Site icon Vistara News

Tipu sultan: ನನಗೆ ಮಾಜಿ ಪ್ರಧಾನಿ ದೇವೇಗೌಡ ಗೊತ್ತಿದೆ; ಉರಿಗೌಡ, ನಂಜೇಗೌಡ ಯಾರೆಂದು ಗೊತ್ತೇ ಇಲ್ಲ: ಡಾ.ಕೆ. ಸುಧಾಕರ್‌

Tipu Sultan issue I know former Prime Minister Deve Gowda Dont know who was Urigowda Nanjegowda say Dr Sudhakar

ಚಿಕ್ಕಬಳ್ಳಾಪುರ: ಟಿಪ್ಪು ಸುಲ್ತಾನ್‌ನನ್ನು (Tipu sultan) ಮಂಡ್ಯದ ಉರಿಗೌಡ, ನಂಜೇಗೌಡರು (Urigowda Nanjegowda) ಕೊಂದಿದ್ದಾರೆ ಎಂಬ ಬಿಜೆಪಿ ವಾದವು ರಾಜಕೀಯ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ವಿವಿಧ ಪಕ್ಷಗಳ ನಾಯಕರು ವಾದ-ಪ್ರತಿವಾದಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ (Dr k Sudhakar) ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ನನಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD DeveGowda) ಗೊತ್ತಿದೆ. ಆದರೆ, ಈ ಉರಿಗೌಡ, ನಂಜೇಗೌಡ ಯಾರು ಎಂದು ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.

ಇತಿಹಾಸದಲ್ಲಿ ಉರಿಗೌಡ, ನಂಜೇಗೌಡ ಯಾರು ಎಂಬುದನ್ನು ನಾನು ಕೇಳಿಲ್ಲ. ನನಗೆ ಗೊತ್ತಿರುವವರ ಹೆಸರನ್ನು ಕೇಳಿದರೆ ನಾನು ಹೇಳುತ್ತೇನೆ. ಗೊತ್ತಿಲ್ಲದವರ ಬಗ್ಗೆ ಕೇಳಿದರೆ ನಾನು ಏನು ಮಾತಾಡಲಿ? ಈ ವಿಚಾರವನ್ನು ದೊಡ್ಡ ಸುದ್ದಿ ಮಾಡುವುದು ಬೇಡ. ಚರಿತ್ರೆಯಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅವರಿಗೆ ಮಾನ್ಯತೆ ಸಿಗುತ್ತದೆ. ಗೊತ್ತಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದಕ್ಕೆ ನಾನು ಹೋಗಲ್ಲ ಎಂದು ಶಿಡ್ಲಘಟ್ಟದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಶಂಕುಸ್ಥಾಪನೆಗೆ ಕಾರ್ಯಕ್ರಮದ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

ಮಾಹಿತಿ ಇಲ್ಲವೆಂದ ವಿಜಯೇಂದ್ರ

ರಾಯಚೂರು: ಉರಿಗೌಡ-ನಂಜೇಗೌಡ ಸಿನಿಮಾ ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿರಾಕರಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಒಕ್ಕಲಿಗರಿಗೆ ಪ್ರಾಮುಖ್ಯತೆ ಸಿಗಲೆಂದು ರಾಜೇಗೌಡರು ಹೆಸರು ಸೇರಿಸಿದ್ದರು: ಡಿ.ಕೆ. ಶಿವಕುಮಾರ್‌

ಬೆಳಗಾವಿ: ಒಕ್ಕಲಿಗರಿಗೆ ಪ್ರಾಮುಖ್ಯತೆ ಸಿಗಲಿ ಎಂಬ ಕಾರಣಕ್ಕೆ ಉರಿಗೌಡ-ನಂಜೇಗೌಡ ಹೆಸರನ್ನು ಸೇರಿಸಲಾಗಿದೆ ಎಂದು ಸ್ವತಃ ಇತಿಹಾಸಕಾರ ಹ.ಕ. ರಾಜೇಗೌಡರು ಹೇಳಿದ್ದರು. ಆದರೆ ಇದನ್ನೇ ಆಧಾರವಾಗಿಸಿ ಬಿಜೆಪಿಯವರು ಇತಿಹಾಸವನ್ನು ತಿರುಚುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಇತಿಹಾಸ ತಿರುಚುವಲ್ಲಿ ಬಿಜೆಪಿಯವರದು ಎತ್ತಿದ ಕೈ. ಬಸವಣ್ಣ, ಕುವೆಂಪು, ನಾರಾಯಣ ಗುರು, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಇತಿಹಾಸ ತಿರುಚಿದ್ದ ಬಿಜೆಪಿ, ಈಗ ಉರಿಗೌಡ ನಂಜೇಗೌಡ ಎಂಬ ಹೆಸರಲ್ಲಿ ಒಕ್ಕಲಿಗರ ಇತಿಹಾಸ ತಿರುಚುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: PM Narendra Modi: ಚೀನಿಯರಿಗೂ ಮೋದಿ ಇಷ್ಟ, ಅವರನ್ನು ಯಾವ ಅಡ್ಡ ಹೆಸರಿನಿಂದ ಕರೆಯುತ್ತಾರೆ?

ಜಾತಿ, ಕೋಮುಗಳ ನಡುವೆ ದ್ವೇಷ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಸತ್ತು ಎರಡು ಶತಮಾನಗಳೇ ಕಳೆದಿವೆ. ಈಗ ಉರಿಗೌಡ, ನಂಜೇಗೌಡರನ್ನು ಬಿಜೆಪಿ ಸೃಷ್ಟಿಸಿದೆ. ಮಂಡ್ಯ ಜಿಲ್ಲೆಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಾ. ದೇ. ಜವರೇಗೌಡ ಅವರ ಸಂಪಾದಕತ್ವದಲ್ಲಿ ‘ಸುವರ್ಣ ಮಂಡ್ಯ ‘ ಎಂಬ ಸಂಚಿಕೆ ತರಲಾಗಿತ್ತು. ಅದರ ಪರಿಷ್ಕೃತ ಸಂಚಿಕೆಯಲ್ಲಿ ಸಂಶೋಧಕ ಹ.ಕ. ರಾಜೇಗೌಡರು ಮಂಡ್ಯ ಐವತ್ತು; ಒಂದು ಪಕ್ಷಿ ನೋಟ ಎಂಬ ಲೇಖನ ಬರೆದಿದ್ದರು ಎಂದು ತಿಳಿಸಿದರು.

ಅದರಲ್ಲಿ ದೊಡ್ಡನಂಜೆಗೌಡ, ಉರಿಗೌಡ ಎಂಬುವರು ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತಿದ್ದರು ಎಂದು ಉಲ್ಲೇಖಿಸಿದ್ದರು. ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ ಮಾಡಿರುವ ಬಗ್ಗೆ ಕೆಲವರು ರಾಜೇಗೌಡರನ್ನು ಪ್ರಶ್ನೆ ಮಾಡಿದಾಗ ಒಕ್ಕಲಿಗರಿಗೆ ಪ್ರಾಮುಖ್ಯತೆ ಸಿಗಲಿ ಎಂದು ಹೀಗೆ ಬರೆದಿದ್ದೇನೆ, ಇರಲಿ ಬಿಡಿ ಎಂದು ಹೇಳಿದ್ದರು. ಈ ವಿಚಾರವಾಗಿ ಸ್ಪಷ್ಟನೆ ನೀಡಲು ಈಗ ಹ.ಕ. ರಾಜೇಗೌಡರು ಜೀವಂತವಾಗಿ ಇಲ್ಲ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Karnataka Election 2023: ಜೀವರಾಜ್‌ಗೆ ಪಕ್ಷೇತರ ಬಿಸಿ; ಅಭ್ಯರ್ಥಿ ಕಣಕ್ಕಿಳಿಸಲು ಹಿಂದು ಬ್ರಿಗೇಡ್‌ ಸಜ್ಜು

ಅನೇಕ ಇತಿಹಾಸ ತಜ್ಞರು, ಸಂಶೋಧಕರು ಉರಿಗೌಡ, ನಂಜೇಗೌಡ ಕೇವಲ ಕಾಲ್ಪನಿಕ ಪಾತ್ರ ಎಂದು ಹೇಳುತ್ತಿದ್ದರೂ ಬಿಜೆಪಿಯವರು ಮಾತ್ರ ಇದನ್ನು ಬಿಡಲು ರೆಡಿ ಇಲ್ಲ. ಇತಿಹಾಸದ ಯಾವ ದಾಖಲೆಯಲ್ಲಿ ಉರಿಗೌಡ ನಂಜೇಗೌಡ ಟಿಪ್ಪು ಸುಲ್ತಾನ್ ಕೊಂದರು ಎಂಬುದು ಇದೆ ನೀವೇ ಹೇಳಿ ನೋಡೋಣ. ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನನನ್ನು ಒಕ್ಕಲಿಗರು ಕೊಂದರು, ಆ ಮೂಲಕ ಒಕ್ಕಲಿಗರು ದೇಶವಿರೋಧಿಗಳು, ಕೊಲೆಗಡುಕರು ಎಂದು ಅವರ ಗೌರವ, ಸ್ವಾಭಿಮಾನಕ್ಕೆ ಮಸಿ ಬಳಿಯಲಾಗುತ್ತಿದೆ ಎಂದು ಗುಡುಗಿದರು.

ಬಿಜೆಪಿಯವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾರನ್ನು ಬೇಕಾದರೂ ಸೃಷ್ಟಿಸುತ್ತಾರೆ, ಯಾರ ಮನೆಯನ್ನು ಬೇಕಾದರೂ ಹಾಳು ಮಾಡುತ್ತಾರೆ. ಸಿ.ಟಿ ರವಿ ಹಾಗೂ ಅಶ್ವತ್ಥನಾರಾಯಣ್ ಎಂಬ ಅವಿವೇಕಿಗಳು ಈ ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಕ್ಕಲಿಗ ಸಮುದಾಯದ ವಿರುದ್ಧ ಬೇರೆಯವರನ್ನು ಎತ್ತಿ ಕಟ್ಟುತ್ತಿದ್ದಾರೆ. ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಸಚಿವ ಅಶ್ವತ್ಥನಾರಾಯಣ ಅವರು ಚಿತ್ರಕತೆ ಬರೆಯುತ್ತಾರಂತೆ. ಇವರಿಗೆ ಪಾಠ ಮಾಡಿದ ಶಿಕ್ಷಕರೇ ನಾವು ಇವರಿಗೆ ಈ ವಿಚಾರ ಹೇಳುಕೊಟ್ಟಿಲ್ಲದ ಇತಿಹಾಸದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹಲವು ಸಂಘಟನೆಗಳು ನನಗೆ ಒತ್ತಡ ಹೇರುತ್ತಿದ್ದು, ಇತಿಹಾಸ ತಿರುಚುವ ಈ ಷಡ್ಯಂತ್ರ ಖಂಡಿಸಿ, ಅದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಈ ಹೋರಾಟಕ್ಕೆ ಒಕ್ಕಲಿಗ ಸಮುದಾಯದ ಮಾರ್ಗದರ್ಶಕರು, ತಿಲಕಪ್ರಾಯರಾದ ಆದಿಚುಂಚನಗಿರಿಯ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡುತ್ತೇನೆ. ಸ್ವಾಮೀಜಿಗಳು ಈ ಹೋರಾಟದ ನೇತೃತ್ವ ವಹಿಸಬೇಕು. ಒಕ್ಕಲಿಗ ಸಮುದಾಯದ ಮುಖಂಡರ ಸಭೆ ಕರೆದು ಹೋರಾಟದ ರೂಪುರೇಷೆ ಬಗ್ಗೆ ಮಾರ್ಗದರ್ಶನ ಮಾಡಬೇಕು. ಸ್ವಾಮೀಜಿಗಳು ಈ ವಿಚಾರದಲ್ಲಿ ಯಾರ ಜತೆಗೂ ಸಂಧಾನ ಮಾಡಿಕೊಳ್ಳಬಾರದು. ಅವರು ಸಂಧಾನಕ್ಕೆ ಕರೆದರೂ ಅದಕ್ಕೆ ಹೋಗಬಾರದು. ಒಂದು ವೇಳೆ ಸಂಧಾನಕ್ಕೆ ಮುಂದಾದರೆ ಈ ಒಕ್ಕಲಿಗ ಸಮಾಜಕ್ಕೆ ಅಗೌರವ ಮಾಡಿದಂತೆ ಆಗುತ್ತದೆ. ಬಿಜೆಪಿ ಅಪಪ್ರಚಾರದ ವಿರುದ್ಧ ಹೋರಾಟ ಮಾಡಿ ಸಮಾಜದ ಸ್ವಾಭಿಮಾನ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿಯು ಇತಿಹಾಸ ತಿರುಚಿ, ಜಾತಿ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಯತ್ನದ ವಿರುದ್ಧ ಹೋರಾಟ ಮಾಡಬೇಕು. ಇದು ನಿರ್ಮಲಾನಂದ ಶ್ರೀಗಳು, ನಂಜಾವಧೂತ ಸ್ವಾಮೀಜಿಗಳು ಸೇರಿದಂತೆ ಎಲ್ಲ ಧರ್ಮದ ಶ್ರೀಗಳ ಜವಾಬ್ದಾರಿ. ಸಿ.ಟಿ ರವಿ ಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಅಪಮಾನ ಮಾಡಿಲ್ಲ. ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿಲ್ಲ ಎಂದು ಹೇಳಿ ಅಪಮಾನ ಮಾಡಿದ್ದಾರೆ. ಈ ವಿಚಾರವಾಗಿ ಮುಂದೆ ಇನ್ನೊಂದು ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ: KMF TUMUL Recruitment 2023 : ಹಾಲು ಒಕ್ಕೂಟದಲ್ಲಿ 219 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಉರಿಗೌಡ ನಂಜೇಗೌಡ ವಿರೋಧಿಸುವವರು ದೇಶದ್ರೋಹಿಗಳು ಎಂಬ ಸಿ. ಟಿ ರವಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವ ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಅಶ್ವತ್ಥನಾರಾಯಣ ಅವರು ದೇಶ, ರಾಜ್ಯ, ಒಕ್ಕಲಿಗ ಹಾಗೂ ಹಿಂದೂ ವಿರೋಧಿಗಳು’ ಎಂದು ಹರಿಹಾಯ್ದರು.

Exit mobile version