Site icon Vistara News

‌Self Harming : ಒಂದೇ ಕಂತು ಬಾಕಿ ಇಟ್ಟಿದ್ದಕ್ಕೆ ಮಹಿಳೆ ಪ್ರಾಣವನ್ನೇ ಬಲಿ ಪಡೆದ ಫೈನಾನ್ಸ್‌ ಮಾಫಿಯಾ

Tumkur Baddi Mafia Pushpalata suicide

ತುಮಕೂರು: ತುಮಕೂರಿನಲ್ಲಿ ಫೈನಾನ್ಸ್‌ ಮಾಫಿಯಾ (Finance Mafia) , ಬಡ್ಡಿ ಮಾಫಿಯಾಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿರುವುದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಕೆಲವು ವಾರಗಳ ಹಿಂದೆ ಬಡ್ಡಿ ಮಾಫಿಯಾ ಮತ್ತು ಪಕ್ಕದ ಮನೆಯವರು ಸೇರಿ ನೀಡಿದ ಕಿರುಕುಳ ಸಹಿಸಲಾಗದೆ ಮುಸ್ಲಿಂ ಕುಟುಂಬವೊಂದರ ಐವರು ಪ್ರಾಣ ಕಳೆದುಕೊಂಡಿದ್ದರು. ಇದೀಗ ಫೈನಾನ್ಸ್ ನೌಕರರ (Finance staff) ಕಿರುಕುಳಕ್ಕೆ ಮನನೊಂದು (Harassment by Finance staff) ಮಹಿಳೆಯೊಬ್ಬರು ಆತ್ಮಹತ್ಯೆ (Woman Ends Life) ಮಾಡಿಕೊಂಡಿದ್ದಾರೆ (Self Harming).

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮದ್ಲೇಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಪುಪ್ಪಲತಾ(36) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ಪುಷ್ಪಲತಾ ಕುಟುಂಬ

ಪುಷ್ಪಲತಾ ಅವರು ಬಜಾಜ್ ಫೈನಾನ್ಸ್ ನಿಂದ 90,000 ರೂ. ಸಾಲ ಪಡೆದಿದ್ದರು. ತಿಪಟೂರು ನಗರದಲ್ಲಿರುವ ಬಜಾಜ್ ಫೈನಾನ್ಸ್ ಕಂಪನಿಗೆ ಪುಷ್ಪಲತಾ ಅವರು ಅತ್ಯಂತ ಪ್ರಾಮಾಣಿಕವಾಗಿ ಕಂತು ಪಾವತಿಸಿದ್ದರು. ಅದರಲ್ಲಿ ಕೊನೆಯ ಒಂದು ಕಂತು ಬಾಕಿ ಇತ್ತು. ಈ ಒಂದು ಕಂತಿಗಾಗಿ ಫೈನಾನ್ಸ್‌ ಸಿಬ್ಬಂದಿ ಮನೆಯ ಮುಂದೆ ಬಂದು ಗಲಾಟೆ ಮಾಡಿದ್ದರು. ಇದರಿಂದ ಅಪಮಾನಿತರಾದ ಪುಷ್ಪಲತಾ ನೋವಿನಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಹರ್ಷವರ್ಧನ್ ಮತ್ತು ಮತ್ತೊಬ್ಬ ವ್ಯಕ್ತಿಯಿಂದ ಕಿರುಕುಳ ಎಂದು ಮಹಿಳೆಯ ಪತಿ ಕೃಷ್ಣ ಕುಮಾರ್‌ ಅವರು ಆರೋಪಿಸಿದ್ದಾರೆ. ಈ ನಡುವೆ ಸ್ಥಳೀಯರು ನಿಮ್ಮ ಕಿರುಕುಳಕ್ಕೆ ಮಹಿಳೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಬಜಾಜ್‌ ಫೈನಾನ್ಸ್‌ ಕಚೇರಿಗೆ ಕರೆ ಮಾಡಿ ಹೇಳಿದರೆ ಸತ್ರೆ ಸಾಯ್ತಾರೆ, ನಮ್ಮ ಹಣ ಕೊಡಿ ಎಂದು ಆವಾಜ್ ಹಾಕ್ತಿರುವ ಫೈನಾನ್ಸ್ ನೌಕರರು ಆವಾಜ್‌ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಜೀವ ಹೋಗಿದೆ ಎಂದರೂ ಹಣವೇ ಮುಖ್ಯ ಎನ್ನುವ ಅವರ ಧಾಟಿಗೆ ಜನರು ಸಿಟ್ಟಾಗಿದ್ದಾರೆ. ಫೈನಾನ್ಸ್ ನೌಕರ ಹರ್ಷವರ್ಧನ್ ಪ್ರಾಣ ಹೋಗಿದೆ ಎಂದರೂ ಕರುಣೆ ಇಲ್ಲದೆ ಅವಾಜ್ ಹಾಕುತ್ತಿರುವ ದುಷ್ಟ ಎಂದು ಜನ ಹೇಳಿದ್ದಾರೆ.

ಹರ್ಷವರ್ಧನ್‌ ಮತ್ತು ಇನ್ನೊಬ್ಬ ವ್ಯಕ್ತಿ ಶುಕ್ರವಾರ ನಮ್ಮ ಮನೆಯ ಮುಂದೆ ಬಂದಿದ್ದರು. ಕೊನೆಯ ಕಂತು ಈಗಲೇ ಕಟ್ಟಬೇಕು ಎಂದು ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಜಗಳ ಮಾಡಿದರು. ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿದರು, ಜೀವ ಬೆದರಿಗೆ ಹಾಕಿದರು, ನಿಂದಿಸಿದರು. ಆಗ ನಾನು ಕೂಡಾ ಮನೆಯಲ್ಲಿದ್ದೆ. ಒಂದೆರಡು ದಿನಗಳ ಕಾಲಾವಕಾಶ ಕೊಡಿ, ಹೇಗಾದರೂ ಮಾಡಿ ಕಂತು ಕಟ್ಟುತ್ತೇವೆ ಎಂದರೂ ಕೇಳಲಿಲ್ಲ ಎಂದು ಘಟನೆಯ ಬಗ್ಗೆ ಕೃಷ್ಣ ಕುಮಾರ್‌ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Self Harming: ಒಂದೇ ಕುಟುಂಬದ ಐವರ ಆತ್ಮಹತ್ಯೆಗೆ ಬಿಗ್‌ ಟ್ವಿಸ್ಟ್;‌ ಬಡ್ಡಿ ದಂಧೆ ಕರಾಳತೆ ಬಯಲು

ಶನಿವಾರ ನಾನು ಹೊರಗೆ ಹೋಗಿದ್ದೆ. 9ನೇ ತರಗತಿಯಲ್ಲಿ ಕಲಿಯುತ್ತಿರುವ ನನ್ನ ಸಣ್ಣ ಮಗ ಹುಷಾರಿಲ್ಲದೆ ಮನೆಯಲ್ಲೇ ಇದ್ದ. ಈ ನಡುವೆ ಬೆಳಗ್ಗೆ 11.30ರಿಂದ 12.30ರ ನಡುವೆ ಪುಷ್ಪಲತಾ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ಫೋನ್‌ ಬಂದ ಕೂಡಲೇ ನಾನು ಹೋಗಿ ನೇಣಿನಿಂದ ಇಳಿಸಿ ನೀರು ಕುಡಿಸಲು ಪ್ರಯತ್ನಿಸಿದೆ. ಬಳಿಕ‌ ಆಸ್ಪತ್ರೆಗೆ ಕರೆದೊಯ್ದರೂ ಬದುಕಲಿಲ್ಲ ಎಂದು ಕೃಷ್ಣ ಕುಮಾರ್‌ ವಿವರಿಸಿದ್ದಾರೆ. ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸತ್ತರೆ ನಾವೇನು ಮಾಡೋಕಾಗುತ್ತೆ ಎಂದು ಕೇಳಿದ ಹರ್ಷವರ್ಧನ್‌

ಈ ನಡುವೆ, ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯದೆ ಹರ್ಷವರ್ಧನ್‌ ಶನಿವಾರವೂ ಹಣ ವಸೂಲಿಗೆ ಮನೆ ಬಳಿ ಬಂದಿದ್ದ. ಆಗ ಊರಿನವರು ಸೇರಿ ಆತನನ್ನು ತರಾಟೆಗೆ ತೆಗೆದುಕೊಂಡಾಗ ಸತ್ತರೆ ನಾವೇನು ಮಾಡೋಕಾಗುತ್ತದೆ ಎಂಬ ಉಡಾಫೆ ಮಾತುಗಳನ್ನು ಆಡಿದ್ದಾನೆ. ಇದು ಸಾರ್ವಜನಿಕರನ್ನು ಮತ್ತಷ್ಟು ಕೆರಳಿಸಿದೆ.

Exit mobile version