ಬೀದರ್: ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಜಾಬ್‌ಗೆ ಅರ್ಜಿ ಸಲ್ಲಿಸಿ ಹಣ ಕಳೆದುಕೊಂಡ ಉಪನ್ಯಾಸಕಿಯೊಬ್ಬರು ಬೇಸತ್ತು ಪ್ರಾಣ ಕಳೆದುಕೊಂಡಿದ್ದಾರೆ. ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ನಾಲ್ಕು ದಿನದ ಹಿಂದೆ ನಡೆದಿದೆ. ಇಸ್ಲಾಂಪೂರ ಗ್ರಾಮದ ಆರತಿ ಕನಾಟೆ (28) ಎಂಬವರೇ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ.
ನಗರದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರಿಗೆ ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಜಾಬ್‌ನ ಒಂದು ಆಫರ್ ಕಂಡಿದೆ. ರಾಜಗೋಪಾಲ್ ಕೆ. ಟ್ಯೂಟರ್ ಎಂಬ ವ್ಯಕ್ತಿಯ ನಂಬರ್‌ಗೆ ಕರೆ ಮಾಡಿ ಮಾತನಾಡಿದ್ದಾರೆ. ಆತ ಜಾಬ್ ಕೊಡಿಸುವುದಾಗಿ ಹೇಳಿ ಮೊದಲು ಒಂದು ಸಾವಿರ, ಬಳಿಕ ಹತ್ತು ಸಾವಿರ.. ಹೀಗೆ ಒಟ್ಟು ೨ ಲಕ್ಷ ರೂ. ಪಡೆದುಕೊಂಡಿದ್ದಾನೆ. ಹಂತ ಹಂತವಾಗಿ ಯಾವುದೇ ಸಂಶಯ ಬಾರದಂತೆ ಹಣ ಪಡೆದುಕೊಂಡ ಆತ ಕೊನೆಗೆ ಇನ್ನು ೮೨ ಸಾವಿರ ರೂ. ಕೊಟ್ಟರೆ ಉಳಿದೆಲ್ಲ ಅಮೌಂಟ್ ಮರಳಿ ಬರುತ್ತದೆ ಎಂದು ನಂಬಿಸಿದ್ದಾನೆ.
ಆದರೆ, ಅಷ್ಟು ಹೊತ್ತಿಗೇ ತನ್ನ ಸಂಬಳ, ಇದ್ದ ದುಡ್ಡು ಮತ್ತು ಸಹ ಉಪನ್ಯಾಸಕಿಯರು ಸೇರಿದಂತೆ ಹಲವರಿಂದ ಹಣ ಪಡೆದು ಇಲ್ಲಿ ತೊಡಗಿಸಿದ್ದ ಆರತಿ ಅವರಿಗೆ ಇನ್ನು ಹಣ ಹೊಂದಿಸುವ ದಾರಿಯೇ ಕಂಡಿಲ್ಲ. ಹೀಗಾಗಿ ಅವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇಷ್ಟೆಲ್ಲ ವಿಚಾರಗಳನ್ನು ಸ್ವತಃ ತಮ್ಮ ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದಾರೆ. ತಾನು ಯಾರ ಬಳಿ ಹಣ ಪಡೆದಿದ್ದೇನೆ ಎಂಬುದರ ವಿವರವನ್ನು ಕೂಡಾ ಅವರು ನೀಡಿದ್ದಾರೆ. ತಂದೆಗೆ ಕ್ಷಮಾಪಣೆಯನ್ನೂ ಕೇಳಿದ್ದಾರೆ.
ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್ ನಲ್ಲಿ ಗ್ರಾಮದ ವ್ಯಾಪ್ತಿಯ ನಿರ್ದಿಷ್ಟ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ತಂಡ, ಬಾವಿಯಿಂದ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಆರತಿ ಅವರ ತಂದೆ ಶಿವರಾಜ ಕನಾಟೆ ಅವರು ನೀಡಿದ ದೂರಿನ ಮೇರೆಗೆ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ |Blackmail | ಖಾಸಗಿ ವಿಡಿಯೊ: ಸಿಸಿಬಿ ಪೊಲೀಸರ ಹೆಸರಿನಲ್ಲಿ ಗೆಳೆಯನಿಗೇ ಖೆಡ್ಡಾ! 15 ಲಕ್ಷ ರೂ., ಚಿನ್ನ ಸುಲಿಗೆ!