ಬೆಂಗಳೂರು: ರಾಷ್ಟ್ರೀಯ ಪಕ್ಷಗಳು ತಮ್ಮನ್ನು ತುಳಿಯುತ್ತಿವೆ, ನಾವು ಯಾರಿಗೂ ಬಾಗುವುದಿಲ್ಲ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬೆನ್ನ ಹಿಂದೆಯೇ, ಜೆಡಿಎಸ್‌ನಿಂದ ಇಬ್ಬರು ʼಶ್ರೀನಿವಾಸʼ ಶಾಸಕರು ಕೈಕೊಟ್ಟಿದ್ದಾರೆ. ಶುಕ್ರವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕೋಲಾರ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್‌ಗೆ ಮತ ನೀಡಿದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಬಿಜೆಪಿಗೆ ಜೈ ಎಂದಿದ್ದಾರೆ. ಜಿ. ಟಿ. ದೇವೇಗೌಡರು ಹೊರನಡೆಯುವ ಮುನ್ಸೂಚನೆ ನೀಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎರಡು, ಕಾಂಗ್ರೆಸ್‌ಗೆ ಒಂದು ಸ್ಥಾನ ಖಚಿತವಾಗಿದ್ದು, ನಾಲ್ಕನೇ ಸ್ಥಾನವನ್ನು ತಾವು ಗಳಿಸಬಹುದು ಎಂದು ಜೆಡಿಎಸ್ ಲೆಕ್ಕ ಹಾಕಿತ್ತು. ಸ್ವತಃ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆಗೆ ಮಾತನಾಡಿ, ಕಾಂಗ್ರೆಸ್‌ನ ಹೆಚ್ಚುವರಿ 24 ಮತಗಳನ್ನು ಜೆಡಿಎಸ್‌ನ ಕುಪೇಂದ್ರ ರೆಡ್ಡಿಗೆ ನೀಡಲು ಒಪ್ಪಿಸಿದ್ದರು.
ಹೇಗಿದ್ದರೂ ಹೈಕಮಾಂಡೇ ಒಕೆ ಎಂದಿದೆಯಲ್ಲ, ಇನ್ನು ರಾಜ್ಯ ನಾಯಕರು ಯಾವ ಲೆಕ್ಕ ಎಂದು ಕುಪೇಂದ್ರ ರೆಡ್ಡಿ ಸುಮ್ಮನಾಗಿದ್ದರು. ಚುನಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜತೆಗೆ ಸಭೆ ನಡೆಸಿದರೇ ಹೊರತು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ಶಾಸಕ ಸಿದ್ದರಾಮಯ್ಯ ಅವರ ಬಳಿ ಹೋಗಲೇ ಇಲ್ಲ. ಹೈಕಮಾಂಡ್ ಮೇಲೆ ಒತ್ತಡ ಹೇರಿದ ಸಿದ್ದರಾಮಯ್ಯ. ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್‌ರನ್ನು ಕಣಕ್ಕಿಳಿಸಿದರು.
ಇಲ್ಲಿಂದ ಜೆಡಿಎಸ್ ನಾಯಕರ ರೌದ್ರಾವತಾರ ಆರಂಭವಾಯಿತು. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಿದ್ದರಾಮಯ್ಯ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಕುಮಾರಸ್ವಾಮಿ, ರೇವಣ್ಣ ದೂರಿದರು. ಅಲ್ಪಸಂಖ್ಯಾತರ ಪರ ಎಂದರೆ ಸಾಲದು, ಕಾಂಗ್ರೆಸ್‌ನ ಅಲ್ಪಸಂಖ್ಯಾತ ಅಭ್ಯರ್ಥಿಗೆ ನಿಮ್ಮ ಮತ ನೀಡಿ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಚುನಾವಣೆ ದಿನ ಕೋಲಾರ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎನ್ನುವುದು ನಿರೀಕ್ಷೆಯಲ್ಲಿತ್ತು. ಗುರುವಾರವಷ್ಟೆ ಶ್ರೀನಿವಾಸಗೌಡ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ರನ್ನು ಭೇಟಿ ಮಾಡಿದ್ದರು. ಶ್ರೀನಿವಾಸಗೌಡ ನಮಗೆ ಮತ ನೀಡುವುದಿಲ್ಲ ಎಂದು ಮತದಾನ ಆರಂಭವಾಗುವುದಕ್ಕೂ ಮುನ್ನವೇ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದರು. ಆದರೆ ಅಚ್ಚರಿ ಮೂಡಿಸಿದ್ದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ನಡೆ.
ಬಿಜೆಪಿಗೆ ಜೈ ಎಂದ ಎರಡನೇ ಶ್ರೀನಿವಾಸ
ಕೋಲಾರ ಶಾಸಕ ಶ್ರೀನಿವಾಸ ಗೌಡ ರೀತಿಯಲ್ಲೆ ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಸಹ ಜನತಾದಳ ನಾಯಕರೊಂದಿಗೆ ಮುನಿಸಿಕೊಂಡಿರುವುದು ಅನೇಕ ದಿನಗಳಿಂದಲೇ ತಿಳಿದಿತ್ತು. ತಮ್ಮ ಪರ್ಯಾಯ ನಾಯಕರನ್ನು ಗುಬ್ಬಿಯಲ್ಲಿ ಜೆಡಿಎಸ್ ಬೆಳೆಸುತ್ತಿರುವುದಕ್ಕೆ ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದರು. ಅವರು ಬಹುಶಃ ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಮತದಾನದ ನಂತರ ಜೆಡಿಎಸ್ ನಾಯಕರು, ಶ್ರೀನಿವಾಸ್ ಖಾಲಿ ಮತಪತ್ರ ಹಾಕಿದ್ದಾರೆ ಎಂದು ತಿಳಿದಿದ್ದರು. ಯಾರಿಗೂ ಮತ ನೀಡದೆ ಕುಲಗೆಟ್ಟ ಮತ ಹಾಕಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸಂಜೆ ಮತಪತ್ರ ಎಣಿಕೆ ವೇಳೆ ಅಚ್ಚರಿ ಕಾದಿತ್ತು. ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್ ಸಿರೋಯಾಗೆ ತಮ್ಮ ಮೊದಲ ಪ್ರಾಶಸ್ತ್ಯದ ಮತ ನೀಡಿದ್ದಾರೆ. ಈ ಮೂಲಕ ಲೆಹರ್‌ಸಿಂಗ್ ಮತಸಂಖ್ಯೆ 33ಕ್ಕೆ ಏರಿಕೆಯಾಗುವಲ್ಲಿ ಕಾರಣರಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಸ್.ಆರ್. ಶ್ರೀನಿವಾಸ್ ಬಿಜೆಪಿ ಕಡೆ ವಾಲುವ ಮುನ್ಸೂಚನೆ ನೀಡಿದ್ದಾರೆ.
ಕುಮಾರಸ್ವಾಮಿ ಆರೋಗ್ಯ ಏರುಪೇರು
ಮೇಲಿಂದ ಮೇಲೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿ ಕೂಗಾಡಿದ್ದರಿಂದಾಗಿ ಅವರ ಆರೋಗ್ಯ ಕೈಕೊಟ್ಟಿದೆ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮಾಜಿ ಕುಮಾರಸ್ವಾಮಿ ಒಂದು ವಾರ ವಿಶ್ರಾಂತಿಗೆ ತೆರಳಿದ್ದಾರೆ. ಫಲಿತಾಂಶದ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ಕನಿಷ್ಠ ಒಂದು ವಾರವಾದರೂ ಯಾರನ್ನಾದರು ಭೇಟಿ ಮಾಡುವುದು ಅಥವಾ ಹೆಚ್ಚು ಮಾತನಾಡುವುದು ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣಕ್ಕೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ನಾನು ಸಾರ್ವಜನಿಕರ ಭೇಟಿಗೆ ಲಭ್ಯ ಇರುವುದಿಲ್ಲ. ಹೀಗಾಗಿ ಬಿಡದಿ ತೋಟಕ್ಕೆ ಅಥವಾ ಪಕ್ಷದ ಕಚೇರಿಗೆ ನನ್ನ ಭೇಟಿಗೆ ಯಾರೂ ಬರಬಾರದಾಗಿ ಮನವಿ ಮಾಡುತ್ತೇನೆ. ಸಾರ್ವಜನಿಕರು ಅನ್ಯಥಾ ಭಾವಿಸಬಾರದು. ವಾರದ ನಂತರ ಎಂದಿನಂತೆ ಎಲ್ಲರನ್ನೂ ಭೇಟಿ ಮಾಡುತ್ತೇನೆ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೇನೆ. ದಯಮಾಡಿ ಸಾರ್ವಜನಿಕರು ಸಹಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.