Site icon Vistara News

Tiger pawl : ಧನಂಜಯ ಸ್ವಾಮಿಯ ಹುಲಿ ಉಗುರಿನ ಪೆಂಡೆಂಟ್‌ ನಿಗೂಢ ನಾಪತ್ತೆ; ಬೆನ್ನು ಹತ್ತಿದ ಅಧಿಕಾರಿಗಳು!

Dhananjaya guruji tiger pawl

ತುಮಕೂರು: ಹುಲಿ ಉಗುರಿನ (Tiger pawl) ಪೆಂಡೆಂಟ್‌ ಧರಿಸಿದ ಕಾರಣಕ್ಕಾಗಿ ಕೃಷಿಕ ಹಾಗೂ ಬಿಗ್‌ ಬಾಸ್‌ (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthur Santhosh) ಅವರನ್ನು ದೊಡ್ಮನೆಯಿಂದಲೇ ಬಂಧಿಸಿ ಜೈಲಿಗಟ್ಟಿದ ಬೆನ್ನಿಗೇ ಇದೇ ಮಾದರಿಯಲ್ಲಿ ಆಭರಣ ಧರಿಸಿದ ಗಣ್ಯರು ಮತ್ತು ಸೆಲೆಬ್ರಿಟಿಗಳಿಗೆ ಆತಂಕ ಶುರುವಾಗಿದೆ. ಅದರಲ್ಲೂ ಹುಲಿಯುಗುರಿನ ಪೆಂಡೆಂಟ್‌ ಧರಿಸಿ ಪ್ರದರ್ಶನ ಮಾಡುತ್ತಿದ್ದ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಬಿದನಗೆರೆಯ ಧನಂಜಯ ಸ್ವಾಮಿ (Dhananjaya Swami) ಸಂಕಷ್ಟಕ್ಕೆ ಸಿಲುಕಿದ್ದಾರೆ.

ವರ್ತೂರು ಸಂತೋಷ್‌ ಬಂಧನದ ಬೆನ್ನಲ್ಲೇ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಧನಂಜಯ ಸ್ವಾಮಿ ಚಿತ್ರಗಳನ್ನು ಹಾಕಿ ಇವರ ಮೇಲೆ ಯಾಕೆ ಕ್ರಮವಿಲ್ಲ ಎಂದು ಕೇಳಿದ್ದರು. ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ (Forest department officials) ದೂರು ಕೂಡಾ ನೀಡಿದ್ದರು. ಇದನ್ನು ಪರಿಗಣಿಸಿ ಅರಣ್ಯಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇದರ ನಡುವೆ, ಇದುವರೆಗೂ ಧನಂಜಯ ಸ್ವಾಮಿ ಧರಿಸುತ್ತಿದ್ದ ಪೆಂಡೆಂಟ್‌ ನಿಗೂಢವಾಗಿ ನಾಪತ್ತೆಯಾಗಿದೆ!

ಬಿದನಗೆರೆ ಶನೀಶ್ವರ ದೇವಾಲಯದಲ್ಲಿ ತಪಾಸಣೆ

ಅದನ್ನು ಎಸೆದಿದ್ದೇನೆ ಎಂದ ಧನಂಜಯ ಸ್ವಾಮಿ!

ಕುಣಿಗಲ್‌ನ ಬಿದನಗೆರೆ ಶನೇಶ್ವರ ದೇವಾಲಯದಲ್ಲಿ ಸ್ವಾಮಿಗಳಾಗಿರುವ ಧನಂಜಯ ಸ್ವಾಮಿ ಅವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಕುಣಿಗಲ್‌ ವಲಯ ಅರಣ್ಯಾಧಿಕಾರಿ ಜಗದೀಶ್‌ ಅವರು ಬಿದನಗೆರೆ ದೇವಾಲಯಕ್ಕೆ ತೆರಳಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದರು.

ಧನಂಜಯ ಸ್ವಾಮಿ ಅವರಿಗೆ ಸೇರಿದ ಎಲ್ಲ ಚಿನ್ನದ ಚೈನ್‌ಗಳನ್ನು ತಂದಿಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಎಲ್ಲ ಚೈನ್‌ಗಳನ್ನು ಟೇಬಲ್ ಮೇಲೆ ಇಟ್ಟು ಪರಿಶೀಲನೆ ನಡೆಸಲಾಯಿತು. ಈ ವೇಳೆ ಧನಂಜಯಸ್ವಾಮಿ ಸ್ಥಳದಲ್ಲಿ ಹಾಜರಿದ್ದರು. ಆದರೆ, ಅಚ್ಚರಿ ಎಂಬಂತೆ ಅವರು ಧರಿಸುತ್ತಿದ್ದ ಹುಲಿಯುಗುರಿನ ಪೆಂಡೆಂಟ್‌ ನಾಪತ್ತೆಯಾಗಿತ್ತು!.

ಬಿದನಗೆರೆ ಶನೀಶ್ವರ ದೇವಸ್ಥಾನ

ಇದರ ಬಗ್ಗೆ ವಿಚಾರಿಸಿದಾಗ ಅದು ಅರ್ಟಿಫಿಶಿಯಲ್, ತುಂಬಾ ದಿನಗಳಿಂದ ಹಾಕಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು ಹೀಗಾಗಿ ಅದನ್ನ ಎಸೆದಿದ್ದೇನೆ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಧನಂಜಯ ಸ್ವಾಮಿ.

ಧನಂಜಯಸ್ವಾಮಿ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಜಿಲ್ಲಾ ಅರಣ್ಯಾಧಿಕಾರಿ ಅನುಪಮಾ ಅವರು, ಕೃತಕವೇ ಇರಬಹುದು, ಯಾವುದೇ ಇರಬಹುದು. ಅದನ್ನು ಪರಿಶೀಲನೆಗೆ ಒಪ್ಪಿಸಬೇಕು ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಧನಂಜಯ ಗುರೂಜಿ

ಬುಧವಾರ ಮತ್ತೆ ನಮ್ಮ ಅಧಿಕಾರಿಗಳು ಬಿದನಗೆರೆಗೆ ತೆರಳುತ್ತಾರೆ. ಉಗುರನ್ನು ಎಸೆದಿರುವುದಾಗಿ ತಿಳಿಸಿದ್ದಾರೆ. ಆದರೆ, ಕೃತಕ ಉಗುರನ್ನು ಅವರಿಂದ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗುವುದು. ಒಂದು ವೇಳೆ ಇಂದು ಉಗುರು ಸಿಗದಿದ್ದರೆ, ಸರ್ಚ್ ವಾರಂಟ್ ಪಡೆದು ಹುಡುಕಬೇಕಾಗುತ್ತದೆ ಎಂದು ವಿಸ್ತಾರ ನ್ಯೂಸ್‌ಗೆ ಡಿಎಫ್ಒ ಅನುಪಮಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Tiger pawl : ನಟ ದರ್ಶನ್‌, ರಾಕ್‌ಲೈನ್‌, ವಿನಯ್‌ ಗುರೂಜಿಗೂ ಕಂಟಕವಾಗುತ್ತಾ ಹುಲಿ ಉಗುರು!

ಈ ನಡುವೆ, ಮೈಮೇಲೆ ಕೆ.ಜಿ ಗಟ್ಟಲೆ ಬಂಗಾರ ಹಾಕಿಕೊಳ್ಳುವ ಧನಂಜಯ ಸ್ವಾಮಿ ನಿಜಕ್ಕೂ ಧರಿಸಿದ್ದು ಕೃತಕ ಉಗುರೇನಾ ಅಥವಾ ಅವರು ಸುಳ್ಳು ಹೇಳುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ಧನಂಜಯ ಸ್ವಾಮಿ ಅವರ ಬೆನ್ನು ಹತ್ತುತ್ತಿದ್ದಂತೆ ಚಿತ್ರನಟ ದರ್ಶನ್‌, ರಾಜ್ಯ ಸಭಾ ಸದಸ್ಯ ಜಗ್ಗೇಶ್‌, ರಾಕ್‌ಲೈನ್‌ ವೆಂಕಟೇಶ್‌, ಹುಲಿ ಚರ್ಮ ಬಳಸುವ ವಿನಯ ಗುರೂಜಿ ಮೊದಲಾದವರಿಗೆ ಆತಂಕ ಎದುರಾಗಿದೆ.

Exit mobile version