ತುಮಕೂರು: ಕಳ್ಳತನವೂ ಈಗ ಪ್ರೊಫೆಷನಲ್ ಆಗಿಬಿಟ್ಟಿದೆ. ಭೂಪನೊಬ್ಬ ಬೋರ್‌ವೇಲ್ ಕೇಬಲ್‌ಗಳನ್ನು ಕದಿಯೋಕೆ ಅಂತಲೇ ತಿಂಗಳ ಸಂಬಳಕ್ಕೆ ಕಳ್ಳನನ್ನು (Theft Case) ನೇಮಿಸಿಕೊಂಡಿರುವ ಅಪರೂಪದ ಪ್ರಕರಣವೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
ವೆಂಕಟೇಶ್ ಎಂಬಾತ ಕಳ್ಳತನಕ್ಕಾಗಿಯೇ ಬೆಂಗಳೂರು ಮೂಲದ ರಾಘವೇಂದ್ರ ಎಂಬಾತನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ವೆಂಕಟೇಶ್ ಕಳ್ಳತನ ಮಾಡುವ ರಾಘವೇಂದ್ರನಿಗೆ ತಿಂಗಳ ಲೆಕ್ಕದಲ್ಲಿ ಸಂಬಳ ಕೊಡುತ್ತಿದ್ದ. ರಾಘವೇಂದ್ರ ತಿಂಗಳಿಗೆ 20 ಸಾವಿರ ರೂ. ಸಂಬಳ ಪಡೆಯುತ್ತಿದ್ದಾಗಿ ಪೊಲೀಸರ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.
ಈ ಖದೀಮರು ಗ್ರಾಮೀಣ ಭಾಗದಲ್ಲಿರುವ ಬೋರ್‌ವೇಲ್ ಕೇಬಲ್ ಕಳ್ಳತನ ಮಾಡುತ್ತಿದ್ದರು. ಕೊರಟಗೆರೆ ತಾಲೂಕಿನಲ್ಲಿ ಬೋರ್‌ವೇಲ್ ಕೇಬಲ್‌ಗಳ ಕಳುವಿನಿಂದ ರೈತರು ಹೈರಾಣಾಗಿದ್ದರು. ಕೊರಟಗೆರೆಯಲ್ಲಿ ಒಂದು ತಿಂಗಳಿಂದ ನಿರಂತರವಾಗಿ ಕಳ್ಳರು ಬೋರ್‌ವೇಲ್ ಕೇಬಲ್ ಕಳ್ಳತನ ಮಾಡುತ್ತಿದ್ದರು. ವಡ್ಡಗೆರೆ ಬಳಿ ಖತರ್ನಾಕ್ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: Road Accident : ಬಸ್ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ; ಚಾಲಕ ಸ್ಪಾಟ್ ಡೆತ್, ನಾಲ್ವರಿಗೆ ಗಾಯ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರಿನ ಚಲನವಲನ ಗಮನಿಸಿ ಕಳ್ಳರನ್ನು ಪತ್ತೆ ಹಚ್ಚಿದ್ದರು. ಕೊರಟಗೆರೆ ಪೊಲೀಸರು ಖತರ್ನಾಕ್ ಕಳ್ಳನ ಸಹಿತ ಮೂವರ ಹೆಡೆಮುರಿ ಕಟ್ಟಿದ್ದಾರೆ. ಐನಾತಿ ಕಳ್ಳರು ಕದ್ದ ಮಾಲನ್ನು ವಿನೇಶ್ ಪಟೇಲ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದರು.
ಸದ್ಯ ಮೂವರು ಆರೋಪಿಗಳಾದ ವೆಂಕಟೇಶ್, ರಾಘವೇಂದ್ರ ಹಾಗೂ ವಿನೇಶ್‌ನನ್ನು ಕೊರಟಗೆರೆ ಪೊಲೀಸರು ಬೆಂಗಳೂರಿನ ಕಾಮಾಕ್ಷಿಪಾಳ್ಳದಲ್ಲಿ ಬಂಧಿಸಿದ್ದಾರೆ. ಇನ್‌ಸ್ಪೆಕ್ಟರ್ ಅನಿಲ್ ಹಾಗೂ ತಂಡ ಕಳ್ಳರನ್ನು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಕಳ್ಳರ ಬಂಧನದಿಂದ ಕೊರಟಗೆರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ