Site icon Vistara News

Transfer Racket: ಮತ್ತೆ ಸರ್ಕಾರದಿಂದ ವರ್ಗಾವಣೆ ದಂಧೆ? ಸಚಿವ ತಿಮ್ಮಾಪುರ ವಿರುದ್ಧ ಇಡಿಗೆ ದೂರು

RB Thimmapura

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತ್ತೆ ವರ್ಗಾವಣೆ ದಂಧೆ (Transfer Racket) ಆರೋಪ ಕೇಳಿಬಂದಿದೆ. ಈ ಬಾರಿ ರಾಜ್ಯ ಸಚಿವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (enforcement directorate- ED) ದೂರು ಸಹ ನೀಡಲಾಗಿದೆ.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದ್ದು, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವರು ದೂರು ದಾಖಲು ಮಾಡಿದ್ದಾರೆ. ಅಬಕಾರಿ ಇಲಾಖೆಯ ಡಿಸಿ, ಡಿವೈಎಸ್ಪಿಯಿಂದ ಹಣ ಪಡೆದು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂಬ ಆರೋಪ ದಾಖಲಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಹಣ ಹೊಂದಿಸಲು ಲಂಚ ಪಡೆಯಲಾಗುತ್ತಿದೆ. ವರ್ಗಾವಣೆಗಾಗಿ ಇಲಾಖಾಧಿಕಾರಿಗಳಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 18 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಚಿವರ ಖಾತೆಗೆ 13 ಕೋಟಿ ರೂ. ಅಕ್ರಮವಾಗಿ ಬಂದಿದೆ ಎಂದು ತಿಳಿಸಲಾಗಿದೆ.

ಲಂಚದ ಹಣದಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಉಳಿದ ಹಣ ಇಲಾಖೆಯ ಸಹಾಯಕ ಕಾರ್ಯದರ್ಶಿ ಸೇರಿದಂತೆ ಕೋಲಾರ ಡಿಸಿ ಬಸವರಾಜ ಸಂದಿಗ್ವಾಡ್, ರಂಗಪ್ಪ, ಬೆಂಗಳೂರು ದಕ್ಷಿಣ ಅಬಕಾರಿ ಡಿಸಿ ವಿವೇಕ್ ಖಾತೆಗೆ ತಲುಪಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಇದಕ್ಕೆಲ್ಲಾ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಇಡಿ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದೂರು ನೀಡಲಾಗಿದೆ.

ತಿಂಗಳ ಹಿಂದೆ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಕೇಳಿಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ವರ್ಗಾವಣೆ ವಿಚಾರದಲ್ಲಿ ಕೈಯಾಡಿಸುತ್ತಿದ್ದಾರೆ ಎಂದು, ಅವರು ಸಾರ್ವಜನಿಕವಾಗಿ ಫೋನ್‌ನಲ್ಲಿ ಆಡಿದ ಸಂಭಾಷಣೆಯನ್ನು ಇಟ್ಟುಕೊಂಡು ಆರೋಪಿಸಲಾಗಿತ್ತು. ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್‌ನ ವಿರುದ್ಧ ಮುಗಿಬಿದ್ದಿತ್ತು. ಇದೀಗ ಮತ್ತೆ ವರ್ಗಾವಣೆ ದಂಧೆ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Yathindra Siddaramaiah : ಯತೀಂದ್ರ‌ ವರ್ಗಾವಣೆ ದಂಧೆ; ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು

Exit mobile version