ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಎಂಬ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ವಿಭಿನ್ನವಾಗಿ ವ್ಯಾಖ್ಯಾನಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ,
ಜೆ.ಸಿ.ಮಾಧುಸ್ವಾಮಿ ಈ ಮಾತನ್ನು ಬೇರೆ ರೀತಿಯಲ್ಲಿ ಹೇಳಿದ್ದಾರೆ. ವಿಭಿನ್ನ ಸಂದರ್ಭದಲ್ಲಿ ಇದನ್ನು ಮಾತನಾಡಿದ್ದಾರೆ. ಈ ಬಗ್ಗೆ ನಾನು ಮಾಧುಸ್ವಾಮಿ ಅವರ ಬಳಿ ಮಾತನಾಡಿದ್ದೇನೆ. ಅವರು ಮಾತನಾಡಿರುವ ಅರ್ಥವೇ ಬೇರೆ.
ಮೂರು ತಿಂಗಳ ಮೊದಲು ನಡೆದ ಕೊ ಆಪರೇಟಿವ್ ಸೊಸೈಟಿ ವಿಚಾರದಲ್ಲಿ ಹೀಗೆ ಹೇಳಿದ್ದಾರೆ. ಹೀಗಾಗಿ ಯಾವುದೇ ತಪ್ಪು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಏನೂ ತೊಂದರೆ ಇಲ್ಲ, ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Audio Viral | ಸರ್ಕಾರ ನಡೀತಾ ಇಲ್ಲ, ಕಾಲ ತಳ್ತಾ ಇದ್ದೀವಿ ಅಷ್ಟೆ: ಮುಜುಗರ ತಂದ ಸಚಿವ ಮಾಧುಸ್ವಾಮಿ ಮಾತು
ಈ ಸರ್ಕಾರ ನಡೀತಾ ಇಲ್ಲ, ಹೇಗೊ ಎಂಟು ತಿಂಗಳು ಕಳೆದರೆ ಸಾಕು ಎಂದು ಮ್ಯಾನೇಜ್ ಮಾಡ್ತಾ ಇದ್ದೀವಿ ಎಂದು ಹಿರಿಯ ರಾಜಕಾರಣಿ, ಸರ್ಕಾರದಲ್ಲಿ ಕಾನೂನು ಸಚಿವರಾಗಿರುವ ಜೆ.ಸಿ. ಮಾಧುಸ್ವಾಮಿ ಆಡಿರುವ ಮಾತು ಇತ್ತೀಚೆಗೆ ವೈರಲ್ ಆಗಿತ್ತು. ಭಾಸ್ಕರ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಧುಸ್ವಾಮಿಯವರಿಗೆ ಕರೆ ಮಾಡಿದ್ದ ಆಡಿಯೊ ಇದು. ಚನ್ನಪಟ್ಟಣದಿಂದ ಭಾಸ್ಕರ್ ಎಂಬ ಸಾಮಾಜಿಕ ಕಾರ್ಯಕರ್ತರು ಮಾತನಾಡಿದ್ದರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಹ ಇದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿ, ಬಹುಶಃ ಮಾಧುಸ್ವಾಮಿ ಅವರ ಇಲಾಖೆಯಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ಹೇಳಿದ್ದರು. ಈಗಾಗಲೆ ಅನೇಕ ವಿವಾದಗಳಿಂದ ಹೊರಬರುತ್ತಿರುವ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಹೊಸ ಸಂಕಷ್ಟವನ್ನು ತಂದೊಡ್ಡಿದೆ.
ಇದನ್ನೂ ಓದಿ | ಸಚಿವ ಮಾಧುಸ್ವಾಮಿ ಹೇಳಿಕೆ ವೈರಲ್: ಸಚಿವ ಸೋಮಶೇಖರ್ ಫುಲ್ ಗರಂ