ಕೋಲಾರ: ಜಿಲ್ಲೆಯಲ್ಲಿ ಚುನಾವಣಾ (Karnataka Election) ಸಂದರ್ಭದಲ್ಲಿ ರಾಯಲಸೀಮೆ ಹಿಂಸಾಚಾರ ಸಂಸ್ಕೃತಿ (ಫ್ಯಾಕ್ಷನಿಸಂ) ಮರುಕಳಿಸಿದೆ. ಶ್ರೀನಿವಾಸಪುರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಚಾಕು ಇರಿದ ಪ್ರಕರಣ ನಡೆದ ಬೆನ್ನಲ್ಲೇ ಅಂತಹುದೇ ಮತ್ತೊಂದು ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ಸಂಜೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ಕಾಂಗ್ರೆಸ್ ಕಾರ್ಯಕರ್ತರಿಗೆ ಚಾಕು ಇರಿಯಲಾಗಿದೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ. ಉಮರೇಜ್, ತಬರೇಜ್ ಗಾಯಗೊಂಡ ಕಾಂಗ್ರೆಸ್ ಕಾರ್ಯಕರ್ತರು. ಜೆಡಿಎಸ್ ಕಾರ್ಯಕರ್ತ ಶಾಕು ಹಲ್ಲೆ ಆರೋಪಿಯಾಗಿದ್ದಾನೆ. ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ ಅವರ ಸ್ವಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿದೆ.
ಇದನ್ನೂ ಓದಿ | Karnataka Election : ಜೋರಾಯ್ತು ಬೆಟ್ಟಿಂಗ್; ಹಣ, ಚಿನ್ನ, ಸೈಟ್, ಬೈಕೇ ಪಣ; ಹಾಟ್ ಫೇವರಿಟ್ ಯಾರು?
ಹನೂರು ಜೆಡಿಎಸ್ ಅಭ್ಯರ್ಥಿ ಪರ ಬೆಟ್ಟಿಂಗ್
ಚಾಮರಾಜನಗರ: ಜಿಲ್ಲೆಯಲ್ಲಿ ಗುಂಡ್ಲುಪೇಟೆಯ ಬಳಿಕ ಹನೂರು ಕ್ಷೇತ್ರದಲ್ಲೂ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಹನೂರು ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಪರ ಬೆಟ್ಟಿಂಗ್ ಮಾಡಲಾಗಿದೆ. ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಚುನಾವಣೆಯಲ್ಲಿ ಗೆಲ್ಲುತ್ತಾರೆ, ಬೇಕಿದ್ದರೆ ಒಂದು ಎಕರೆ ಜಮೀನು ಬೆಟ್ಟಿಂಗ್ ಕಟ್ಟಬಹುದು ಎಂದು ಜೆಡಿಎಸ್ ಕಾರ್ಯಕರ್ತರೊಬ್ಬರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹನೂರು ಮೂಲದ ರಂಗಸ್ವಾಮಿ ಎಂಬುವವರು ವಿಡಿಯೊ ಮಾಡಿ, ಬೆಟ್ಟಿಂಗ್‌ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.