ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ (Leopard attack) ಮುಂದುವರಿದಿದೆ. ಕಾಡಂಚಿನ ಭಾಗದ ಜನರಲ್ಲಿದ್ದ ಆತಂಕ, ಇದೀಗ ನಗರ ಪ್ರದೇಶಕ್ಕೂ ಕಾಲಿಟ್ಟಿದೆ. ಮೈಸೂರಿನ ಹೃದಯ ಭಾಗದಲ್ಲಿ ಕಾಣಿಸಿಕೊಂಡ ಎರಡು ಚಿರತೆ ಜನರ ನಿದ್ದೆಗೆಡಿಸಿವೆ.
ಮೈಸೂರಿನ ಹೃದಯ ಭಾಗದಲ್ಲೇ ಇರುವ ಒಂಟಿಕೊಪ್ಪಲಿನ ಪ್ರತಿಷ್ಠಿತ ಸಿಎಫ್‌ಟಿಆರ್‌ಐ ಶಾಲಾ ಆವರಣದಲ್ಲೇ ಚಿರತೆ ಕಾಣಿಸಿಕೊಂಡಿದ್ದು ಆತಂಕವನ್ನು ಹೆಚ್ಚಿಸಿದೆ. ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ (ಸಿಎಫ್‌ಟಿಆರ್‌ಐ) ಆವರಣ ಸುಮಾರು ನೂರಾರು ಎಕರೆಯಲ್ಲಿದೆ. ಇದು ಆಹಾರ ಸಂಸ್ಕರಣೆ ಮತ್ತು ಸಂಶೋಧನಾ ವಿಚಾರದಲ್ಲಿ ದೇಶದಲ್ಲೇ ಅತ್ಯಂತ ಪ್ರತಿಷ್ಠಿತ ಸಂಸ್ಥೆ. ಇದರ ಆವರಣದಲ್ಲಿ ಮಂಗಳವಾರ ರಾತ್ರಿ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಸಿಎಫ್‌ಟಿಆರ್‌ಐನ ಭದ್ರತಾ ಸಿಬ್ಬಂದಿ ಪ್ರಭಾಕರ್ ಎಂಬುವರು ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು ೧:೩೦ ರ ವೇಳೆಯಲ್ಲಿ ರಸ್ತೆ ಸಿಎಫ್‌ಟಿಆರ್‌ಐನ ಒಳಾವರಣದ ರಸ್ತೆ ದಾಟಿ ಮರಗಡಿಗಳಿರುವ ಕಡೆಗೆ ತೆರಳಿವುದನ್ನು ನೋಡಿದ್ದಾರೆ. ತಕ್ಷಣ ಸಿಎಫ್‌ಟಿಆರ್‌ಐನ ಮೇಲಧಿಕಾರಿಗಳಿ ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿ ಚಿರತೆ ಕಂಡು ಮಾಹಿತಿ ನೀಡುತ್ತಿದ್ದಂತೆಯೇ ಎಚ್ಚೆತ್ತ ಸಿಎಫ್ಟಿಆರ್‌ಐನ ಪ್ರಭಾರ ನಿರ್ದೇಶಕ ಸತೀಶ್ ಮೊದಲಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಸಿಎಫ್‌ಟಿಆರ್‌ಐ ಶಾಲೆಗೆ ರಜೆ ನೀಡಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ.
ಸಿಎಫ್‌ಟಿಆರ್‌ಐ ಆವರಣದಲ್ಲಿ ಚಿರತೆಗಳು ಕಾಣಿಸಿಕೊಂಡಿರುವುದು ಇದೇ ಮೊದಲು. 150 ಎಕರೆ ವಿಸ್ತೀರ್ಣದ ಹಲವೆಡೆ ಅರಣ್ಯದ ಪ್ರದೇಶವಿದೆ. ಇಲ್ಲಿ ನವಿಲು, ಮೊಲ, ಹಾವು, ಮುಂಗುಸಿ ಸೇರಿದಂತೆ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳು ವಾಸಿಸುತ್ತಿವೆ. ಇದೇ ಮೊದಲ ಬಾರಿ ಚಿರತೆಗಳು ಕಾಣಿಸಿಕೊಂಡಿವೆ. ಸಿ ಎಫ್ ಟಿ ಆರ್ ಐ ಆವರಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಹಗಲು ಹೊತ್ತಿನ ದೃಶ್ಯಗಳು ಮಾತ್ರ ಸೆರೆಯಾಗುತ್ತವೆ. ಹಾಗಾಗಿ ಚಿರತೆಗಳು ರಾತ್ರಿ ವೇಳೆ ಕಾಣಿಸಿಕೊಂಡಿರುವುದರಿಂದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಸದ್ಯದಲ್ಲೇ ಅತ್ಯಾಧುನಿಕ ಮಾದರಿಯ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ರಾತ್ರಿಯ ವೇಳೆಯ ಚಲನವಲನಗಳನ್ನು ಗಮನಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದರು.
ಮುಂದುವರಿದ ಭಯ
ಇತ್ತೀಚೆಗಷ್ಟೇ ಟಿ. ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿರುವ ಘಟನೆ ಬೆನ್ನಲ್ಲೇ ಮೈಸೂರು ನಗರದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಜನರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ. ಸಿಎಫ್‌ಟಿಆರ್‌ಐ ಆವರಣದಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕು ಹಿಡಿದು ಸುತ್ತಾಡುತ್ತಿದ್ದು, ಚಿರತೆ ಸೆರೆ ನಂತರವಷ್ಟೇ ನಗರದಲ್ಲಿ ಆತಂಕ ದೂರವಾಗಲಿದೆ.
ಇದನ್ನೂ ಓದಿ | Leopard Attack | ಕೋಲಾರ, ರಾಮನಗರದಲ್ಲಿ ಬೋನಿಗೆ ಬಿದ್ದ 2 ಚಿರತೆ; ಗದ್ದೆಯಲ್ಲಿ ಪತ್ತೆಯಾದ ಮರಿಗಳು