ಹುಬ್ಬಳ್ಳಿ: ಸರ್ಕಾರ ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿದ್ದರೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿರುವುಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಿರೋಧ ಪಕ್ಷ ಕಾಂಗ್ರೆಸ್ ನಾಯಕ ದೊರಾಜ ಮಣಿಕುಂಟ್ಲ ಕೊಠಡಿಯಲ್ಲಿ ಗುರುವಾರ ಟಿಪ್ಪು ಜಯಂತಿ ಆಚರಣೆ ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಸರ್ಕಾರ ರದ್ದುಪಡಿಸಿದೆ. ಆದರೂ ವಿಪಕ್ಷ ನಾಯಕರು ಪಾಲಿಕೆಯ ಸದಸ್ಯರ ಜತೆ ಸೇರಿ ಟಿಪ್ಪು ಜಯಂತಿ ಮಾಡಿರುವುದು ಕಂಡುಬಂದಿದೆ.
ಸರ್ಕಾರದ ನಿಯಮ ಉಲ್ಲಂಘಿಸಿ ಟಿಪ್ಪು ಜಯಂತಿ ಆಚರಣೆ ಮಾಡಿರುವುದಕ್ಕೆ ವಿಪಕ್ಷ ನಾಯಕನಿಗೆ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ. ಟಿಪ್ಪು ಜಯಂತಿ ರದ್ದುಪಡಿಸಿರುವ ಸರ್ಕಾರದ ಆದೇಶ ಪ್ರತಿ ಲಗತ್ತಿಸಿ ನೋಟಿಸ್ ನೀಡಲಾಗಿದೆ.
ಬೆಳಗ್ಗೆ ನಗರದ ಈದ್ಗಾ ಮೈದಾನದಲ್ಲಿ ಎಐಎಂಐಎಂ ಪಕ್ಷ ಟಿಪ್ಪು ಜಯಂತಿ ಆಚರಿಸಿತ್ತು. ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಬುಧವಾರ ಪಾಲಿಕೆ ಅನುಮತಿ ನೀಡಿದಾಗ ಪಾಲಿಕೆ ವಿಪಕ್ಷ ಕಾಂಗ್ರೆಸ್ ನಾಯಕ ದೊರಾಜ ಮಣಿಕುಂಟ್ಲ ವಿರೋಧ ವ್ಯಕ್ತಪಡಿಸಿದ್ದರು. ಮೇಯರ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬೇಕಿದ್ದರೆ ಪಾಲಿಕೆಗೆ ಸೇರಿದ ಬೇರೆ ಜಾಗದಲ್ಲಿ ಟಿಪ್ಪು ಜಯಂತಿ ಮಾಡಲಿ. ಬಿಜೆಪಿಯವರು ರಾಜಕೀಯ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ, ಈಗ ಅವರೇ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಟಿಪ್ಪು ಜಯಂತಿ ಆಚರಿಸಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | Tippu Jayanti| ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಯಶಸ್ವಿ, ನಾಳೆ ಕನಕ ಜಯಂತಿಗೆ ಶ್ರೀರಾಮ ಸೇನೆ ರೆಡಿ!