ಮೈಸೂರು: ತಿ. ನರಸೀಪುರದಲ್ಲಿ ಚಿರತೆಗಳು ಮನುಷ್ಯರನ್ನು ಬಲಿ ಪಡೆಯುತ್ತಿರುವ ಜತೆ ಜತೆಗೇ ಹೆಗ್ಗಡದೇವನ ಕೋಟೆಯಲ್ಲಿ ಹುಲಿಗಳು ಜನರ ಬೇಟೆಯಾಡಲು (Tiger attack) ಮುಂದಾಗಿರುವ ಸಂಗತಿ ಆತಂಕ ಮೂಡಿಸಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಗೆ ಬರುವ ಡಿ.ಬಿ ಕುಪ್ಪೆ ಅರಣ್ಯ ಪ್ರದೇಶದಲ್ಲಿ ಶನಿವಾರ ಮಂಜು ಅಲಿಯಾಸ್ ಬೆಟ್ಟದ ಹುಲಿ ಎಂಬ ೧೮ ವರ್ಷದ ಯುವಕನ ಮೇಲೆ ಹುಲಿಯೊಂದು ದಾಳಿ ಮಾಡಿ ಕೊಂದಿತ್ತು. ಭಯ ಹುಟ್ಟಿಸುವ ಸಂಗತಿ ಎಂದರೆ ಮಂಜುವಿನ ಪ್ರಾಣ ತೆಗೆದ ಅದೇ ಜಾಗಕ್ಕೆ ಹುಲಿ ಮತ್ತೆ ಬಂದಿದೆ. ಜನರಿಗೆ ನೇರವಾಗಿ ಕಾಣಿಸಿಕೊಂಡಿದೆ.
ಮಂಜು ಸೌದೆ ತರಲು ಹೋಗಿದ್ದಾಗ ಶನಿವಾರ ಹುಲಿ ದಾಳಿ ಮಾಡಿತ್ತು. ಇದರಿಂದಲೇ ಜನರು ಆತಂಕಿತರಾಗಿದ್ದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಹಾಡಿಯಲ್ಲಿ ಅವಘಡ ಸಂಭವಿಸಿದ್ದು, ಸೌದೆ ಸಂಗ್ರಹಿಸಲು ಒಂದು ಗುಂಪು ಕಾಡಿನತ್ತ ಹೊರಟಿತ್ತು. ಈ ವೇಳೆ ಹುಲಿಯೊಂದು ಏಕಾಏಕಿ ದಾಳಿ ಮಾಡಿದೆ. ಇದರಿಂದ ಎಲ್ಲರೂ ಗಾಬರಿಗೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಹುಲಿಯು ಮಂಜುವಿನ ಮೇಲೆ ಎಗರಿದೆ. ನೇರವಾಗಿ ತನ್ನ ಪಂಜಿನ ಮೂಲಕ ಮಂಜುವಿನ ತಲೆಗೆ ಹೊಡೆದಿದ್ದು, ಅವರ ತಲೆ ಸೀಳಿಹೋಗಿದೆ. ಇತರರು ಅಲ್ಲಿಂದ ಓಡಿ ಪಾರಾಗಿದ್ದಾರೆ.
ಈ ನಡುವೆ, ಮಂಜು ಸಾವನ್ನಪ್ಪಿದ ಅದೇ ಸ್ಥಳದಲ್ಲಿ ಮತ್ತೆ ಹುಲಿ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಭಯಗೊಂಡ ಹಾಡಿ ಜನ ಹುಲಿಯನ್ನು ಕೊಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಪ್ರತಿ ದಿನ ಹುಲಿ ಬಂದು ಈ ರೀತಿ ಬೆದರಿಸಿದರೆ ನಾವು ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಮುಂಜಾನೆಯೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಆಗಲೂ ಅದೇ ಆಗ್ರಹವನ್ನು ಜನರು ಮಂಡಿಸಿದರು. ನೀವು ಸುಮ್ಮನೆ ಗನ್ ಲೋಡ್ ಮಾಡಿಕೊಂಡು ಬಂದರೆ ಸಾಲದು, ಗುಂಡಿಕ್ಕಿ ಕೊಲ್ಲಿ ಎಂದು ಆಗ್ರಹಿಸಿದರು.
ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಬಳಿಕ ಅಧಿಕಾರಿಗಳ ಮನವಿ ಮೇರೆಗೆ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಕಲ್ಲುಗಳನ್ನು ತೆಗೆದು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಅರಣ್ಯ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಇದನ್ನೂ ಓದಿ | Tiger Attack: ಮೈಸೂರಲ್ಲಿ ಚಿರತೆ ದಾಳಿಗೆ ಬಾಲಕ ಮೃತ್ಯು ಬೆನ್ನಲ್ಲೇ ಹುಲಿ ದಾಳಿಗೆ ಯುವಕ ಬಲಿ; ಒಂದೇ ದಿನದ ಅಂತರದಲ್ಲಿ 2 ಸಾವು