Site icon Vistara News

ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್‌ಗೆ ಮತ್ತೊಂದು ಬೆದರಿಕೆ ಪತ್ರ; ಕಾಂಗ್ರೆಸ್‌ ನಾಯಕರೆಲ್ಲಾ ದೇಶದ್ರೋಹಿಗಳು!

BT lalitha nayak

ಬೆಂಗಳೂರು: ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್‌ಗೆ ಈ ಹಿಂದೆ ಪತ್ರ ಬರೆದು ಜೀವ ಬೆದರಿಕೆ ಹಾಕಿದ್ದ ಅನಾಮಿಕ ಮತ್ತೆ ಅವರಿಗೆ ಪತ್ರ ಬರೆದಿದ್ದು, ಜೀವ ಬೆದರಿಕೆ ಹಾಕಿದ್ದಾನೆ. ಪತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಯಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತಿತರರನ್ನು ದೇಶದ್ರೋಹಿಗಳು ಎಂದು ಕರೆದಿದ್ದಾನೆ.

ರಾಜ್ಯದಲ್ಲಿ ಕೆಲ ಸಾಹಿತಿಗಳು ತಮಗೆ ಜೀವ ಬೆದರಿಕೆ ಇದೆ ಎಂದು ದೂರುತ್ತಿರುವ ಸಂದರ್ಭದಲ್ಲಿಯೇ ಈ ಪತ್ರ ಬಂದಿದೆ. ಈ ಹಿಂದೆ ಬಂದ್ದಿದ್ದ ಜೀವ ಬೆದರಿಕೆಗೆ ಸಂಬಂಧಿಸಿದಂತೆ ಲಲಿತಾನಾಯಕ್‌ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

“ಈ ಮೊದಲು ಸೈನಿಕರ ಬಗ್ಗೆ ಹಗುರವಾಗಿ ಮಾತಾಡಿದಕ್ಕೆ ಕ್ಷಮೆ ಕೇಳಬೇಕು ಎಂದು ಪತ್ರ ಬರೆದಿದ್ದೆ. ಆದರೆ ನೀವು ಆ ಪತ್ರವನ್ನು ಕೊಲೆ ಬೆದರಿಕೆ ಎಂದು ಕೇಸ್ ದಾಖಲು ಮಾಡಿದ್ದೀರಿ. ಹಾಗಾಗಿ ಈ ಪತ್ರದಲ್ಲಿ ಬೆದರಿಕೆ ಹಾಕುತ್ತಿದ್ದೇನೆʼʼ ಎಂದು ಈ ಅನಾಮಿಕ ಪತ್ರದಲ್ಲಿ ಹೇಳಿದ್ದಾನೆ.

ಇದನ್ನೂ ಓದಿ | ಹಂಸಲೇಖ ಕಂಸನಾಗಿದ್ದು 61 ಸಾಹಿತಿಗಳಿಂದ: ಸಾಹಿತಿಗಳಿಗೆ ಬೆದರಿಕೆ ಪತ್ರ

ಪತ್ರದಲ್ಲಿ ಏನಿದೆ?

ಬಿ.ಟಿ.ಲಲಿತಾ ನಾಯಕ್‌ರ ಭಾವಚಿತ್ರ ಸೇರಿದಂತೆ ಸಾಹಿತಿ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಎಸ್‌.ಜಿ. ಸಿದ್ದರಾಮಯ್ಯ, ಜ್ಞಾನಪ್ರಕಾಶ ಸ್ವಾಮಿಗಳು, ಲೀನಾ, ಮಹುವಾ ಮೊಯಿತ್ರಾ,  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ಇತರರ ಪೋಟೋ ಅಂಟಿಸಿ ಸಂತಸ ಶ್ರದ್ಧಾಂಜಲಿ ಎಂದು ಉಲ್ಲೇಖ ಮಾಡಲಾಗಿದೆ.

ಅನಾಮಿಕನ ಬೆದರಿಕೆ ಪತ್ರ

ಜತೆಗೆ ಈ ಮೇಲ್ಕಂಡವರು ಯಾರು ಅಂತೀರಾ? ಇವರೇ ಅಪ್ಪಟ ದೇಶ ದ್ರೋಹಿಗಳು. ನಮ್ಮ ದೇಶದ ಸೈನಿಕರು, ಪೊಲೀಸರು, ನಾಗರಿಕರ ಮೇಲೆ ಇಸ್ಲಾಮಿಕ್‌, ಭಯೋತ್ಪಾದಕರು ಸೇರಿದಂತೆ ಮತಾಂತರ ಮಾಡುವವರು ದಾಳಿ ಮಾಡಿದಾಗ ಇವರ‍್ಯಾರು ಉಸಿರು ಬಿಡುವುದಿಲ್ಲ. ಆದರೆ ಈಗ ಪಾಠದಲ್ಲಿ ಭಗವದ್ಗೀತೆಯನ್ನು ಸೇರಿಸಿದ್ದಕ್ಕೆ ಇತವರಿಗೆ ಹುರಿಹುರಿ. ಅದಕ್ಕೆ ಇಂತಹ ದುರಾಳರು ನಿಚಾ ರಾಜಕಾರಣಿಗಳು , 61 ಎಡಬಿಡಂಗಿ ಸಾಹಿತಿಗಳು ಮುಂದಿನ ದಿನಗಳಲ್ಲಿ ರ್ದುಮರಣಕ್ಕೆ ಬಲಿಯಾವುದಾ? ಎಂದು ಬರೆದಿದ್ದಾರೆ.

ಬಿ.ಟಿ.ಲಿಲಿತಾ ನಾಯಕ್‌ ಅವರೇ ಈಗಲೂ ಬದಲಾಗಲು ಸಮಯವಿದ್ದು ಬದಲಾಗಿ ಕ್ಷಮೆ ಕೇಳಿ, ಇಲ್ಲ ರ್ದುಮರಣಕ್ಕೆ ಸಿದ್ದರಾಗಿ ಎಂದು ಕೆಂಪು ಬಣ್ಣದ ಇಂಕು ಪೆನ್ನಿನಲ್ಲಿ ಬರೆದಿದ್ದು, ಸಹಿಷ್ಣು ಹಿಂದು ಎಂದು ತನ್ನನ್ನು ತಾನು ಕರೆದುಕೊಂಡಿದ್ದಾನೆ.

ಇದನ್ನೂ ಓದಿ | ಆಸ್ತಿ ಬರೆದುಕೊಡುವಂತೆ ದಂಪತಿಗೆ ಬೆದರಿಕೆ ಹಾಕಿದ್ರಾ ಶಾಸಕ ಚರಂತಿಮಠ?

Exit mobile version