Site icon Vistara News

Road Accident : ತುಮಕೂರಿನ ಪ್ರತ್ಯೇಕ ಕಡೆ ಭೀಕರ ಅಪಘಾತ; 7 ವರ್ಷದ ಬಾಲಕಿ ಸೇರಿ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವು

Road accident at isolated places in Tumkur Two bikers including a 7-year-old girl died on the spot

ತುಮಕೂರು: ಡಿವೈಡರ್‌ಗೆ ಕಾರು ಡಿಕ್ಕಿಯಾಗಿ 7 ವರ್ಷದ ಬಾಲಕಿ ದಾರುಣವಾಗಿ (Road Accident) ಮೃತಪಟ್ಟಿದ್ದಾಳೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಘಟನೆ ನಡೆದಿದೆ. ಶಾಲಿನಿ (7)‌ ಮೃತ ದುರ್ದೈವಿ. ಬಸವೇಶ್ (16) ಎಂಬ ಬಾಲಕನಿಗೆ ಗಂಭೀರ ಗಾಯವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮಲ್ಲಿಕಾರ್ಜುನ್ (51) ಎಂಬುವವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಂಡೈ ವೆನ್ಯು ಕಾರು ರಸ್ತೆ ಬದಿಯ ಡಿವೈಡರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಛಿದ್ರಗೊಂಡಿದೆ. ಸ್ಥಳಕ್ಕೆ ತುಮಕೂರು ಎಸ್‌ಪಿ ಅಶೋಕ್‌ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಎರಡು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ; ಸವಾರರಿಬ್ಬರು ಸಾವು

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೌತಮ್ (26) ಹಾಗೂ ಅನಿಲ್ (26) ಸ್ಥಳದಲ್ಲೇ ಮೃತಪಟ್ಟವರು. ಮಧುಗಿರಿ ತಾಲೂಕಿನ ತೆರೆಯೂರು ಮೂಲದ ಗೌತಮ್ ಹಾಗೂ ಬಂದ್ರೆಹಳ್ಳಿ ಗ್ರಾಮದ ಅನಿಲ್ ಮೃತ ದುರ್ದೈವಿಗಳು. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೆಎಸ್ಆರ್‌ಟಿಸಿ ಡಿಪೋ ಹಾಗೂ ಜಡಗೊಂಡನಹಳ್ಳಿ ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳು ಮಧುಗಿರಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ನಿಪ್ಪಾಣಿಯಲ್ಲಿ ಸರಣಿ ಅಪಘಾತ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ ಬಳಿ‌ 8 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಸರಣಿ ಅಪಘಾತಕ್ಕೆ ಸ್ಥಳದಲ್ಲೆ ಇಬ್ಬರು ದುರ್ಮರಣ ಹೊಂದಿದ್ದು, 6 ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ಸಾವಿನ‌ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳಿಗೆ ನಿಪ್ಪಾಣಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಂಟೇನರ್‌ ವಾಹನದ ಚಾಲಕನ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಮೂರು ಕಾರು, ಎರಡು ಲಾರಿ, ಒಂದು ಕಂಟೇನರ್ ಹಾಗೂ ಬೈಕ್‌ಗಳಿಗೆ ಗುದ್ದಿದೆ. ಒಬ್ಬ ಬೈಕ್ ಸವಾರ ಹಾಗೂ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಿಪ್ಪಾಣಿ ಶಹರ ಪೊಲೀಸರು ದೌಡಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version