ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧದ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ಹಿನ್ನೆಲೆಯಲ್ಲಿ ಗುರುವಾರ (ಜುಲೈ 21) ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ (Traffic in Bangalore) ಆಗುವ ಸಾಧ್ಯತೆಯಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಆರಂಭಗೊಂಡು ರಾಜಭವನದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ರ‍್ಯಾಲಿ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಆರಂಭಗೊಳ್ಳುವ ಈ ಬೃಹತ್ ಮೆರವಣಿಗೆಯಲ್ಲಿ ಐದು ಸಾವಿರಕ್ಕೂ ಅಧಿಕ ಜನ ಭಾಗಿಯಾಗಲಿದ್ದು, ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ. ಹೀಗಾಗಿ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕಾಗಿ ಬದಲಿ ರಸ್ತೆಗಳಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಭದ್ರತೆಯ ನಿಟ್ಟಿನಲ್ಲಿ 5 ಜನ ಎಸಿಪಿ, 15 ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ 30 ಪಿಎಸ್ಐ, 600 ಸಿಬ್ಬಂದಿ ಸೇರಿದಂತೆ 5 ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.
ಎಲ್ಲೆಲ್ಲಿ ಟ್ರಾಫಿಕ್ ಜಾಮ್?
ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ 60 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, 10 ಗಂಟೆ ಬಳಿಕ ಟ್ರಾಫಿಕ್ ಡೈವರ್ಷನ್ ಮಾಡುವುದಾಗಿ ತಿಳಿದುಬಂದಿದೆ. ಮೆಜೆಸ್ಟಿಕ್ ಕಡೆಯಿಂದ ಸಂಚರಿಸುವ ವಾಹನಗಳು ಮೌರ್ಯ ಸರ್ಕಲ್, ಹಳೇ ಜೆಡಿಎಸ್ ಕಚೇರಿ, ರೇಸ್ ಕೋರ್ಸ್ ರಸ್ತೆ, ಸಿಐಡಿ ಜಂಕ್ಷನ್, ಮಹಾರಾಣಿ ಜಂಕ್ಷನ್, ಕೆ.ಆರ್ ಸರ್ಕಲ್ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.
ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಟ್ರಾಫಿಕ್ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಸಂಚಾರಿ ಪೊಲೀಸರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: National Herald Case | ಇಂದು ಸೋನಿಯಾ ಗಾಂಧಿ ವಿಚಾರಣೆ, ನಡೆಯಲಿದೆ ದೇಶಾದ್ಯಂತ ಪ್ರತಿಭಟನೆ