ತುಮಕೂರು : ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಬಿ.ಎಸ್ ರಸ್ತೆಯಲ್ಲಿ ಬುಧವಾರ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ (45) ಯನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ನರಸಿಂಹಮೂರ್ತಿ ಡಿಎಸ್‌ಎಸ್‌ನ ತಾಲೂಕು ಸಂಚಾಲಕನಾಗಿದ್ದ. ಇಂದು (ಬುಧವಾರ) ಮಧ್ಯಾಹ್ನ 1 ಗಂಟೆ ಸುಮಾರಿಗೆ ಟೀ ಅಂಗಡಿ ಮುಂದೆ ಕುಳಿತಿದ್ದ ವೇಳೆ ದಿಢೀರ್ ಆಗಿ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಕೊಚ್ಚಿ ಕೊಂದಿದ್ದಾರೆ.
ಇದನ್ನು ಓದಿ| ತಮಿಳುನಾಡಿನಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿ ಕೊಚ್ಚಿ ಕೊಲೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗುಬ್ಬಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇನ್ನು ಶವಾಗಾರಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಭೇಟಿ ನೀಡಿ ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಮುತ್ತಿಗೆ: ನರಸಿಂಹಮೂರ್ತಿ ಹತ್ಯೆಗೆ ದಲಿತ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರಿಗೆ ಹೋರಾಟಗಾರರು ಮುತ್ತಿಗೆ ಹಾಕಿದರು. ಬಿಗಿ ಬಂದೋಬಸ್ತ್ ನಡುವೆ ಘೇರಾವ್ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು.