ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಸೂಕ್ತ ದಾಖಲೆಗಳಿಲ್ಲದೆ ಇಬ್ಬರು ಬಾಲಕಿಯರಿಗೆ ಆಶ್ರಯ ನೀಡಿದುದು ಪತ್ತೆಯಾಗಿದೆ.
ಮಠದ ಆವರಣದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದು, ಇವರ ಬಗ್ಗೆ ಮಾಹಿತಿ ದಾಖಲಿಸದೆ ಅಕ್ರಮ ಎಸಗಲಾಗಿದೆ ಎಂದು ಬಾಲ ನ್ಯಾಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಒಬ್ಬಳು ನಾಲ್ಕೂವರೆ ವರ್ಷದ ಬಾಲಕಿ, ಇನ್ನೊಬ್ಬಾಕೆ 16 ವರ್ಷದವಳು. ಮಡಿಲು ಯೋಜನೆ ಪ್ರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡದೆ ಅಕ್ರಮವಾಗಿ ಇವರಿಗೆ ಆಶ್ರಯ ನೀಡಲಾಗಿದೆ.
ಬಾಲ ನ್ಯಾಯ ಕಾಯಿದೆ ಉಲ್ಲಂಘಿಸಲಾಗಿದೆ ಎಂದು ಚಿತ್ರದುರ್ಗ ಮಕ್ಕಳ ರಕ್ಷಣಾ ಘಟಕದಿಂದ ದೂರು ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಮಧುಕುಮಾರ್ ಈ ಬಗ್ಗೆ ದೂರು ನೀಡಿದ್ದರು. ಮುರುಘಾ ಶರಣರು ಮತ್ತು ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ ಕೇಸ್ ದಾಖಲಾಗಿದೆ. ಹಾಸ್ಟೆಲ್‌ನಲ್ಲಿದ್ದ ಮಕ್ಕಳನ್ನು ಬೇರೆಡೆ ಶಿಫ್ಟ್ ಮಾಡುವ ವೇಳೆ ಇಬ್ಬರು ಬಾಲಕಿಯರು ಪತ್ತೆಯಾಗಿದ್ದಾರೆ.
ಮುರುಘಾ ಶ್ರೀ ವಿರುದ್ಧ ಆಗಸ್ಟ್ 26ರಂದು ಪೋಕ್ಸೋ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತೀಚೆಗೆ ಇನ್ನೆರಡು ಪೋಕ್ಸೋ ದೂರುಗಳು ಅವರ ವಿರುದ್ಧ ದಾಖಲಾಗಿವೆ.
ಇದನ್ನೂ ಓದಿ | POCSO ACT | ಏನಿದು ಪೋಕ್ಸೋ ಕಾಯಿದೆ, ಅಪರಾಧಿಗಳಿಗೆ ಶಿಕ್ಷೆ ಏನು?