ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿರುವುದನ್ನು ಆಕ್ಷೇಪಿಸಿ ಮೈದಾನಕ್ಕೆ ನುಗ್ಗಲು ಯತ್ನಿಸಿದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿರುವ ಹುಬ್ಬಳ್ಳಿ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಅವರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಮೋದ್ ಮುತಾಲಿಕ್ ಅವರು ಆಚರಣೆಯನ್ನು ತಡೆಯುವುದಕ್ಕಾಗಿ ಮೈದಾನಕ್ಕೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ್ದರು. ಅವರು ತಮ್ಮ ತಂಡದೊಂದಿಗೆ ಮೈದಾನದ ಕಡೆಗೆ ಸಾಗುತ್ತಿದ್ದಂತೆಯೇ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು.
ಮೇಯರ್, ಬಿಜೆಪಿ ಮೇಲೆ ಆಕ್ರೋಶ
ʻʻಟಿಪ್ಪು ಒಬ್ಬ ಮತಾಂಧ ವ್ಯಕ್ತಿ. ಯಾವ ಕಾರಣಕ್ಕೂ ಟಿಪ್ಪು ಜಯಂತಿಗೆ ಅವಕಾಶ ಕೊಡುವುದಿಲ್ಲ. ಎಲ್ಲರ ವಿರೋಧದ ನಡುವೆಯೇ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿರುವ ಮೇಯರ್ ಅವರ ನಡೆ ಖಂಡನೀಯ. ಬಿಜೆಪಿ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆʼʼ ಎಂದು ಪ್ರಮೋದ್ ಮುತಾಲಿಕ್ ಬಂಧನದ ವೇಳೆ ಆಕ್ಷೇಪಿಸಿದರು.
ʻʻಮಹಾನ್ ಪುರುಷರ ಜೊತೆ ಟಿಪ್ಪು ಹೋಲಿಕೆ ಸರಿಯಲ್ಲ. ನಾವು ನಾಳೆ ಕನಕ ಜಯಂತಿ ಆಚರಣೆ ಮಾಡುತ್ತೇವೆ. ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ಹೈಕೋರ್ಟ್‌ಗೆ ಪಿಐಎಲ್ ಹಾಕುತ್ತೇವೆʼʼ ಎಂದು ಕೂಡಾ ಅವರು ಹೇಳಿದರು.
ಈದ್ಗಾ ಮೈದಾನದಲ್ಲಿ ಕಳೆದ ಅದೆಷ್ಟೋ ವರ್ಷಗಳಿಂದ ಅದೆಷ್ಟೋ ವರ್ಷಗಳಿಂದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇರಲಿಲ್ಲ. ಆದರೆ, ಇತ್ತೀಚೆಗೆ ಮೈದಾನದಲ್ಲಿ ಗಣೇಶೋತ್ಸವ ಅಚರಣೆಗೆ ಅನುಮತಿ ನೀಡಿದ ಬಳಿಕ ಬೇರೆ ಸಂಘಟನೆಗಳು ಕೂಡಾ ತಮಗೂ ಅವಕಾಶ ಕೊಡಿ ಎಂದು ಕೇಳಿವೆ. ಗಣೇಶೋತ್ಸವ ಆಚರಣೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಹಾಗಾಗಿ ಬೇರೆ ಕಾರ್ಯಕ್ರಮಗಳ ಆಚರಣೆಗೂ ವಿರೋಧಿಸಬಾರದು ಎನ್ನುವ ಆಗ್ರಹ ಜೋರಾಗಿದೆ.
ಮಧ್ಯಾಹ್ನ ೧೨ ಗಂಟೆಗೆ ಕಾರ್ಯಕ್ರಮ
ಎಐಎಂಐಎಂ ಪಕ್ಷದ ಮುಖಂಡ ವಿಜಯ್ ಗುಂಟ್ರಾಳ ಅವರ ನೇತೃತ್ವದಲ್ಲಿ ಮಧ್ಯಾಹ್ನ ೧೨ ಗಂಟೆಯ ಬಳಿಕ ಟಿಪ್ಪು ಜಯಂತಿ ಆಚರಣೆಗೆ ಎಲ್ಲ ರೀತಿಯಲ್ಲೂ ಸಿದ್ಧತೆಗಳು ನಡೆದಿವೆ. ಬಿಜೆಪಿ ಆಡಳಿತ ಇರುವ ಹುಬ್ಬಳ್ಳಿ ಮಹಾನಗರ ಪಾಲಿಕೆ ಮೇಯರ್, ಬಿಜೆಪಿ ನಾಯಕ ಈರೇಶ್ ಅಂಚಟಗೇರಿ ಅವರು ಆಚರಣೆಗೆ ಅವಕಾಶ ನೀಡಿದ್ದಾರೆ. ಆದರೆ, ಇದುವರೆಗೆ ಟಿಪ್ಪು ಆಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ನಾಯಕರೇ ಈಗ ವಿರೋಧಿಸುತ್ತಿದ್ದಾರೆ. ಹೀಗಾಗಿ ಈದ್ಗಾ ಮೈದಾನದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಮೈದಾನ ಎರಡು ಭಾಗವಾಗಿ ವಿಭಜನೆ
ಕಳೆದ ಗಣೇಶೋತ್ಸವ ಸಂದರ್ಭದಲ್ಲಿ ಮಾಡಿದಂತೆ ಈ ಬಾರಿಯೂ ಮೈದಾನವನ್ನು ಎರಡು ಭಾಗ ಮಾಡಲಾಗಿದೆ. ಈದ್ಗಾ ಕಟ್ಟಡ ಇರುವ ಭಾಗ ಒಂದು ಕಡೆ, ಇನ್ನೊಂದು ಕಡೆ ಖಾಲಿ ಮೈದಾನ. ಕಳೆದ ಬಾರಿ ಖಾಲಿ ಮೈದಾನ ಭಾಗದಲ್ಲಿ ಗಣೇಶೋತ್ಸವ ಮಾಡಲಾಗಿತ್ತು. ಈ ಬಾರಿ ಈದ್ಗಾ ಕಟ್ಟಡ ಇರುವ ಜಾಗವನ್ನು ಪ್ರತ್ಯೇಕಿಸಿ ಅಲ್ಲಿ ಖುಲ್ಲಾ ನಡೆಯುವ ಜಾಗವನ್ನು ಟಿಪ್ಪು ಜಯಂತಿಗಾಗಿ ನಿಗದಿ ಮಾಡಲಾಗಿದೆ.
ಗಣೇಶ ಉತ್ಸವದಲ್ಲಿ ಮಾಡಿದ್ದಂತೆ ಮೈದಾನದ ಮಧ್ಯ ಬಟ್ಟೆಯಿಂದ ತಡೆಗೋಡೆ ಕಟ್ಟಲಾಗಿದೆ. ಜತೆಗೆ ಪೊಲೀಸರು ಈದ್ಗಾ ಮೈದಾನದ ಸುತ್ತ ಬ್ಯಾರಿಕೇಡ್ ಅಳವಡಿಸಿದ್ದಾರೆ. ಈಗಾಗಲೇ ಮೈದಾನದಲ್ಲಿ ಟಿಪ್ಪು ಭಾವಚಿತ್ರವನ್ನು ಇಡಲಾಗಿದ್ದು, ಅದಕ್ಕೆ ಪುಷ್ಪವೃಷ್ಟಿಯ ಮೂಲಕ ಆಚರಣೆ ಮಾಡಲಾಗುತ್ತದೆ
ಇದನ್ನೂ ಓದಿ | Tippu jayanti | AIMIM ನಡೆಗೆ ಶ್ರೀರಾಮ ಸೇನೆ ತೀವ್ರ ವಿರೋಧ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಉದ್ವಿಗ್ನ ಸ್ಥಿತಿ