ಡೋರ್‌ ಲಾಕ್‌ ಬ್ರೇಕ್‌ ಆಗಿತ್ತು. ಬಾಗಿಲಿನ ಲಾಕ್‌ ಮೀಟಿ ಮನೆಗೆ ಕಳ್ಳರು ಪ್ರವೇಶಿಸಿದ್ದರು.

ಒಳ ಪ್ರವೇಶಿಸಿದ ಕಳ್ಳರು ಮನೆಯ ರೂಂನ ಲಾಕರ್ ನಲ್ಲಿ ಇಟ್ಟಿದ್ದ ನಗದು ಹಣ ದೋಚಿದ್ದರು. ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ವಿನಯಪ್ರಸಾದ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಮುಂದಾದ ಪೊಲೀಸರು ಏರಿಯಾದ ಹಳೇ ಕಳ್ಳರ ಗ್ಯಾಂಗ್, ಸುಲಿಗೆಕೋರರ ಮೇಲೆ ಕಣ್ಣಿಟ್ಟಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸದ್ದು ಜೋರಾಗಿರುವುದರಿಂದ ಕಳ್ಳರಿಗೆ ಮನೆಯ ಬಾಗಿಲನ್ನು ಒಡೆಯುವುದು ಸುಲಭವಾಗಿದೆ ಎಂದು ನಂಬಲಾಗಿದೆ. ಜತೆಗೆ ಹೆಚ್ಚಿನವರು ದೀಪಾವಳಿ ಹಬ್ಬಕ್ಕಾಗಿ ಊರಿಗೆ ಹೋಗಿರುವುದರಿಂದ ಕೈಚಳಕ ಪ್ರದರ್ಶಿಸಲು ಅನುಕೂಲವಾಗಿದೆ.

ಇದೇ ರೀತಿ ನಗರದ ಉತ್ತರ ವಿಭಾಗದಲ್ಲಿ ಸಾಲು ಸಾಲು ಮನೆಗಳ್ಳತನ ನಡೆದ ಬಗ್ಗೆ ದೂರುಗಳು ಬಂದಿವೆ. ಜೆಸಿ ನಗರ, ಮಲ್ಲೇಶ್ವರಂ, ಸುಬ್ರಹ್ಮಣ್ಯನಗರ, ರಾಜಗೋಪಾಲನಗರ ವ್ಯಾಪ್ತಿಯಲ್ಲಿ ಆರು ಮನೆಗಳಿಗೆ ಕಳ್ಳರು ನುಗ್ಗಿದ್ದಾರೆ.
ರಾಜಗೋಪಾಲನಗರದಲ್ಲಿ ಮನೆ ಬೀಗ ಮುರಿದು 2.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರೆ, ಜೆ ಸಿ ನಗರದಲ್ಲಿ 2 ಲಕ್ಷ ನಗದು ಕಳ್ಳತನ ನಡೆದಿದೆ.

ಇದನ್ನೂ ಓದಿ | ಆಪ್ತ ಸ್ನೇಹಿತೆಯ ಮನೆಯಿಂದಲೇ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು, ನಂಬಿಕೆ ಇಟ್ಟು ತೋರಿಸಿದ್ದೇ ತಪ್ಪಾಯ್ತು!

Exit mobile version