ಶಿರಸಿ: ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಜನ ಮೃತಪಟ್ಟ ಘಟನೆಯ ಹೊರತಾಗಿಯೂ ಕೆಲವರು ಇನ್ನೂ ಪಾಠ ಕಲಿತಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ಇದು. ಉತ್ತರ ಕನ್ನಡ ಜಿಲ್ಲೆಯ ತೂಗು ಸೇತುವೆಯೊಂದರಲ್ಲಿ ಪ್ರವಾಸಿಗರು ಕಾರು ಚಲಾಯಿಸುವ ದುಸ್ಸಾಹಸಕ್ಕೆ ಮುಂದಾಗಿದ್ದು, ಸ್ಥಳೀಯರು ಅವರನ್ನು ತಡೆದಿದ್ದಾರೆ.
ಪ್ರವಾಸಿಗರ ತಂಡವೊಂದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಮಂಗಳವಾರ ಮುಂಜಾನೆ ಕಾರು ಚಲಾಯಿಸಲು ಮುಂದಾಗಿದೆ. ತೂಗು ಸೇತುವೆ ಮೇಲೆ ಸಾಕಷ್ಟು ದೂರದವರೆಗೆ ಹೋಗಿದ್ದಾರೆ.
ಈ ವೇಳೆ ಸ್ಥಳೀಯರು ಅದನ್ನು ಆಕ್ಷೇಪಿಸಿ, ಮುಂದೆ ಸಾಗದಂತೆ ಅಡ್ಡ ನಿಂತಿದ್ದಾರೆ. ಸೇತುವೆಯಲ್ಲಿ ಸಾಗಿ ಸುಮಾರು ಮುಂದೆ ಬಂದ ಕಾರನ್ನು ಸ್ಥಳೀಯರು ತಡೆದು, ಬಂದ ದಾರಿಗೆ ಹಿಂದಕ್ಕೇ (ರಿವರ್ಸ್ ಗೇರ್‌ನಲ್ಲಿ) ಕಳುಹಿಸಿದ್ದಾರೆ. ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಜನ ಮೃತಪಟ್ಟ ಸಂಗತಿಯಿಂದಲೂ ಕೆಲವರು ಎಚ್ಚೆತ್ತುಕೊಂಡಿಲ್ಲ. ಕಾರು ಚಲಾಯಿಸಿ ಸೇತುವೆಗೆ ಹಾನಿಯಾಗಿ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ ಎಂದು ಪ್ರವಾಸಿಗರು, ಸ್ಥಳೀಯರು ಪ್ರಶ್ನಿಸಿದ್ದಾರೆ.
ಘಟನೆಯ ವೇಳೆ ಕಾರಿನಲ್ಲಿದ್ದವರು ಅನುಚಿತವಾಗಿ ವರ್ತಿಸಿ, ದರ್ಪ ತೋರಿದ್ದಾರೆ ಎಂದು ಸ್ಥಳೀಯರು ಹಾಗೂ ಸ್ಥಳೀಯರೇ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.
ಪ್ರಸಿದ್ಧ ಯಾತ್ರಾಸ್ಥಳ ಜೊಯಿಡಾ ತಾಲ್ಲೂಕಿನ ಉಳವಿಯಿಂದ ಬರುವ ಅನೇಕ ಮಂದಿ ಶಿವಪುರದ ತೂಗು ಸೇತುವೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯದ ಕಾರಣ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಹಲವು ಗ್ರಾಮಸ್ಥರಿಗೆ ಇದು ದೈನಂದಿನ ಜೀವನದ ಅಗತ್ಯ ಸೌಕರ್ಯವಾಗಿದೆ. ಆದರೆ, ಇದು ವಾಹನ ಸಂಚಾರಕ್ಕೆ ಹೇಳಿ ಮಾಡಿಸಿದ ಸೇತುವೆಯಲ್ಲ.
ಪ್ರವಾಸ ಬಂದ ಕೆಲವರು ಸೇತುವೆಯ ಮೇಲೆ ಇಕ್ಕಟ್ಟಾದ ಜಾಗದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಾರೆ. ಕಾರು ಬಂದಾಗ ಸೇತುವೆಯಲ್ಲಿ ನಡೆದುಕೊಂಡು ಹೋಗಲು ಕೂಡ ಜಾಗವಿರುವುದಿಲ್ಲ. ಇದೊಂದು ದುಃಸ್ಸಾಹಸ, ಕಾರನ್ನು ಅದರಲ್ಲಿ ತರಬೇಡಿ ಎಂದು ಗ್ರಾಮದ ಹಿರಿಯರು ಕಿವಿಮಾತು ಹೇಳಿದರೂ ಧಿಕ್ಕರಿಸುತ್ತಿದ್ದಾರೆ. ಅಂಥವರ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೇತುವೆಗೆ ಅಪಾಯವಾಗದಂತೆ ಕಾಪಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Morbi Bridge Collapse | ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಫಿಟ್ನೆಸ್ ಸರ್ಟಿಫಿಕೇಟ್ ಇರಲಿಲ್ಲವೇ?