ಬೆಂಗಳೂರು: ತನಗೆ ಕ್ಯಾನ್ಸರ್ ಕಾಯಿಲೆ ವಕ್ಕರಿಸಿದೆ ಎಂದು ತಿಳಿದ ವ್ಯಕ್ತಿಯೊಬ್ಬರು ಕುಟುಂಬದ ಮುಂದಿನ ಅಸಹಾಯಕ ಸ್ಥಿತಿಯನ್ನು ಕಲ್ಪಿಸಿಕೊಂಡು ಪತ್ನಿ ಮತ್ತು ಮಗುವಿನೊಂದಿಗೆ ಸಾವಿನ ಮೊರೆ ಹೋಗಿದ್ದಾರೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಚುಂಚಘಟ್ಟದಲ್ಲಿ ಈ ಘಟನೆ ಗುರುವಾರ ನಡೆದಿದೆ.
ಬಿಬಿಎಂಪಿಯಲ್ಲಿ ಬಿಲ್ ಕಲೆಕ್ಟರ್‌ಗೆ ಸಹಾಯಕನಾಗಿ ತಾತ್ಕಾಲಿಕ ಕೆಲಸ ಮಾಡುತ್ತಿದ್ದ ಮಹೇಶ್ ಅವರೇ ಪತ್ನಿ ಜ್ಯೋತಿ ಮತ್ತು ಒಂಬತ್ತು ವರ್ಷದ ಮಗ ನಂದೀಶ್ ಗೌಡ ಜತೆಗೆ ಸಾವಿಗೆ ಶರಣಾದವರು. ಮಹೇಶ್ ಅವರು ಹೆಂಡತಿ ಮತ್ತು ಮಗನಿಗೆ ವಿಷ ನೀಡಿ ತಾವು ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಬೆಳಗ್ಗೆ ೧೧ ಗಂಟೆಯ ಬಳಿಕ ಈ ಘಟನೆ ನಡೆದಿದೆ.
ಮಹೇಶ್ ಮತ್ತು ಜ್ಯೋತಿ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯ ನಿವಾಸಿಗಳು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಮಹೇಶ್‌ಗೆ ಪದೇಪದೆ ಅನಾರೋಗ್ಯ ಕಾಡುತ್ತಿತ್ತು. ಆಗ ಪರೀಕ್ಷೆ ನಡೆಸಿದಾಗ ಕ್ಯಾನ್ಸರ್ ಇರುವುದು ಗೊತ್ತಾಗಿದೆ.
ಕ್ಯಾನ್ಸರ್ ಬಂದರೆ ಚಿಕಿತ್ಸೆಗೆ ವಿಪರೀತ ಖರ್ಚಾಗುತ್ತದೆ. ಅಷ್ಟೊಂದು ಹಣವನ್ನು ಎಲ್ಲಿಂದ ತರುವುದು, ದೊಡ್ಡ ಮೊತ್ತ ಖರ್ಚು ಮಾಡಿದರೂ ಬದುಕುವುದು ಸಾಧ್ಯವಾ? ಸಾಧ್ಯವಾಗದೆ ಹೋದರೆ ಆ ಹಣಕ್ಕೆಜವಾಬ್ದಾರಿ ಯಾರು, ನನ್ನ ಬಳಿಕ ಹೆಂಡತಿ, ಮಗನನ್ನು ನೋಡಿಕೊಳ್ಳುವುದು ಯಾರು ಎಂದೆಲ್ಲ ಯೋಚಿಸುತ್ತಾ ಖಿನ್ನನಾಗಿದ್ದ.
ನಿಜವೆಂದರೆ, ಮಹೇಶ್ ಕುಟುಂಬ ಆರ್ಥಿಕವಾಗಿ ಸಬಲವಾಗಿರಲಿಲ್ಲ. ಮಹೇಶ್‌ಗೆ ಸರಿಯಾದ ಕೆಲಸವಿಲ್ಲದೆ ಬಿಬಿಎಂಪಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಬಿಲ್ ಕಲೆಕ್ಟರ್ ಜತೆ ಸಹಾಯಕನಾಗಿ ಓಡಾಡಿಕೊಂಡಿದ್ದ. ಇಂಥ ಪರಿಸ್ಥಿತಿಯಲ್ಲಿ ವಕ್ಕರಿಸಿದ ಕ್ಯಾನ್ಸರ್ ಮಹೇಶನ ಶಕ್ತಿಯನ್ನೆಲ್ಲ ಉಡುಗಿಸಿತ್ತು. ಕೊನೆಗೆ ಸಾವಿಗೆ ಶರಣಾಗುವುದೊಂದೇ ದಾರಿ ಎಂದು ಮಹೇಶ್ ನಿರ್ಣಯಕ್ಕೆ ಬಂದಂತಿತ್ತು.
ಪತ್ನಿ ಜ್ಯೋತಿಗೆ ಹಾಗು ಮಗ ನಂದೀಶ್‌ಗೆ ವಿಷ ನೀಡಿದ ಮಹೇಶ್ ತಾನು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕೋಣನಕುಂಟೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಿದರು. ಮೃತದೇಹವನ್ನು ವಿಕ್ಟೋರಿಯ ಆಸ್ಪತ್ರೆ ಸಾಗಿಸಲಾಗಿದೆ. ಜತೆಗೆ ಮೃತ ಮಹೇಶ್ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ| Lovers suicide | ಬೆಂಕಿಕೆರೆ ಕೆರೆಗೆ ಹಾರಿ ಬೆಂಗಳೂರಿನ ಪ್ರೇಮಿಗಳ ಆತ್ಮಹತ್ಯೆ