ಬೆಂಗಳೂರು: ಆಸ್ತಿ ವಿಚಾರಕ್ಕೆ ನಗರದ ಕುಂಬಾರಪೇಟೆ ಮುಖ್ಯರಸ್ತೆಯಲ್ಲಿ ಜೋಡಿ ಕೊಲೆ ನಡೆದಿದೆ. ಕುಂಬಾರ ಸಂಘಕ್ಕೆ ಸೇರಿದ ಸ್ವತ್ತು ವಿಚಾರವಾಗಿ ಇಬ್ಬರು ವ್ಯಾಪಾರಿಗಳನ್ನು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದು, ಬಳಿಕ ಆತನೇ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹಲಸೂರ್ ಗೇಟ್ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸುರೇಶ್ (55) ಹಾಗೂ ಮಹೇಂದ್ರ (68) ಕೊಲೆಯಾದವರು. ಭದ್ರ ಕೊಲೆ ಆರೋಪಿ. ಕುಂಬಾರ ಪೇಟೆಯ ಹರಿ ಮಾರ್ಕೇಟಿಂಗ್ಸ್ ಕಟ್ಟಡದ ಒಳಗೆ ಕೊಲೆ ನಡೆದಿದೆ. ಆರೋಪಿ ಭದ್ರ, ಮೃತರ ಸಂಬಂಧಿಕ ಎನ್ನಲಾಗಿದೆ.
ಕುಂಬಾರಪೇಟೆ ಮುಖ್ಯರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವನ್ನು ಕುಂಬಾರ ಸಂಘಕ್ಕೆ ಬಿಟ್ಟು ಕೊಡುವ ವಿಚಾರಕ್ಕೆ ವಿವಾದ ಉಂಟಾಗಿದ್ದು, ಕಳೆದ ಕೆಲ ವರ್ಷಗಳಿಂದ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿತ್ತು. ಈ ಬಗ್ಗೆ ಸುರೇಶ್ ಬಳಿ ಮಾತನಾಡಲು ಆರೋಪಿ ಭದ್ರ ತೆರಳಿದ್ದ.
ಇದನ್ನೂ ಓದಿ | Love and Dokha : ಒಬ್ಬನ ಜತೆಗೇ 3 ಸಲ ಮದುವೆ, ನಾಲ್ವರ ಜತೆ ಲವ್; ಇವಳು ಚಮಕ್ ಚಾಂದಿನಿ!
ಸುರೇಶ್‌ನನ್ನು ಹತ್ಯೆ ಮಾಡಲು ಮೊದಲೇ ಪ್ಲ್ಯಾನ್ ಮಾಡಿದ್ದ ಆರೋಪಿ ಬಟನ್ ಚಾಕು ತೆಗೆದುಕೊಂಡು ಹೋಗಿದ್ದ. ಸ್ಥಳದಲ್ಲಿ ಸುರೇಶ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ತಿವಿದಿದ್ದಾನೆ. ಈ ವೇಳೆ ಗಲಾಟೆ ಬಿಡಿಸಲು ಹೋಗಿದ್ದ ಮಹೇಂದ್ರಗೂ ಇರಿಯಲಾಗಿದೆ. ತಪ್ಪಿಸಿಕೊಳ್ಳಲು ಓಡಿದರೂ ಬಿಡದೆ ಇಬ್ಬರನ್ನೂ ಆರೋಪಿ ಭದ್ರ ಕೊಂದು, ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಹಲಸೂರ್ ಗೇಟ್ ಪೊಲೀಸರಿಂದ ಆರೋಪಿ ಭದ್ರನ ತೀವ್ರ ವಿಚಾರಣೆ ನಡೆಯುತ್ತಿದೆ.
ಸಾಲದ ಹೊರೆ ತಾಳಲಾರದೆ ಗ್ರಾ.ಪಂ ಸದಸ್ಯ ಆತ್ಮಹತ್ಯೆ
ಕಲಬುರಗಿ: ಜೀವನದಲ್ಲಿ ಜಿಗುಪ್ಸೆ ಹೊಂದಿ ಜಿಲ್ಲೆಯ (Self Harming) ಅಫಜಲಪುರ ತಾಲೂಕಿನ ಬಳೂಂಡಗಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ರೈತ ಮಲ್ಲಪ್ಪ ಹೋರಿ (48) ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಜರುಗಿದೆ.
ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಮಲ್ಲಪ್ಪ ಹೋರಿ, ಮಕ್ಕಳ ಮದುವೆಗೆ ಹಾಗೂ ಮಳೆ ಬಾರದೆ ಬೆಳೆ ನಷ್ಟದಿಂದಾಗಿ 25 ಲಕ್ಷಕ್ಕೂ ಅಧಿಕ ಹಣ ಸಾಲ ತೆಗೆದುಕೊಂಡಿದ್ದನು, ಸಾಲಗಾರರು ಸಾಲ ವಾಪಸ್ ನೀಡುವಂತೆ ಪದೇಪದೇ ಕೇಳುತ್ತಿದ್ದ ಹಿನ್ನಲೆಯಲ್ಲಿ ಸಾಲ ಮರುಪಾವತಿ ಮಾಡಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.