Site icon Vistara News

ಮಚ್ಚು, ಲಾಂಗ್‌ನಿಂದ ಮಾಲೀಕನಿಗೆ ಹಲ್ಲೆ ನಡೆಸಿ 80 ಹಂದಿ ಕದ್ದೊಯ್ದಿದ್ದ 8 ಡಕಾಯಿತರ ಬಂಧನ

handi kallaru

ಬೆಂಗಳೂರು: ಹುಣಸಮಾರನಹಳ್ಳಿಯ ಹಂದಿ ಸಾಕಾಣಿಕಾ ಕೇಂದ್ರದಿಂದ ೮೦ ಹಂದಿಗಳನ್ನು ಕದ್ದೊಯ್ದಿದ್ದ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ ೧೬ರಂದು ಈ ಘಟನೆ ನಡೆದಿತ್ತು.

ಕೆಲವು ಸಮಯದ ಹಿಂದೆ ಈ ಘಟನೆ ನಡೆದಿದ್ದು, ಗೋಕಳವಿನಂತೆ ಹಂದಿ ಕಳವು ನಡೆದಿದೆ ಎಂದು ಸುದ್ದಿಯಾಗಿತ್ತು. ದುಷ್ಕರ್ಮಿಗಳು ಬೆಳಗಿನ ಜಾವ ಮೂರು ಗಂಟೆಯ ವೇಳೆಗೆ ಹಂದಿ ಸಾಕಾಣಿಕಾ ಕೇಂದ್ರಕ್ಕೆ ನುಗ್ಗಿ ಈ ಕೃತ್ಯ ಎಸಗಿದ್ದರು. ರಾತ್ರಿ ಸಾಕಾಣಿಕಾ ಕೇಂದ್ರಕ್ಕೆ ನುಗ್ಗಿದ ವೇಳೆ ಹಂದಿಗಳು ಅರಚಲು ಶುರು ಮಾಡಿದ್ದವು. ಆ ಸಂದರ್ಭದಲ್ಲಿ ಎದ್ದು ಹೊರಗೆ ಬಂದ ಫಾರ್ಮ್ ಮಾಲೀಕ ಸಂದೀಪ್ ಹಾಗು ಅವರ ತಂದೆ ರಾಮಕೃಷ್ಣಪ್ಪ ಎಂಬವರ ಮೇಲೆ ಲಾಂಗ್‌ ಮತ್ತು ಮಚ್ಚಿನಿಂದ ಹಲ್ಲೆ ಮಾಡಿದ್ದರು.

ಬಂಧಿತ ಆರೋಪಿಗಳನ್ನು ರಾಯಚೂರು ಜಿಲ್ಲೆಯ ಸಿಂಧನೂರಿನ ಶಂಕರ್(೨೨), ಗದಗ ಜಿಲ್ಲೆ ಲಕ್ಷ್ಮೇಶ್ವರದ ಅಶೋಕ್ (೨೧), ರಾಯಚೂರು ಜಿಲ್ಲೆ ಅಂಬಾಮಠ ಅಂಬಣ್ಣ‌ (೨೧), ಬೆಳಗಾವಿಯ ಅಡಿವೆಪ್ಪ (೨೨), ರಾಯಚೂರು ಜಿಲ್ಲೆಯ ಸಿಂಧನೂರಿನ ಪರಶುರಾಮ (೨೫), ರಾಯಚೂರು ಜಿಲ್ಲೆ ಮಾನ್ವಿಯ ಬಸವರಾಜು (೨೯), ಯಲಹಂಕ ರಾಜಾನುಕುಂಟೆಯ ಮಂಜುನಾಥ್ (೩೩), ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕಿರಣ್ (೨೮), ಬೆಳಗಾವಿ ಜಿಲ್ಲೆ ರಾಮದುರ್ಗದ ಫಕೀರಪ್ಪ (೩೧) ಹಾಗು ಬೆಳಗಾವಿ ಜಿಲ್ಲೆಯ ರಾಮದುರ್ಗದ ಶಂಕರ ನಾಗಪ್ಪ (೨೭) ಎಂದು ಗುರುತಿಸಲಾಗಿದೆ. ಇವರು ಕದ್ದುಕೊಂಡು ಹೋಗಿದ್ದ ೮೦ ಹಂದಿಗಳ ಮೌಲ್ಯ ೨೦ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಂಧಿತರಲ್ಲಿ ಕಿರಣ್‌ ಎಂಬಾತ ಕಳ್ಳರ ಕೈಯಿಂದ ಹಂದಿಗಳನ್ನು ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ. ಗಂಗಾವತಿ ಠಾಣಾ ವ್ಯಾಪ್ತಿಯ ಟೋಲ್‌ ಬಳಿ ಇವರನ್ನು ಬಂಧಿಸುವ ವೇಳೆ ಇವರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರು. ಆಗ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿದ ಘಟನೆಯೂ ನಡೆದಿತ್ತು.

ಇದನ್ನೂ ಓದಿ |Cow Slaughter | ಚಿಕ್ಕಮಗಳೂರಲ್ಲಿ ಗೋಹತ್ಯೆ ಮಾಡಿದರೆ ಕರೆಂಟ್‌ ಕಟ್‌, ಆಸ್ತಿ ದಾಖಲೆ ವಶ

Exit mobile version