Site icon Vistara News

ಲೇಡಿ ಕಾನ್ಸ್‌ಟೆಬಲ್‌ ಕೊಲೆಗೆ ಟ್ವಿಸ್ಟ್‌; ಪೊಲೀಸಪ್ಪನ ಮೇಲೆ ಇಬ್ಬರ ಕಣ್ಣು, ಸುಪಾರಿ ಕೊಟ್ಟವಳು ರಾಣಿ ಕಾನ್ಸ್‌ಟೆಬಲ್‌

ತುಮಕೂರು: ಹುಳಿಯಾರು ಠಾಣೆಯ ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್‌ ಸುಧಾ ಕೊಲೆ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದ್ದು, ಹಣಕಾಸು ವ್ಯವಹಾರಕ್ಕೆ ಈ ಕೊಲೆ ನಡೆದಿಲ್ಲ ಎಂಬುದು ಗೊತ್ತಾಗಿದೆ. ಅಲ್ಲದೆ, ಪ್ರೇಮ ಪ್ರಕರಣವೇ ಈ ಕೃತ್ಯಕ್ಕೆ ಕಾರಣ ಎಂಬ ಸತ್ಯವನ್ನು ಪೊಲೀಸರು ಬಯಲಿಗೆಳೆದಿದ್ದು, ಸಹೋದ್ಯೋಗಿ ಕಾನ್ಸ್‌ಟೆಬಲ್‌ಳಿಂದಲೇ ಕೊಲೆಗೆ ಸುಪಾರಿ ಕೊಟ್ಟಿರುವ ವಿಚಾರ ಬಯಲಾಗಿದೆ.

ನಾಪತ್ತೆ ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರಿಗೆ ಮೊದಲು ಲೇಡಿ ಕಾನ್ಸ್‌ಟೆಬಲ್‌ ಸುಧಾ ಕೊಲೆಯನ್ನು ಚಿಕ್ಕಪ್ಪನ ಮಗ ಮಾಡಿದ್ದಾನೆಂಬ ಅಂಶ ತಿಳಿದಿತ್ತು. ಆದರೆ, ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಸುಧಾ ಕೊಲೆಗೆ ಮತ್ತೊಬ್ಬ ಲೇಡಿ ಕಾನ್‌ಸ್ಟೆಬಲ್‌ ರಾಣಿ ಎಂಬಾಕೆ ಸುಪಾರಿ ಕೊಟ್ಟಿರುವುದು ತಿಳಿದು ಬಂದಿದೆ. ಹೀಗಾಗಿ ಆರೋಪಿ ರಾಣಿ ಹಾಗೂ ನಿಖೇಶ್‌ ಎಂಬಾತನನ್ನು ಬಂಧನ ಮಾಡಲಾಗಿದೆ. ಕೊಲೆಗೆ ಕಾರಣ ಪ್ರೀತಿ-ಪ್ರೇಮ ವಿಚಾರ ಎಂದು ತಿಳಿದು ಬಂದಿದೆ.

ಕೊಲೆಯಾದ ಕಾನ್ಸ್‌ಟೆಬಲ್‌ ಸುಧಾ

ಒಂದೇ ಠಾಣೆಯ ಕಾನ್ಸ್‌ಟೆಬಲ್‌ಗಳಾಗಿದ್ದ ಸುಧಾ ಹಾಗೂ ರಾಣಿ ಈ ಮೊದಲು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಈ ಇಬ್ಬರೂ ಸಹೋದ್ಯೋಗಿ ಪೊಲೀಸ್ ಒಬ್ಬನನ್ನು ಪ್ರೀತಿ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಕಳೆದ ಆರೇಳು ತಿಂಗಳ ಹಿಂದೆ ಠಾಣೆಯಲ್ಲಿ ಗಲಾಟೆಯನ್ನೂ ಮಾಡಿಕೊಂಡಿದ್ದರು. ಆದರೆ, ರಾಣಿಗೆ ಸಿಟ್ಟು ಮಾತ್ರ ತಣ್ಣಗೆ ಆಗಿರಲಿಲ್ಲ, ಮುಸುಕಿನ ಗುದ್ದಾಟ ನಡೆಯುತ್ತಿತ್ತು.

ಕೊಲೆಗೆ ಸ್ಕೆಚ್‌

ಶತಾಯಗತಾಯ ಪ್ರೀತಿಸಿದಾತನನ್ನು ಪಡೆಯಬೇಕು ಎಂದುಕೊಂಡ ಕಾನ್ಸ್‌ಟೇಬಲ್‌ ರಾಣಿ ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಸುಧಾಳನ್ನು ಮುಗಿಸಲು ಸ್ಕೆಚ್‌ ಹಾಕಿದಳು. ಇದಕ್ಕಾಗಿ ರಾಣಿ, ಸುಧಾಳ ಚಿಕ್ಕಪ್ಪನ ಮಗ ಮಂಜುನಾಥ್ ಹಾಗೂ ಆತನ ಸ್ನೇಹಿತ ನಿಖೇಶ್‌ ಎಂಬುವವರಿಗೆ 5 ಲಕ್ಷ ರೂ. ಹಣ ನೀಡಿ ಸುಪಾರಿ ಕೊಟ್ಟಿದ್ದಳು.

ಸುಧಾಳ ಚಿಕ್ಕಪ್ಪನ ಮಗ ಮಂಜುನಾಥ್‌ ಹಾಗೂ ಆತನ ಸ್ನೇಹಿತ ನಿಖೇಶ್‌, ಸೆಪ್ಟೆಂಬರ್ 4ರಂದು ಶಿವಮೊಗ್ಗದಲ್ಲಿ ಓದುತ್ತಿದ್ದ ಸುಧಾ ಮಗನನ್ನು ನೋಡಿಕೊಂಡು ಬರುವ ನೆಪದಲ್ಲಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದಿದ್ದರು. ಆದರೆ, ಸುಧಾ ಮಕ್ಕಳಿಬ್ಬರೂ ಜತೆಗೆ ಇದ್ದುದರಿಂದ ಸುಧಾ ಬಚಾವ್ ಆಗಿದ್ದರು ಎನ್ನಲಾಗಿದೆ.

ಆದರೆ, ಸುಧಾಳನ್ನ ಕೊಲೆ ಮಾಡಲೇಬೇಕೆಂದು ಹಠಕ್ಕೆ ಬಿದ್ದಿದ್ದ ರಾಣಿ, ಕೊಲೆ ಸ್ಕೆಚ್ ಮಿಸ್ ಆಗಿದ್ದಕ್ಕೆ ಗರಂ ಆಗಿದ್ದಳು ಎನ್ನಲಾಗಿದೆ. ಇದಕ್ಕಾಗಿ ಇದೇ ಸೆ.13ರಂದು ಮತ್ತೊಂದು ಕೊಲೆಗೆ ಸ್ಕೆಚ್‌ ಹಾಕಿದ ರಾಣಿ ಮತ್ತು ತಂಡ, ಕೆಲಸ ಮುಗಿಸಿ ಬಂದಿದ್ದ ಸುಧಾಳನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ತಿಪಟೂರಿಗೆ‌ ಕಾರಿನಲ್ಲಿ ಕರೆದೊಯ್ದಿದ್ದಾರೆ.

ಈ ವೇಳೆ ತಿಪಟೂರಿನ ಹಾಸನ ಸರ್ಕಲ್ ಬಳಿ ಸುಧಾ ಕಣ್ಣಿಗೆ ಸ್ಪ್ರೇ ಮಾಡಿದ ಮಂಜುನಾಥ್‌ ಹಾಗೂ ನಿಖೇಶ್‌, ಬಳಿಕ ಕಣ್ಣು ಉಜ್ಜಿಕೊಳ್ಳುವಷ್ಟರಲ್ಲಿ ಸುಧಾ ಎದೆಭಾಗಕ್ಕೆ ಚಾಕು ಇರಿದು, ಅನಂತರ ಆಕೆ ಧರಿಸಿದ್ದ ವೇಲ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದರು. ಯಾರಿಗೂ ಸುಳಿವು ಸಿಗದಂತೆ ತಿಪಟೂರು-ಅರಸಿಕೆರೆ ಮಾರ್ಗ ಮಧ್ಯೆ ಸುಧಾಳ ಶವವನ್ನು ರಸ್ತೆಬದಿಯ ಪೊದೆಯೊಂದರಲ್ಲಿ ಬಿಸಾಡಿ ಪರಾರಿಯಾಗಿದ್ದರು.

ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಸಹೋದರ ಮಂಜುನಾಥ್‌

ಈ ನಡುವೆ ಕಾನ್ಸ್‌ಟೇಬಲ್‌ ಸುಧಾಳನ್ನು ಕೊಲೆ ಮಾಡಿದ ಮಂಜುನಾಥ್‌ಗೆ ಭಯವಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಶಿವಮೊಗ್ಗದ ಲಾಡ್ಜ್‌ ಒಂದರಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಿ ಸಾಯುವ ಮುನ್ನ ಆತ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ ತಾನು ಸುಧಾ ಅವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಈ ಡೆತ್‌ ನೋಟ್‌ ಆಧರಿಸಿಯೇ ಸುಧಾ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದರು.

ಮಂಜುನಾಥ್‌ ಸ್ನೇಹಿತ ನಿಖೇಶ್ ಕಾರು ಸಮೇತ ಹಾಸನದ ಕಡೆಗೆ ಪರಾರಿಯಾಗಿದ್ದವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಸುಧಾ ಕೊಲೆಗೆ ಸುಪಾರಿ ಕೊಟ್ಟಿದ್ದ ಕಾನ್ಸ್‌ಟೆಬಲ್ ರಾಣಿಯನ್ನು ಹುಳಿಯಾರು ಪೊಲೀಸರು ಬಂಧನ ಮಾಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ | Missing Case | ಕರ್ತವ್ಯನಿರತ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ ನಾಪತ್ತೆ; ಪೋಸ್ಟರ್‌ ವೈರಲ್‌!

Exit mobile version