Site icon Vistara News

Minister Chaluvarayaswamy : ರಾಜ್ಯಪಾಲರಿಗೆ ಪತ್ರ ಬರೆದಿದ್ದ ಮೈಸೂರಿನ ಕೃಷಿ ಅಧಿಕಾರಿಗಳಿಬ್ಬರ ಸೆರೆ

Minister Chaluvarayaswamy

ಮೈಸೂರು/ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ (Minister Chaluvarayaswamy) ವಿರುದ್ಧ ಲಂಚ ಕೇಳಿದ ಆರೋಪ ಮಾಡಿ ರಾಜ್ಯಪಾಲರಿಗೆ (Governor of Karnataka) ಪತ್ರ ಬರೆದಿರುವ ಪ್ರಕರಣ ಸಂಬಂಧ ಕೃಷಿ ಇಲಾಖೆ ಇಬ್ಬರು ಅಧಿಕಾರಿಗಳನ್ನು (Agriculture Department Officials) ಮೈಸೂರಿನಲ್ಲಿ ಸಿಐಡಿ ಪೊಲೀಸರು (CID Police) ಶನಿವಾರ ರಾತ್ರಿ ಬಂಧಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪತ್ರಕ್ಕೆ ಈಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಮಂಡ್ಯ ಜಿಲ್ಲೆಯ ಏಳೂ ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ರಾಜ್ಯಪಾಲರಿಗೆ ದೂರಿನ ಪತ್ರವನ್ನೂ ರವಾನೆ ಮಾಡಲಾಗಿತ್ತು. ಕೃಷಿ ಸಚಿವರ ಮೇಲೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸೂಕ್ತ ತನಿಖೆ ನಡೆಸಿ ಕ್ರಮವಹಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಬಳಿಕ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.

ಇದನ್ನೂ ಓದಿ: Weather report : ಕರಾವಳಿಯಲ್ಲಿ Non Stop ಮಳೆ; ಬೆಂಗಳೂರಲ್ಲಿ ಹೇಗೆ?

ಅಲ್ಲದೆ, ಕಾಂಗ್ರೆಸ್‌ ಮೇಲೆ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಮುಗಿಬಿದ್ದಿದ್ದವು. ಕಮಿಷನ್‌ ಸರ್ಕಾರ ಎಂದು ಆರೋಪವನ್ನು ಮಾಡಿದ್ದರು. ಈ ಪ್ರಕರಣವು ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿತ್ತು. ಆದರೆ, ಈ ಆರೋಪವನ್ನು ತಳ್ಳಿ ಹಾಕಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ನಕಲಿ ಪತ್ರ ಎಂದು ಹೇಳಿಕೆ ನೀಡಿದ್ದರು. ಆ ಹೆಸರಿನ ಅಧಿಕಾರಿಗಳೇ ಮಂಡ್ಯ ಜಿಲ್ಲೆಯಲ್ಲಿ ಇಲ್ಲ ಎಂದೂ ಹೇಳಿದ್ದರು. ಜತೆಗೆ ಮಂಡ್ಯ ಜಿಲ್ಲೆಯಲ್ಲಿರುವ ಸಹಾಯಕ ಕೃಷಿ ಅಧಿಕಾರಿಗಳು ತಾವು ಈ ಪತ್ರ ಬರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದೂ ಸಚಿವರು ಹೇಳಿದ್ದರು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದರು. ಈಗ ಈ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಇವರು ಮೈಸೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಎಂದು ತಿಳಿದುಬಂದಿದೆ. ಜಿಲ್ಲಾ ಮಟ್ಟದ ಅಧಿಕಾರಿಗೂ ಬಂಧನ ಭೀತಿ ಎದುರಾಗಿದೆ. ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು. ಈ ಪತ್ರವನ್ನು ಮೈಸೂರಿನ ಸರಸ್ವತಿಪುರಂ ಪೋಸ್ಟ್ ಆಫೀಸ್‌ನಿಂದ ಸ್ಪೀಡ್ ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳು ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಂದು ರಾತ್ರಿಯೇ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತಿಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ವಿಚಾರಣೆ

ಈಗ ವಶಕ್ಕೆ ಪಡೆಯಲಾದ ಸಹಾಯಕ ಕೃಷಿ ನಿರ್ದೇಶಕ ಹಾಗೂ ಕೃಷಿ ಅಧಿಕಾರಿಯನ್ನು ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿದೆ. ಮಂಡ್ಯದ 7 ಸಹಾಯಕ ಕೃಷಿ ನಿರ್ದೇಶಕರ ಹೆಸರಿನಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಅಧಿಕಾರಿಗಳು, ಮೈಸೂರಿನಲ್ಲೇ ಕುಳಿತು ನಕಲಿ ಸಹಿ ಮಾಡಿ ಸಚಿವರ ವಿರುದ್ಧ ದೂರಿನ ಪತ್ರ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಈಗ ಪತ್ರ ಬರೆಯಲು ಕಾರಣವೇನು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಸಿಐಡಿ ವಶದಲ್ಲಿರುವ ಎಡಿ, ಎಓಗೆ ಲಂಚದ ಒತ್ತಡ ಇತ್ತಾ? ಎಂಬ ಪ್ರಶ್ನೆ ಎದುರಾಗಿದೆ. ಅಥವಾ ಬೇರೆಯವರ ಕುಮ್ಮಕ್ಕಿನಿಂದ ಪತ್ರ ಬರೆದಿದ್ದಾರಾ ಎಂಬ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಮತ್ತಷ್ಟು ಅಂಶ ಬಹಿರಂಗವಾಗುವ ಸಾಧ್ಯತೆ ಇದೆ.

ನನ್ನ ವಿರುದ್ಧ ಕಿತಾಪತಿ ಮಾಡಲು ಕೆಲವರು ನಿಂತಿದ್ದಾರೆ: ಚಲುವರಾಯಸ್ವಾಮಿ

ಮೈಸೂರಿನ ಅಧಿಕಾರಿಗಳು ಮಂಡ್ಯದ ಏಳು ಅಧಿಕಾರಿಗಳ ಹೆಸರು ಬಳಸಿ ನಕಲಿ ಸಹಿ ಮಾಡಿದ್ದಾರೆ. ನನ್ನ ವಿರುದ್ಧ ಕಿತಾಪತಿ ಮಾಡಲು ಕೆಲವರು ನಿಂತಿದ್ದಾರೆ. ರಾಜ್ಯಪಾಲರಿಗೆ ದೂರು ಕೊಟ್ಟ ಇಬ್ಬರೂ ಕೃಷಿ ಅಧಿಕಾರಿಗಳನ್ನು ಸಿಐಡಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದ ಏಳು ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಈ ಕೆಲಸ ಮಾಡಿದ್ದಾರೆ. ಮಂಡ್ಯದ ಅಧಿಕಾರಿಗಳ ಹೆಸರು ಇದ್ದರೂ ಅವರು ಯಾರೂ ಈ ಕೆಲಸ ಮಾಡಿಲ್ಲ. ಮೈಸೂರಿನ ಇಬ್ಬರು ಹೀಗೆ ಮಾಡಿದ್ದಾರೆ. ಮಾಹಿತಿ ಬರದೆ ಈ ಬಗ್ಗೆ ನಾನು ಮಾತನಾಡುವುದು ಸೂಕ್ತ ಅಲ್ಲ‌. ಜೆಡಿಎಸ್-ಬಿಜೆಪಿಯವರು ಇದರ ಹಿಂದೆ ಇದ್ದಾರಾ ಗೊತ್ತಿಲ್ಲ. ಇನ್ನೊಬ್ಬರ ಬಗ್ಗೆ ದೂರುವುದು ಸರಿಯಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಇದನ್ನೂ ಓದಿ: Hindu Jagarana Vedike : ಹಿಂಜಾವೇ ಪ್ರಾಂತ ಸಹ ಸಂಯೋಜಕ ಸೆರೆ; ಸರ್ಕಾರದ ವಿರುದ್ಧ ಹಿಂದು ಸಂಘಟನೆಗಳ ವ್ಯಾಪಕ ಆಕ್ರೋಶ

ಸಾರ್ವಜನಿಕರಿಗೆ ನಕಲಿ‌ ಸಹಿ‌ ಎಂದು ಗೊತ್ತಾದರೆ ಸಾಕು. ನನ್ನ ವಿರುದ್ಧ ಮಾತನಾಡುವವರು ಒಪ್ಪಲಿ ಎಂದು ಸರ್ಟಿಫಿಕೇಟ್ ಕೊಡುವುದಕ್ಕೆ ಆಗಲ್ಲ. ನಾವು ಗೌರವವಾಗಿ ನಡೆದುಕೊಳ್ಳೋಣ. ನಮಗೆ ಜಿಲ್ಲೆಯ ಸಮಸ್ಯೆ ಮುಖ್ಯ. ಬೇಡದ ವಿಚಾರ ನನಗೆ ಬೇಡ. ಬೇಕು ಅಂತಲೇ ಕೆಲವರು ಕಿತಾಪತಿ ಮಾಡಲು ನಿಂತಿದ್ದಾರೆ. ಚಲುವರಾಯಸ್ವಾಮಿ ಇನ್ನೊಬ್ಬರ ದ್ವೇಷಕ್ಕೋಸ್ಕರ ರಾಜಕಾರಣ ಮಾಡಲ್ಲ. ಐದು ವರ್ಷ ಸೋತಾಗ ಅವರು ಏಳು ಜನ ಗೆದ್ದರು. ಅವರ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ಒಂದು ಗುತ್ತಿಗೆದಾರರ ಪೇಮೆಂಟ್ ಆಗಿಲ್ಲ. ಕೆಲಸ ಆಗಿರಲಿಲ್ಲ. ನಾವು ಯಾವತ್ತೂ ಅವರಿಗೆ ದೂರಿದ್ದೆವಾ? ಜನರು ಅವಕಾಶ ಕೊಟ್ಟಿದ್ದಾರೆ, ನಾವು ಕೆಲಸ ಮಾಡಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.

Exit mobile version