ನವ ದೆಹಲಿ: ಟ್ವಿಟರ್‌ನಲ್ಲಿರುವ ಕೆಲವು ವಿಷಯಗಳನ್ನು ತೆಗೆದುಹಾಕುವಂತೆ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮೈಕ್ರೋ ಬ್ಲಾಗಿಂಗ್ ಫ್ಲಾಟ್ ಫಾರಂ ಕರ್ನಾಟಕ ಹೈಕೋರ್ಟ್ ಮೊರೆ ಹೊಕ್ಕಿದೆ. ಹೊಸ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ ೬೯ಎ ಪ್ರಕಾರ, ಕೇಂದ್ರ ಸರಕಾರ ಈಗಾಗಲೇ ಟ್ವಿಟರ್ ಸಂಸ್ಥೆಗೆ ನೋಟಿಸ್ ನೀಡಿದ್ದು, ಅದನ್ನು ಪಾಲಿಸಲು ಜುಲೈ ನಾಲ್ಕರ ಅಂತಿಮ ಗಡುವನ್ನು ನೀಡಿತ್ತು. ಆದೇಶವನ್ನು ಪಾಲಿಸದೆ ಹೋದರೆ ಕ್ರಿಮಿನಲ್ ಕ್ರಮಗಳನ್ನು ಎದುರಿಸಬೇಕು ಎಂಬ ಎಚ್ಚರಿಕೆಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಈಗ ಟ್ವಿಟರ್ ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆಯನ್ನು ಸಲ್ಲಿಸಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಜೂನ್ ೬ ಮತ್ತು ಜೂನ್ ೯ರಂದು ಎರಡು ಆದೇಶಗಳನ್ನು ನೀಡಿತ್ತು. ಕೆಲವು ನಿರ್ದಿಷ್ಟ ಟ್ವೀಟ್‌ಗಳನ್ನು ಟ್ವೀಟ್‌ಗಳನ್ನು ತೆಗೆಯುವಂತೆ ಸೂಚಿಸಿತ್ತು. ಆದರೆ, ಟ್ವಿಟರ್ ಈ ಆದೇಶವನ್ನು ಪಾಲಿಸಿಲ್ಲ. ಇದಕ್ಕಾಗಿ ಕೇಂದ್ರ ಸರಕಾರ ಕಳೆದ ವಾರ ಮತ್ತೊಂದು ನೋಟಿಸ್ ನೀಡಿತ್ತು. ಮತ್ತು ಆದೇಶಗಳನ್ನು ಪಾಲಿಸದೆ ಹೋದರೆ ಟ್ವಿಟರ್ ತನ್ನ ಮಧ್ಯವರ್ತಿ ಸ್ಥಾನದ ರಕ್ಷಣೆಯನ್ನು ಕಳೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.
ಕೇಂದ್ರ-ಟ್ವಿಟರ್ ಜಗಳ ನಿರಂತರ
ಕೇಂದ್ರ ಸರಕಾರ ಮತ್ತು ಟ್ವಿಟರ್ ಮಧ್ಯೆ ಬಹುಕಾಲದಿಂದಲೇ ಸಂಘರ್ಷ ನಡೆಯುತ್ತಿದೆ. ಕೇಂದ್ರ ಸರಕಾರ ರೈತ ಹೋರಾಟಕ್ಕೆ ಸಂಬಂಧಿಸಿದ ಕೆಲವು ಟ್ವೀಟ್‌ಗಳನ್ನು ಕಿತ್ತು ಹಾಕಲು ಸೂಚಿಸಿತ್ತು. ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು, ಪತ್ರಕರ್ತರು, ರಾಜಕಾರಣಿಗಳು, ರೈತ ಹೋರಾಟದ ಬೆಂಬಲಿಗರ ಖಾತೆಗಳನ್ನೇ ಡಿಲೀಟ್ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಮುಂದಿಟ್ಟಿತ್ತು. ಆದರೆ, ಎಲ್ಲವನ್ನೂ ಒಪ್ಪಲು ಸಾಧ್ಯವಿಲ್ಲ. ಇದು ಮೈಕ್ರೋ ಬ್ಲಾಗಿಂಗ್ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡುತ್ತದೆ. ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ತಡೆಯುಂಟು ಮಾಡುತ್ತದೆ ಎಂದು ಸಂಸ್ಥೆ ವಾದಿಸಿತ್ತು. ಅದರಲ್ಲೂ ರಾಜಕಾರಣಿಗೆ ಸೇರಿದ ಟ್ವೀಟ್‌ಗಳನ್ನು ಡಿಲೀಟ್ ಮಾಡುವುದು ಸರಿಯಲ್ಲ ಎಂದು ವಾದ ಮಂಡನೆ ಮಾಡಿತ್ತು. ಅಷ್ಟಾದರೂ ಕೇಂದ್ರ ಸರಕಾರ ಹೇಳಿದ ಸುಮಾರು ೮೦ ಅಕೌಂಟ್‌ಗಳನ್ನು ಬ್ಲಾಕೆ ಮಾಡಿರುವುದಾಗಿ ಟ್ವಿಟರ್ ಹೇಳಿಕೊಂಡಿದೆ.
ಈಗ ಯಾಕೆ ಹೈಕೋರ್ಟ್‌ಗೆ ಅರ್ಜಿ?
ಇಷ್ಟೆಲ್ಲದರ ನಡುವೆಯೇ ಸರಕಾರ ಜುಲೈ ೪ಕ್ಕೆ ಅನ್ವಯವಾಗುವಂತೆ ಅಂತಿಮ ನೋಟಿಸ್ ನೀಡಿರುವುದಾಗಿ ಹೇಳಿರುವುದರಿಂದ ಈ ಆದೇಶವನ್ನು ರದ್ದು ಮಾಡಲು ಕೋರಿ ಮನವಿ ಮಾಡಿದೆ. ಕೆಲವೊಂದು ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿದ್ದಾರೆ ಎಂದೂ ಅದು ವಾದಿಸಿದೆ. ಹಾಗಾಗಿ ಸರಕಾರದ ಮಾಹಿತಿ ತಂತ್ರಜ್ಞಾನ ಕಾಯಿದೆಯ ಕೆಲವು ಅಂಶಗಳನ್ನು ಮರುಪರಾಮರ್ಶೆ ಮಾಡಬೇಕು ಎಂದು ಆಗ್ರಹಿಸಿದೆ. ಅದರೆ, ಯಾವ ಅಂಶ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
ಸರಕಾರ ಹೇಳುವುದೇನು?
ಸರಕಾರ ಹೇಳುವ ಪ್ರಕಾರ, ಟ್ವಿಟರ್‌ನಲ್ಲಿ ಕೆಲವೊಂದು ದೇಶ ವಿರೋಧಿಯಾದ ವಿಷಯಗಳು ಬರುತ್ತವೆ. ಸಮಾಜಕ್ಕೆ ಒಳಿತಲ್ಲದ ವಿಷಯಗಳು ಬರುತ್ತವೆ. ಅವುಗಳಿಂದ ಆಗುವ ಹಾನಿಯನ್ನು ತಪ್ಪಿಸಲು ಮೈಕ್ರೋ ಬ್ಲಾಗಿಂಗ್ ಸೈಟ್ ಮೇಲೆ ಸರಕಾರಕ್ಕೆ ಹಿಡಿತ ಬೇಕು. ಸರಕಾರ ಹೇಳುವ ಟ್ವೀಟ್‌ಗಳನ್ನು ಅದು ಡಿಲೀಟ್ ಮಾಡಬೇಕು.
ಟ್ವಿಟರ್ ಕೆಲವೊಮ್ಮೆ ಸರಕಾರಕ್ಕೆ ಹಾನಿ ಆಗುವ ವಿಚಾರಗಳನ್ನು ಪ್ರಸಾರ ಮಾಡುತ್ತದೆ ಎನ್ನುವ ವಾದವೂ ಇದೆ. ಟ್ವಿಟರ್ ತಮ್ಮ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರದ ಕೆಲವು ಇಲಾಖೆಗಳು ಒಂದು ಹಂತದಲ್ಲಿ ಕೂ ಎಂಬ ಆಪನ್ನು ಬಳಸಲು ಆರಂಭಿಸಿದ್ದವು.
ರಾಜ್ಯ ಹೈಕೋರ್ಟ್‌ನಲ್ಲಿ ದಾವೆ ಯಾಕೆ?
ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರ ಮೇಲೆ ಒಂದು ಕೇಸು ಹಾಕಿದ್ದರು. ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಗಡ್ಡ ಬೋಳಿಸುವಂತೆ ಮತ್ತು ವಂದೇ ಮಾತರಂ, ಜೈ ಶ್ರೀರಾಂ ಎಂದು ಘೋಷಣೆ ಕೂಗುವಂತೆ ಒತ್ತಾಯಿಸುವ ದೃಶ್ಯವೊಂದು ಟ್ವಿಟರ್‌ನಲ್ಲಿ ಅಪ್‌ಲೋಡ್ ಆಗಿತ್ತು. ಇದಕ್ಕೆ ಸಂಬಂಧಿಸಿ ಟ್ವಿಟರ್ ಮತ್ತು ವಿಡಿಯೊ ಅಪ್‌ಲೋಡ್ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆಗ ಮನೀಶ್ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ಪಡೆದಿದ್ದರು. ಇದರ ವಿರುದ್ಧ ಉತ್ತರ ಪ್ರದೇಶ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆ ವಿಚಾರಣೆ ಈಗಲೂ ಬಾಕಿ ಇದೆ. ಕರ್ನಾಟಕ ಹೈಕೋರ್ಟ್ ತಮ್ಮ ಮನವಿಯನ್ನು ಪುರಸ್ಕರಿಸುತ್ತದೆ ಎಂಬ ಭಾವನೆಯಿಂದ ಟ್ವಿಟರ್ ಅಧಿಕಾರಿಗಳು ಇಲ್ಲಿ ದಾವೆ ಸಲ್ಲಿಸಿರುವ ಸಾಧ್ಯತೆಗಳಿವೆ.
ಇದನ್ನೂ ಓದಿ| Twitter ಖರೀದಿಸುವ ಮೆಗಾ ಡೀಲ್‌ಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ ಎಲನ್ ಮಸ್ಕ್!