ಬೆಂಗಳೂರು: ಕೇರಳದಿಂದ ಹೊರಟಿರುವ ರಾಹುಲ್ ಗಾಂಧಿ ಅವರ ʼಭಾರತ್ ಜೊಡೊʼ ಯಾತ್ರೆ ಇಂದು ಗುಂಡ್ಲುಪೇಟೆಯ ಮೂಲಕ ಕರ್ನಾಟಕ ಪ್ರವೇಶ ಮಾಡಲಿದೆ. ರಾಹುಲ್ ಅವರ ಅದ್ಧೂರಿ ಸ್ವಾಗತಕ್ಕೆ ಕೈ ಪಡೆ ಸಿದ್ಧತೆ ಮಾಡಿಕೊಂಡಿದೆ.
ಗುಂಡ್ಲುಪೇಟೆಯಿಂದ ಪ್ರವೇಶ ಮಾಡಿ, ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಹೀಗೆ ಏಳು ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದೆ. ರಾಗಾ ಹಾಗೂ ನಾಯಕರು ಒಟ್ಟು 511 ಕಿಮೀ ಹೆಜ್ಜೆ ಹಾಕಲಿದ್ದಾರೆ. ಇಂದು ಗುಂಡ್ಲುಪೇಟೆಯಲ್ಲಿ ಸ್ವಾಗತ ಸಮಾವೇಶ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ತಮಿಳುನಾಡಿನ ಗೂಡಲೂರಿನಿಂದ ಯಾತ್ರೆ ಆಗಮಿಸಲಿದೆ. ಗುಂಡ್ಲುಪೇಟೆಯ ಕೆಕ್ಕನಹಳ್ಳ ಚೆಕ್‌ಪೋಸ್ಟ್ ಮೂಲಕ ರಾಜ್ಯ ಪ್ರವೇಶ ಮಾಡಲಿರುವ ರಾಹುಲ್ ಗಾಂಧಿಗೆ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಬಳಿ ಕೈ ನಾಯಕರು ಪೂರ್ಣಕುಂಭ ಮೆರವಣಿಗೆ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರಲಿದ್ದಾರೆ. ವೀರಗಾಸೆ ಹಾಗೂ ಬುಡಕಟ್ಟು ಸಂಪ್ರದಾಯದ ನೃತ್ಯ ನಡೆಯಲಿವೆ. ಸರಿಸುಮಾರು 60ರಿಂದ 70 ಸಾವಿರಕ್ಕೂ ಹೆಚ್ಚು ಜನ ಹೆಜ್ಜೆ ಹಾಕುವ ಸಾಧ್ಯತೆ ಇದೆ.
ಅಂಬೇಡ್ಕರ್ ಭವನದ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಎಂ.ಬಿ ಪಾಟೀಲ್ ಸೇರಿದಂತೆ ಕೈ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 35 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಸ್ವಾಗತ ಸಮಾವೇಶದ ವೇದಿಕೆ ಮೇಲೆ 200ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಕೆಳಗೆ 3 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ.
ನಂತರ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ನಾಲ್ಕು ಕಿ.ಮೀ ಪಾದಯಾತ್ರೆ ನಡೆಯಲಿದ್ದು, ಗುಂಡ್ಲುಪೇಟೆ ತಾಲ್ಲೂಕು ವೀರನಪುರ ಕ್ರಾಸ್ ಬಳಿ ಮಧ್ಯಾಹ್ನದ ಊಟದ ವ್ಯವಸ್ಥೆಯಿದೆ. ಊಟದ ಬಳಿಕ 2 ಗಂಟೆಗೆ ಆದಿವಾಸಿಗಳು ಹಾಗು ಆಕ್ಸಿಜನ್ ದುರಂತದ ಸಂತ್ರಸ್ತರ ಜೊತೆ ಸಂವಾದ ನಡೆಯಲಿದೆ. ಸಂಜೆ 4 ಗಂಟೆಗೆ ಪಾದಯಾತ್ರೆ ಪುನರಾರಂಭಗೊಂಡು, ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ರಾತ್ರಿ 7 ಗಂಟೆಗೆ ವಿಶ್ರಾಂತಿ ಪಡೆಯಲಿದೆ.
ಯಾತ್ರೆ ಎಲ್ಲೆಲ್ಲಿ ಸಂಚಾರ ಮಾಡಲಿದೆ?
ಗುಂಡ್ಲುಪೇಟೆಯಿಂದ ಬೇಗೂರು: ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಅಕ್ಟೋಬರ್ 1ರಂದು ಬೇಗೂರಿನಿಂದ ಪಾಂಡವಪುರ ಪ್ರವೇಶಿಸಲಿದ್ದು, ಹೆಗ್ಗಡದೇವನಕೋಟೆ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ, ವಿರಾಜಪೇಟೆ, ನಂಜನಗೂಡು, ಹುಣಸೂರು, ರಾಮನಗರ, ಕನಕಪುರ, ಚನ್ನಪಟ್ಟಣದವರು ಭಾಗವಹಿಸಲಿದ್ದಾರೆ. ವರುಣ ಕ್ಷೇತ್ರದಲ್ಲಿ ಒಂದು ದಿನ ಯಾತ್ರೆ ನಡೆಯಲಿದೆ. ಅಕ್ಟೋಬರ್ 2ರಂದು ಕಡಕೋಳದಿಂದ ಮೈಸೂರು ಸಿಟಿಯಲ್ಲಿ ಸಂಚಾರ ನಡೆಯಲಿದೆ.
ಇದನ್ನೂ ಓದಿ | ಭಾರತ್ ಜೋಡೋ ಯಾತ್ರೆ | ರಾಹುಲ್ ಗಾಂಧಿಯೇ ಸೋತು ಸುಣ್ಣ ಆಗಿದ್ದಾರೆ, ಇನ್ನೆಂಥ ಹುರುಪು ತುಂಬ್ತಾರೋ ನೋಡೋಣ ಎಂದ ಸಿ.ಟಿ. ರವಿ
ಶ್ರೀರಂಗಪಟ್ಟಣದಲ್ಲಿ ಒಂದು ದಿನ ಸಂಚಾರ ಮಾಡಲಿದೆ. ಅಕ್ಟೋಬರ್ 4ರಂದು ಮೈಸೂರು ಸಿಟಿಯಿಂದ ಟಿಎಸ್ ಚತ್ರಾವರೆಗೆ ಯಾತ್ರೆ ನಡೆಯಲಿದೆ. ಅಕ್ಟೋಬರ್ 04 ಮತ್ತು 05 ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆ ಯಾತ್ರೆಗೆ ಬ್ರೇಕ್. ಅಕ್ಟೋಬರ್ 6ರಂದು ಮೇಲುಕೋಟೆಯ ಮಹದೇಶ್ವರ ದೇವಸ್ಥಾನದಿಂದ ಬ್ರಹ್ಮದೇವರಹಳ್ಳಿ. ಅಲ್ಲಿಂದ ಗೋವಿಂದರಾಜ್ ನಗರ, ಶಾಂತಿ ನಗರ, ಗಾಂಧಿನಗರ, ವಿಜಯನಗರ, ಅರಕಲಗೂಡು, ಮಂಡ್ಯ, ನಾಗಮಂಗಲ, ಕೃಷ್ಣರಾಜಪೇಟೆ, ಮಾಗಡಿ. ಅಕ್ಟೋಬರ್ 7ರಂದು ನಾಗಮಂಗಲದ ಬ್ರಹ್ಮದೇವರಹಳ್ಳಿಯಿಂದ ಬೆಳ್ಳೂರು ಟೌನ್. ಅಕ್ಟೋಬರ್ 8ರಂದು ನೆಲಮಂಗಲ ಆದಿಚುಂಚನಗಿರಿ ಮಠದಿಂದ ಕಲ್ಲೂರ ಕ್ರಾಸ್. ಅಕ್ಟೋಬರ್ 09, 10ರಂದು ತುರುವೇಕೆರೆ, ಮಾಯಸಂದ್ರ, ಕೆ.ಬಿ.ಕ್ರಾಸ್ ಮೂಲಕ ಚಿಕ್ಕನಾಯಕನಹಳ್ಳಿ, ಹುಳಿಯಾರು ಮಾರ್ಗದ ಮುಖೇನ ಹಿರಿಯೂರು ತಲುಪಲಿದೆ. ಅಕ್ಟೋಬರ್ 12ರಂದು ಹಿರಿಯೂರಿನ ಅನೆಸಿದ್ರಿದಿಂದ ಬಲೆನಹಳ್ಳಿ. ಅಕ್ಟೋಬರ್ 13ರಂದು ಯಾತ್ರೆಗೆ ಬ್ರೇಕ್. 14ರಂದು ಬಲೆನಹಳ್ಳಿಯಿಂದ ಸಿದ್ದಾಪುರಕ್ಕೆ ಯಾತ್ರೆ.. 15ರಂದು ಚಳ್ಳಕೆರೆಯಿಂದ ಹೀರೆಹಳ್ಳಿಯ ಟೋಲ್ ಪ್ಲಾಜಾ. 16ರಂದು ಮೊಳಕಾಲ್ಮೂರುನ ಬೊಮ್ಮಗೊಂಡನಕೆರೆಯಿಂದ ಮೊಳಕಾಲ್ಮೂರು. 17ರಂದು ರಾಂಪುರದಿಂದ ಬಳ್ಳಾರಿ ಹಲೆಕುಂಡಿ. 18ರಂದು ಯಾತ್ರೆಗೆ ಬ್ರೇಕ್. 19ರಂದು ಬಳ್ಳಾರಿಯ ಹಲೆಕುಂಡಿಯಿಂದ ನ್ಯೂ ಮೋಕದವರೆಗೆ. ಬಳ್ಳಾರಿಯಲ್ಲಿ ದೊಡ್ಡಮಟ್ಟದ ಬಹಿರಂಗ ಸಭೆ ಆಯೋಜನೆಯಾಗಿದ್ದು, ರಾಯಚೂರಿನಲ್ಲಿ ಐಕ್ಯತಾ ಯಾತ್ರೆಯಲ್ಲಿ ಒಟ್ಟು 24 ಕ್ಷೇತ್ರದ ಜನ ಭಾಗಿಯಾಗಲಿದ್ದಾರೆ. ರಾಯಚೂರು ಮೂಲಕ ಬೇರೆ ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶ ಮಾಡಲಿದೆ.
ಇದನ್ನೂ ಓದಿ | ಭಾರತ್ ಜೋಡೋ ಯಾತ್ರೆ | ಕೇರಳ, ಊಟಿ ಕಡೆಗೆ ಹೋಗುವವರು ಗಮನಿಸಿ, ಸಂಚಾರ ಮಾರ್ಗ ಬದಲಾಗಲಿದೆ