Site icon Vistara News

Leopard trapped | ಒಂದೇ ಗ್ರಾಮದ ಒಂದೇ ಸ್ಥಳದಲ್ಲಿ ಮೂರು ಚಿರತೆಗಳ ಸೆರೆ: ಇನ್ನೂ ಎಷ್ಟಿದ್ದಾವೋ?!

ಪಾಂಡವಪುರ ಚಿರತೆ

ಮಂಡ್ಯ: ರಾಜ್ಯದಲ್ಲಿ ಚಿರತೆಗಳ ಹಾವಳಿ ಎಷ್ಟು ಜೋರಾಗಿದೆ ಎಂದರೆ ಹೀಗೇ ಬಿಟ್ಟರೆ ಜಾನುವಾರುಗಳ ಹಾಗೆ ಬೀದಿಯಲ್ಲಿ ಓಡಾಡಬಹುದು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ! ಇದಕ್ಕೆ ಪೂರಕವಾದ ಉದಾಹರಣೆಯೊಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಸಿಕ್ಕಿದೆ (Leopard trapped).

ಇಲ್ಲಿ ಒಂದೇ ಗ್ರಾಮದ ಒಂದೇ ಸ್ಥಳದಲ್ಲಿ ಒಂದೇ ತಿಂಗಳಲ್ಲಿ ಮೂರು ಚಿರತೆಗಳು ಬೋನಿಗೆ ಬಿದ್ದಿವೆ. ಮೂರು ಚಿರತೆಗಳು ಬೋನಿಗೇ ಬಿದ್ದಿವೆ ಎಂದರೆ ಈ ಭಾಗದಲ್ಲಿ ಎಷ್ಟು ಚಿರತೆಗಳು ಇದ್ದಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಮೂರು ಚಿರತೆಗಳು ಸೆರೆ ಸಿಕ್ಕ ಪ್ರಕರಣದಿಂದ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ಹೀಗಾದರೆ ಓಡಾಡುವುದು ಹೇಗೆ ಎನ್ನುವುದು ಜನರ ಪ್ರಶ್ನೆ. ಮೂರನ್ನಾದರೂ ಹಿಡಿದಿದ್ದಾರಲ್ಲಾ ಎನ್ನುವ ನೆಮ್ಮದಿಯೂ ಇನ್ನೊಂದು ಕಡೆ ಇದೆ.

ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿನಿಂದ ಚಿರತೆಗಳ ಹಾವಳಿ ಜೋರಾದ ಬಗ್ಗೆ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಜನರ ದೂರಿನ ಮೇರೆಗೆ ಶಿವರಾಮು ಎಂಬುವರ ಜಮೀನಿನಲ್ಲಿ ಬೋನು ಇಡಲಾಗಿತ್ತು. ಅದರಲ್ಲಿ ನಾಯಿಗಳನ್ನು ಕಟ್ಟಿ ಹಾಕಲಾಗುತ್ತಿತ್ತು. ಬೋನಿನಲ್ಲಿದ್ದ ನಾಯಿ ತಿನ್ನಲು ಬಂದ ಚಿರತೆ ಅಲ್ಲೇ ಸಿಕ್ಕಿ ಸೆರೆಯಾಗುತ್ತಿದೆ.

ಕಳೆದ ಒಂದು ತಿಂಗಳ ಅಂತರದಲ್ಲಿ ಮೂರು ಚಿರತೆಗಳು ಒಂದೇ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದು, ಸೆರೆ ಸಿಕ್ಕ ಚಿರತೆಗಳನ್ನು ಅಧಿಕಾರಿಗಳು ಮಹದೇಶ್ವರ ಬೆಟ್ಟದ ಕಾಡಿಗೆ ಬಿಡಲು ಕೊಂಡೊಯ್ದಿದ್ದಾರೆ.
ಈ ನಡುವೆ, ಮತ್ತಷ್ಟು ಚಿರತೆಗಳು ಇರಬಹುದೆಂಬ ಗ್ರಾಮಸ್ಥರ ಮನವಿ ಮೇರೆಗೆ ಮತ್ತೆ ಬೋನು ಇಡಲಾಗಿದೆ.

ಇದನ್ನೂ ಓದಿ | Leopard attack | ಮೈಸೂರು ನಗರಕ್ಕೇ ಬಂತು ಚಿರತೆ ದಂಡು; CFTRI ಶಾಲೆ ಬಳಿ ರಾತ್ರಿ ಸಂಚಾರ ಕಂಡು ಬೆಚ್ಚಿದ ಸಿಬ್ಬಂದಿ

Exit mobile version