ಮಂಡ್ಯ: ನಾಗಮಂಗಲದ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಕಂ ಕಂಡಕ್ಟರ್ (Driver cum Conductor) ಒಬ್ಬರನ್ನು ವರ್ಗಾವಣೆ ಮಾಡಿಸಿ ಅವರು ಆತ್ಮಹತ್ಯೆ ಯತ್ನಿಸಿದ ಬಳಿಕ ವಿವಾದದ ಕೇಂದ್ರ ಬಿಂದುವಾದ ರಾಜ್ಯದ ಕೃಷಿ ಸಚಿವ ಚಲುವರಾಯ ಸ್ವಾಮಿ (Agriculture Minister Chaluvarayaswamy) ಅವರಿಗೆ ಇನ್ನೊಂದು ವರ್ಗಾವಣೆ ವಿವಾದ ಬೆನ್ನು ಹತ್ತಿದೆ. ಜೆಡಿಎಸ್ (JDS Nagamangala) ಪರ ಕೆಲಸ ಮಾಡಿದ್ದಕ್ಕೆ ಲೈನ್ ಮ್ಯಾನ್ (Lineman Transfer) ಒಬ್ಬರನ್ನು ಕೃಷಿ ಸಚಿವರೇ ವರ್ಗಾವಣೆ ಮಾಡಿಸಿದ್ದಾರೆ ಎಂಬ ಇನ್ನೊಂದು ಆರೋಪ (Transfer Controversy) ಕೇಳಿಬಂದಿದೆ.
ನಾಗಮಂಗಲ ತಾಲೂಕಿನ ವ್ಯಕ್ತಿಯೊಬ್ಬರು ಕೆಇಬಿ ಸಿಬ್ಬಂದಿ ಜೊತೆ ಮಾತನಾಡಿರುವ ಆಡಿಯೊವನ್ನು ನಾಗಮಂಗಲ ಜೆಡಿಎಸ್ ಹರಿಬಿಟ್ಟಿದೆ. ಈ ಸಂಭಾಷಣೆಯಲ್ಲಿ ಕೃಷ್ಣೇ ಗೌಡ ಎಂಬ ರೈತ ಮತ್ತು ಕೆಇಬಿ ಸಿಬ್ಬಂದಿ ಮಾತನಾಡುತ್ತಿದ್ದು, ಅದರ ನಡುವೆ ಚಲುವರಾಯ ಸ್ವಾಮಿ ಅವರು ಜೆಡಿಎಸ್ ಪರ ಕೆಲಸ ಮಾಡಿದ ಕಾರಣಕ್ಕಾಗಿ ಲೈನ್‌ಮ್ಯಾನ್ ಒಬ್ಬರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂಬ ಮಾತೂ ಬರುತ್ತದೆ. ಈ ವಿಡಿಯೊ ಈಗ ವೈರಲ್ ಆಗಿದೆ.
ರೈತರೊಬ್ಬರು ವಿದ್ಯುತ್ ಇಲಾಖೆ ಕಚೇರಿಗೆ ಫೋನ್ ಮಾಡಿ, ʻʻಕರೆಂಟ್ ಪದೇ ಪದೇ ಹೋಗ್ತಿದೆ, ಮಕ್ಕಳು ಓದೋದು ಬೇಡ್ವಾ.? ಜಿಟಿ ಜಿಟಿ ಮಳೆಗೆ ಗಂಟೆಗಟ್ಟಲೇ ಕರೆಂಟ್ ತೆಗಿದ್ರೇ ಹೇಗೆ?ʼʼ ಎಂದು ಪ್ರಶ್ನಿಸುತ್ತಾರೆ. ಆಗ ಸಮಸ್ಯೆ ಏನಾಗಿದೆ ಎಂದು ವಿವರಿಸುವ ಜತೆಗೆ ಉಳಿದ ಸಮಸ್ಯೆಗಳ ಬಗ್ಗೆಯೂ ಕೆಇಬಿ ಸಿಬ್ಬಂದಿ ತಿಳಿಸುತ್ತಾರೆ.
ʻʻಟ್ರಬಲ್ ಏನಾಗಿದೆ ಎಂದು ಲೈನ್‌ಮ್ಯಾನ್ ಚೆಕ್ ಮಾಡ್ತಾವ್ನೆ. ಒಬ್ಬ ರಜಾ ಹಾಕವ್ನೇ. ಭೀಮನಹಳ್ಳಿ ಲೈನ್ ಮೇನ್ ಹುಡುಗನನ್ನ ಜೆಡಿಎಸ್‌ಗೆ ಮಾಡ್ದಾ ಅಂತಾ ಟ್ರಾನ್ಸ್‌ಫರ್ ಮಾಡವ್ರೆʼʼ ಎಂದು ಸಿಬ್ಬಂದಿ ಹೇಳುತ್ತಾರೆ.
ಆಗ ರೈತ ಕೃಷ್ಣೇ ಗೌಡರು, ʻʻಒಟ್ನಲ್ಲಿ ಜೆಡಿಎಸ್ ಗೆ ಮಾಡ್ದವರು ಯಾರೂ ಕೆಲಸದಲ್ಲಿ ಇರಂಗಿಲ್ವʼʼ ಎಂದು ಕೇಳುತ್ತಾರೆ. ʻʻನೋಡಪ್ಪ ಹಿಂಗ್ ಮಾಡವ್ರೇʼ.. ಹಿಂಗ್ ಮಾಡಿ ಮಾಡಿ ಲೈನ್ ಟ್ರಬಲ್ ಆದ್ರೆ ಕೆಲಸ ಮಾಡೋಕೆ ಆಗಲ್ಲʼʼ ʼ ಎನ್ನುತ್ತಾರೆ ಕೆಇಬಿ ಸಿಬ್ಬಂದಿ.
ʻʻಅಲ್ಲ ಸರ್ ಜೆಡಿಎಸ್ ಆಗ್ಲಿ, ಕಾಂಗ್ರೆಸ್ ನವರೇ ಆಗ್ಲಿ ಕರೆಂಟ್ ಕೊಡಬೇಕಲ್ವʼʼ ಎಂದು ಕೃಷ್ಣೇಗೌಡ ಪ್ರಶ್ನಿಸುತ್ತಾರೆ. ಆಗ, ʻʻಅಧಿಕಾರಿಗಳು ಕೇಳೋಕೆ ಆಗುತ್ತಾ, ನೀವೇ ಕೇಳಿʼʼ ಎನ್ನುತ್ತಾರೆ ಸಿಬ್ಬಂದಿ.
ಈ ಸಂಭಾಷಣೆಯ ಬಳಿಕ ʻʻಇರಿ ಫೇಸ್ ಬುಕ್ ಗೆ ಹಾಕ್ತೀನಿ.. ಕಾಲ್ ರೆಕಾರ್ಡ್ ಮಾಡ್ಕೊಂಡಿದ್ದೀನಿʼʼ ಎನ್ನುತ್ತಾರೆ ರೈತ ಕೃಷ್ಣೇಗೌಡ.
ಇದೇ ಮಾತನ್ನು ಮುಂದುವರಿಸುವ ಕೃಷ್ಣೇ ಗೌಡ, ʻʻಫ್ರೀ ಕರೆಂಟ್ ಅಂತ ಅರ್ಧಬರ್ಧ ಕರೆಂಟ್ ಕೊಡಿ ಎಂದು ಸರ್ಕಾರ ಆದೇಶ ಬಂದಿದ್ಯಾ ಏನೂ.?ʼʼ ಎಂದು ಕೇಳುತ್ತಾರೆ. ಬಳಿಕ ಎಚ್ಚೆತ್ತ ಸಿಬ್ಬಂದಿ ʻʻನಮಗೇನು ಆದೇಶ ಬಂದಿಲ್ಲʼʼ ಎಂದು ಪೋನ್ ಕರೆ ಕಟ್ ಮಾಡುತ್ತಾರೆ.
ಸಾರ್ವಜನಿಕ ಹಾಗೂ ಕೆಇಬಿ ಸಿಬ್ಬಂದಿ ಮಾತುಕತೆ ಆಡಿಯೋವನ್ನು ನಾಗಮಂಗಲ ಜೆಡಿಎಸ್ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದೆ. ಈ ಮಾತುಕತೆಯಲ್ಲಿ ಎಲ್ಲೂ ಕೃಷಿ ಸಚಿವರ ಉಲ್ಲೇಖ ಮಾಡಲಾಗಿಲ್ಲ.
ಆದರೆ, ನಾಗಮಂಡಲ ಜೆಡಿಎಸ್ ನಾಯಕರು ಸಂಭಾಷಣೆಯನ್ನು ಪೋಸ್ಟ್ ಮಾಡುವಾಗ ʻಕೃಷಿ ಸಚಿವರ ದ್ವೇಷದ ರಾಜಕಾರಣʼ ಎಂದು ಬರೆದಿದ್ದಾರೆ. ಅಂತೂ ನಾಗಮಂಗಲದಲ್ಲಿ ಮತ್ತಷ್ಟು ತಾರಕ್ಕಕ್ಕೇರಿದೆ ಜೆಡಿಎಸ್-ಕಾಂಗ್ರೆಸ್ ಆಡಿಯೋ, ವಿಡಿಯೊ ಫೈಟ್.