ಬಾಗಲಕೋಟೆ: ಟಂಟಂ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ (Road Accident) 2 ವರ್ಷದ ಮಗು ಸೇರಿ ಮೂವರು ದುರ್ಮರಣ ಹೊಂದಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದು ತಾಲೂಕಿನ ಛಬ್ಬಿ ಕ್ರಾಸ್ ಬಳಿ ಬುಧವಾರ ನಡೆದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಶಂಕ್ರಪ್ಪ ಮೆಳ್ಳಿಗೇರಿ (65), ವಿಜಯ್ ತೇಲಿ (65),ಗೌರಿ ಚವ್ಹಾನ(2) ಮೃತರು. ಕಲಾದಗಿ ಮೂಲದ ಗೌರಿ ಚೌಹಾನ್ (2) , ಗದ್ದನಕೇರಿಯ ವಿಜಯ್ ತೇಲಿ, ತುಳಸಿಗೇರಿ ಗ್ರಾಮದ ಶಂಕ್ರಪ್ಪ ಮೆಳ್ಳಿಗೇರಿ ಗಾಯಾಳುಗಳು. ಇವರಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದ ಟಂಟಂನಲ್ಲಿದ್ದ ಐವರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಗದ್ದನಕೇರಿ ಕ್ರಾಸ್‌ನಿಂದ ಕಲಾದಗಿಯತ್ತ ಹೊರಟಿದ್ದ ಟಂಟಂ ಹಾಗೂ ಕಲಾದಗಿಯಿಂದ ಬಾಗಲಕೋಟೆಗೆ ಹೊರಟಿದ್ದ ಮಾರುತಿ ಬ್ರೇಜಾ ಕಾರಿನ ನಡುವೆ ಅಪಘಾತವಾಗಿದೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Murder Case : ಬೆಂಗಳೂರಿನಲ್ಲಿ ರೌಡಿ ಶೀಟರ್ ಕೊಲೆ; ಮನೆ ಹೊರಗಡೆ ಮಲಗಿದಲ್ಲೇ ಮರ್ಡರ್
ಲಾರಿ ಕೆಳಗೆ ಸಿಲುಕಿ ಬೈಕ್ ಸವಾರ ಸಾವು
ಚಿಕ್ಕಬಳ್ಳಾಪುರ: ಚಲಿಸುವ ಬಸ್ ಹಾಗೂ ಲಾರಿ ಮಧ್ಯೆ ಸಿಲುಕಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಸೇಟ್ ದಿನ್ನೆ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಗೊಳ್ಳಚಿಕ್ಕನಹಳ್ಳಿ ಗ್ರಾಮದ ಸುಭಾಷ್ (24) ಮೃತರು. ಎರಡು ವಾಹನಗಳ ಮಧ್ಯೆ ಓವರ್ ಟೇಕ್ ಮಾಡಲು ಹೋದ ವೇಳೆ, ಲಾರಿ ಕೆಳಗೆ ಸಿಲುಕಿ ಸವಾರ ಮೃತಪಟ್ಟಿದ್ದಾನೆ.
Honour Killing : ತಂಗಿ, ಅಮ್ಮನನ್ನೇ ಕೆರೆಗೆ ತಳ್ಳಿ ಕೊಂದ ಧೂರ್ತ; ಅನ್ಯ ಕೋಮಿನ ಯುವಕನ ಪ್ರೇಮ ಕಾರಣ!
ಮೈಸೂರು: ಮೈಸೂರು ಜಿಲ್ಲೆಯಲ್ಲೊಂದು (Mysore News) ಹೃದಯ ವಿದ್ರಾವಕ (Heart touching Incident) ಘಟನೆ ನಡೆದಿದೆ. ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನೇ ಕೆರೆಗೆ ತಳ್ಳಿ ಕೊಲೆ (Young Man kills sister and mother) ಮಾಡಿದ್ದಾನೆ. ಇದೊಂದು ಗೌರವ ಹತ್ಯೆ (Honour Killing) ಎಂದು ಹೇಳಲಾಗಿದೆ.
ಹುಣಸೂರು ತಾಲ್ಲೂಕು ಮರೂರು ಗ್ರಾಮದಲ್ಲಿ ನಿತಿನ್ ಎಂಬಾತ ತನ್ನ ತಂಗಿ ಧನುಶ್ರೀ (19) ಮತ್ತು ತಾಯಿ ಅನಿತಾ (43) ಅವರನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಧನುಶ್ರೀ ಅನ್ಯ ಕೋಮಿನ ಯುವಕನ ಜತೆ ಆತ್ಮೀಯವಾಗಿದ್ದಾಳೆ ಎಂಬುದರಿಂದ ಸಿಟ್ಟಿಗೆದ್ದಿದ್ದ ನಿತಿನ್ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ, ಇದನ್ನು ತಪ್ಪಿಸಲು ಬಂದ ತಾಯಿ ಕೂಡಾ ನೀರಿನಲ್ಲಿ ಶವವಾಗಿದ್ದಾರೆ.
ಕಾಲೇಜಿನಲ್ಲಿ ಓದುತ್ತಿರುವ ಧನುಶ್ರೀ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದು ಊರಿನಲ್ಲೂ ಸುದ್ದಿಯಾಗಿತ್ತು. ಅಣ್ಣ ನಿತಿನ್ ಇದನ್ನು ಆಕ್ಷೇಪಿಸಿದ್ದ. ಈ ವಿಚಾರದಲ್ಲಿ ಅಣ್ಣ ತಂಗಿಯರ ನಡುವೆ ವೈ ಮನಸ್ಸು ಬೆಳೆದಿತ್ತು.
ಎಷ್ಟು ಹೇಳಿದರೂ ತನ್ನ ಮಾತನ್ನು ಕೇಳದೆ ಅನ್ಯ ಕೋಮಿನ ಯುವಕನ ಜತೆಗಿನ ಸುತ್ತಾಟವನ್ನೇ ಮುಂದುವರಿಸಿದ ತಂಗಿಯ ಮೇಲೆ ಸಿಟ್ಟುಗೊಂಡ ನಿತಿನ್ ಆಕೆಯ ಪಾಠ ಕಲಿಸಲು ಮುಂದಾಗಿದ್ದಾನೆ. ತಾಯಿ ಹಾಗೂ ತಂಗಿಯನ್ನು ಜತೆಯಾಗಿ ಬೈಕ್‌ನಲ್ಲಿ ಕರೆದೊಯ್ದ ನಿತಿನ್ ಒಂದು ಕೆರೆ ಬಳಿ ಬೈಕ್ ನಿಲ್ಲಿಸಿದ. ಮೊದಲು ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Self Harming : 29ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ 12 ವರ್ಷದ ಬಾಲಕಿ; ಏನಾಗಿತ್ತು ಆಕೆಗೆ?
ಈ ವಿಷಯವನ್ನು ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಸೇರಿದ್ದಾರೆ. ನಿತಿನ್ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಇದೀಗ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರಗೆ ತೆಗೆದಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.