ಬೆಂಗಳೂರು: ಕಾರು ಚಾಲನೆ ವೇಳೆ ಈವರೆಗೆ ಇದ್ದ ನಿಯಮಗಳು ಬದಲಾಗಿವೆ. ಕಾರು ಚಾಲಕ ಮತ್ತು ಪಕ್ಕದ ಆಸನದಲ್ಲಿದ್ದವರಿಗಷ್ಟೇ ಸೀಮಿತವಾಗಿದ್ದ ಸೀಟ್ ಬೆಲ್ಟ್ ಧಾರಣೆ ನಿಯಮ ಈಗ ಹಿಂಬದಿ ಸವಾರರಿಗೂ ಅನ್ವಯವಾಗುತ್ತದೆ. ಒಂದು ವೇಳೆ ಹಿಂಬದಿ ಸವಾರರು ಸೀಟ್ ಬೆಲ್ಟ್ ಹಾಕದಿದ್ದರೆ ಸಾವಿರ ರೂಪಾಯಿ ದಂಡವನ್ನು ವಿಧಿಸುವುದಾಗಿ ಸಂಚಾರಿ ಪೊಲೀಸರು (Traffic Rules) ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಈ ಹಿಂದೆ 500 ರೂಪಾಯಿ ದಂಡದ ಪ್ರಮಾಣವನ್ನೂ ಏರಿಸಿದ್ದಾರೆ.
ಕಾರು ಚಾಲನೆಗೆ ಸಂಬಂಧಪಟ್ಟಂತೆ ಹೊಸ ಆದೇಶವನ್ನು ಬಿಡುಗಡೆ ಮಾಡಿದ್ದು, ಕಾರಿನ ಹಿಂಬದಿ ಕುಳಿತು ಪ್ರಯಾಣ ಮಾಡುವ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗಿದೆ. ಹಾಗಾಗಿ ಕಾರಿನಲ್ಲಿ ಪ್ರಯಾಣ ಮಾಡುವ ಎಲ್ಲರಿಗೂ ಸೀಟ್ ಬೆಲ್ಟ್ ಕಡ್ಡಾಯವಾದಂತೆ ಆಗಿದೆ.
ಈ ಹಿಂದೆ ಫ್ರಂಟ್ ಸೀಟ್‌ನಲ್ಲಿ ಕುಳಿತುಕೊಳ್ಳುವ ಇಬ್ಬರಿಗೂ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗಿತ್ತು. ಆದರೆ, ಈಗ ಹೊರಡಿಸಿರುವ ಆದೇಶದನ್ವಯ ಕಾರಿನಲ್ಲಿ ಪ್ರಯಾಣಿಸುವ ಎಲ್ಲರೂ ಸೀಟ್ ಬೆಲ್ಟ್ ಧರಿಸಬೇಕು. ಕಾರಿನಲ್ಲಿ ಪ್ರಯಾಣಿಕರ ಸಂಖ್ಯೆ 8 ಮೀರದಂತೆ ವಾಹನಗಳಲ್ಲಿ ಇರುವ ಎಲ್ಲ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು. ಇದರ ಜವಾಬ್ದಾರಿಯನ್ನು ಕಾರು ಚಾಲಕನೇ ವಹಿಸಿಕೊಳ್ಳಬೇಕಿದ್ದು, ಯಾವುದೇ ಸವಾರರು ಸೀಟ್ ಬೆಲ್ಟ್ ಧರಿಸದೇ ಇದ್ದಲ್ಲಿ ದಂಡದ ಮೊತ್ತವನ್ನು ಚಾಲಕನೇ ಕಟ್ಟಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಜತೆಗೆ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವವರಿಗೆ 500 ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ದಂಡದ ಪ್ರಮಾಣವನ್ನು 1 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಕಮೀಷನರೇಟ್ ಮತ್ತು ಎಸ್‌ಪಿಗಳಿಗೆ ಹೊಸ ನಿಯಮವನ್ನು ಜಾರಿಗೆ ತರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ | Traffic Violation | ಟ್ರಾಫಿಕ್ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ರೀಲ್ಸ್ ಸ್ಟಾರ್‌ಗಳ ಹೊಸ ಪ್ಲ್ಯಾನ್