ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಚಾರದಲ್ಲಿ ಪೈಪೋಟಿ ಇರುವುದು ಅನೇಕ ಬಾರಿ ಸಾಬೀತಾಗಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಪೈಪೋಟಿ ಹೊಸ ತಿರುವು ಪಡೆಯುತ್ತಲೇ ಇದೆ. ಇದೀಗ ಡಿ.ಕೆ. ಶಿವಕುಮಾರ್ ವಿವರವಾಗಿ ಮಾತನಾಡಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ 75ನೇ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 3 ರಂದು ʼಸಿದ್ದರಾಮೋತ್ಸವʼ ಆಚರಣೆ ಮೂಲಕ ಅವರನ್ನು ಕಾಂಗ್ರೆಸ್ ನಾಯಕರನ್ನಾಗಿ ಬಿಂಬಿಸುವ ಕಾರ್ಯ ನಡೆದಿದೆ. ಬರೊಬ್ಬರಿ ಒಂದು ತಿಂಗಳಿಗೂ ಮೊದಲೆ ದಿನಾಂಕ ನಿಗದಿಪಡಿಸಿಕೊಂಡು ತಮ್ಮ ಪರವಾಗಿರುವವರನ್ನೆಲ್ಲ ಒಗ್ಗೂಡಿಸಿಕೊಳ್ಳುವ ಕಾರ್ಯಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಸಿದ್ದರಾಮೋತ್ಸವದಲ್ಲಿ ತಮ್ಮ ಪಾತ್ರ ಏನೂ ಇಲ್ಲ, ಇದನ್ನು ಬೆಂಬಲಿಗರು, ಹಿತೈಷಿಗಳು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿದ್ದರಾಮೋತ್ಸವದಲ್ಲಿ ಭಾಗವಹಿಸುವಂತೆ ರಾಹುಲ್ ಗಾಂಧಿ ಅವರನ್ನು ಇತ್ತೀಚೆಗಿನ ಸಂಧಾನ ಸಭೆ ಸಂದರ್ಭದಲ್ಲಿ ಸಿದ್ದರಾಮಯ್ಯ ಆಹ್ವಾನಿಸಿದರು. ಆದರೆ ಈ ವಿಚಾರ ತಮಗೆ ತಿಳಿದೇ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಭಾನುವಾರ ತಿಳಿಸಿದ್ದಾರೆ.
ಅವರ ಬೆಂಬಲಿಗರು ಉತ್ಸವ ಮಾಡುತ್ತಿದ್ದಾರೆ. ನಮ್ಮನ್ನೂ ಕರೆದಿದ್ದಾರೆ ಎಂದಿರುವ ಶಿವಕುಮಾರ್, ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿರು ಕುರಿತು ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಸಹ ಹಾಸನದಲ್ಲಿ ಇದೇ ಧಾಟಿಯಲ್ಲಿ ಮಾತನಾಡಿದ್ದು, ಅವರ ಹಿತೈಷಿಗಳು ಮಾಡುತ್ತಿದ್ದಾರೆ. ನಮ್ಮನ್ನೂ ಆಹ್ವಾನಿಸಿದ್ದಾರೆ ಎಂದು ಅಂತರ ಕಾಯ್ದುಕೊಂಡಿದ್ದಾರೆ. ಇದೆಲ್ಲದರ ನಡುವೆ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಿದ್ದು, ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಕಾಲದಲ್ಲಿ ಸೋತಿದ್ದೆವು
ಶೃಂಗೇರಿ ಶಾರದಾ ಪೀಠದ ಕಿರಿಯ ಸ್ವಾಮೀಜಿ ಶ್ರೀ ವಿಧುಶೇಖರ ಭಾರತಿಯವರನ್ನು ಸದಾಶಿವನಗರದ ತಮ್ಮ ಗೃಹದಲ್ಲಿ ಬರಮಾಡಿಕೊಂಡು ಗುರುವಂದನೆ ಸಲ್ಲಿಸಿ ಬೀಳ್ಕೊಟ್ಟ ನಂತರ ಸುದ್ದಿಗಾರರ ಜತೆ ಡಿ.ಕೆ. ಶಿವಕುಮಾರ್ ಮಾತನಾಡಿದರು.
“ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಯವರು ಎಷ್ಟು ಗೆದ್ದಿದ್ದಾರೋ ನಾವೂ ಅಷ್ಟೇ ಗೆದ್ದಿದ್ದೇವೆ. ಪರಿಷತ್ ಚುನಾವಣೆಯಲ್ಲೂ ಪಕ್ಷ ಉತ್ತಮ ಸಾಧನೆ ಮಾಡಿದೆ. ನಮ್ಮ ಸರ್ಕಾರ ಇದ್ದಾಗ (ಸಿದ್ದರಾಮಯ್ಯ ಆಡಳಿತ) ಮಂಡ್ಯ, ತುಮಕೂರಿನಲ್ಲಿ ಪಕ್ಷ ಸೋತಿತ್ತು. ಈ ಬಾರಿ ಗೆದ್ದಿದ್ದೇವೆ. ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ನಾವು ಗೆದ್ದಿರಲಿಲ್ಲ. ಈಗ ಗೆದ್ದಿದ್ದೇವೆ. ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದರು. ಈಗ ವಿದ್ಯಾವಂತರು, ಶಿಕ್ಷಕರು ಹಾಗೂ ಪ್ರಜ್ಞಾವಂತರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದು ಜನರ ಅಭಿಪ್ರಾಯ ಏನು ಎಂಬುದನ್ನು ತಿಳಿಸುತ್ತಿದೆ” ಎಂದಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗಲೂ ಸೋತಿದ್ದ ಕಾಂಗ್ರೆಸ್, ತಮ್ಮ ಅವಧಿಯಲ್ಲಿ ಗೆದ್ದಿದೆ ಎಂದು ಈ ಮೂಲಕ ಪರೋಕ್ಷವಾಗಿ ತಿವಿದಿದ್ದಾರೆ.
ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುವುದೇ ಎಂಬ ಪ್ರಶ್ನೆಗೆ, “ರಾಹುಲ್ ಗಾಂಧಿ ಹಾಗೂ ಪಕ್ಷದ ವರಿಷ್ಠರು ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದು ತೀರ್ಮಾನಿಸಿದ್ದಾರೆ” ಎಂದು ತಿಳಿಸಿದ್ದಾರೆ. ನವದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಜತೆ ಸಂಧಾನ ಸಭೆ ನಡೆಸಲಾಯಿತೆ ಎಂಬ ಪ್ರಶ್ನೆಗೆ ಸುದೀರ್ಘ ಉತ್ತರವನ್ನು ಡಿ.ಕೆ. ಶಿವಕುಮಾರ್ ನೀಡಿದ್ದಾರೆ.
“ನಾನು ಮಂತ್ರಿ ಸ್ಥಾನ ಸಿಗದಿದ್ದಾಗಲೆ ಉಸಿರು ಎತ್ತಲಿಲ್ಲ. ಅಸಮಾಧಾನ ಹೊರಹಾಕಲಿಲ್ಲ. ದೇವೇಗೌಡರ ವಿರುದ್ಧ ಹೆಣ್ಣುಮಗಳನ್ನು ನಿಲ್ಲಿಸಿ ಸೋಲಿಸಿದೆ ಎಂದು ಧರ್ಮ ಸಿಂಗ್ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ. ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಆಗ ಸುಮ್ಮನಿದ್ದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ನೀಡಲಿಲ್ಲ. ಆಗಲೂ ನಾನು ಮಾತನಾಡಲಿಲ್ಲ. ನಾವು ಸಿದ್ದರಾಮಯ್ಯ ಅವರ ಪರವಾಗಿಯೂ ಹೋರಾಟ ಮಾಡಿದೆವು. ನಂತರ ಸೋನಿಯಾ ಗಾಂಧಿ ಅವರು ಹೇಳಿದ ನಂತರ ಸಂಪುಟದಲ್ಲಿ ಸ್ಥಾನ ಸಿಕ್ಕಿತು. ನಾನು ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಬೇಕು ಎಂದು ಬೆಂಬಲಿಸಿದೆ. ಸಿದ್ದರಾಮಯ್ಯ ಅವರು ಒಂದು ಕಡೆ ಸೋತಿದ್ದಾಗಲೂ, ಸಿದ್ದರಾಮಯ್ಯ ಅವರೇ ಶಾಸಕಾಂಗ ಪಕ್ಷದ ನಾಯಕರಾಗಬೇಕು ಎಂದು ನಾನು ಹಾಗೂ ಪರಮೇಶ್ವರ್ ಹೇಳಿದೆವು. ನಾನು ಯಾವತ್ತೂ ಪಕ್ಷದ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲ. ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಪಕ್ಷ ಇದ್ದರೆ ಮಾತ್ರ ನಾವು. ಇದನ್ನೇ ನಾನು ಮೊದಲಿಂದಲೂ ಪ್ರತಿಪಾದಿಸುತ್ತಿದ್ದೇನೆ. ಎಲ್ಲಾ ಕಾರ್ಯಕರ್ತರಿಗೂ ಇದನ್ನೇ ಹೇಳುತ್ತಿದ್ದೇನೆ” ಎಂದರು.
ಒಂದೇ ಹೇಳಿಕೆಯಲ್ಲಿ, ತಮಗೆ ಸಚಿವ ಸ್ಥಾನ ತಪ್ಪಿಸಿದ್ದು, ಸೋನಿಯಾ ಗಾಂಧಿ ಅವರ ಕೃಪಾಕಟಾಕ್ಷದಿಂದ ಸಚಿವ ಸ್ಥಾನ ಸಿಕ್ಕಿದ್ದನ್ನು ಶಿವಕುಮಾರ್ ಹೇಳಿದರು.
ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನ ಅಲ್ಲವೇ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮ ಪಕ್ಷಕ್ಕೆ ಏನೆಲ್ಲಾ ಅನುಕೂಲವಾಗುತ್ತದೆಯೋ ಅದನ್ನೆಲ್ಲ ಮಾಡೋಣ. ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ, ಆ ಕಾರ್ಯಕ್ರಮ ಮಾಡಬೇಕು ಎಂದು ಅವರ ಅಭಿಮಾನಿಗಳು ಕೇಳುತ್ತಾರೆ. ಪರಮೇಶ್ವರ್ ಅವರ ಅಭಿಮಾನಿಗಳು ಬಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಬೇಕು ಎಂದು ಕೇಳುತ್ತಾರೆʼ ಎಂದು ಮೂಲ ಕಾಂಗ್ರೆಸಿಗರನ್ನು ವಿಜೃಂಭಿಸುವ ಕಾರ್ಯಕ್ರಮಗಳೂ ಮುಂದಿನ ದಿನದಲ್ಲಿ ನಡೆಯುತ್ತವೆ ಎಂದು ತಿಳಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸೋಣ ಎಂದು ಹೇಳಿದರೂ ಸಾಮೂಹಿತಕೆಯಲ್ಲಿ ವೈಯಕ್ತಿಕ ಪ್ರತಿಷ್ಠೆ ಕಾಂಗ್ರೆಸ್‌ನಲ್ಲಿ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ಪಕ್ಷದೊಳಗಿನ ಈ ಪೈಪೋಟಿ ಮತ್ತಷ್ಟು ಹೆಚ್ಚಳವಾಗಲಿದೆ ಎಂಬ ಮುನ್ಸೂಚನೆಯನ್ನು ಈ ಬೆಳವಣಿಗೆಗಳು ನೀಡಿವೆ.
ಇದನ್ನೂ ಓದಿ | ವರುಷ ಎಂಟು, ಅವಾಂತರಗಳು ನೂರೆಂಟು: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಪುಸ್ತಕ