ಚಿಕ್ಕಮಗಳೂರು: ಬಿಜೆಪಿ ಮಾಜಿ ಸಚಿವ ಡಿ.ಎನ್.ಜೀವರಾಜ್ (DN Jeevaraj) ವಿರುದ್ಧದ ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಸುಳ್ಳು ಅತ್ಯಾಚಾರ ಆರೋಪ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿರುವುದು ಬಯಲಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ಎನ್.ಆರ್.ಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ತೀರ್ಪು ನೀಡಿದೆ.
ಯುವತಿ ಅರಣ್ಯಾ ಹಾಗೂ ಮನು ಎಂಬುವರಿಗೆ ಶಿಕ್ಷೆಯಾಗಿದೆ. ಯುವತಿ ಅರಣ್ಯಾಗೆ 2 ವರ್ಷ ಜೈಲು, 5000 ರೂ. ದಂಡ, ಮನುಗೆ 3 ವರ್ಷ ಜೈಲು, 19 ಸಾವಿರ ದಂಡ ವಿಧಿಸಲಾಗಿದೆ. 2013ರ ನ. 8ರಂದು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಡಿ.ಎನ್. ಜೀವರಾಜ್ ವಿರುದ್ಧ ಯುವತಿ ಅರಣ್ಯಾ ದೂರು ನೀಡಿದ್ದಳು. ಪ್ರಕರಣದ ತನಿಖೆಯನ್ನು ಅಂದಿನ ಕಾಂಗ್ರೆಸ್ ಸರ್ಕಾರ ಸಿಐಡಿಗೆ ವಹಿಸಿತ್ತು.
ಮಾನ ಹಾನಿಯ ಬೆದರಿಕೆ ಒಡ್ಡಿ, ಹಣಕ್ಕಾಗಿ ಪೀಡಿಸಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಅರಣ್ಯ, ಮನು ವಿರುದ್ಧ ಮಾಜಿ ಸಚಿವ ಜೀವರಾಜ್, ಆಶಿಶ್ ಕುಮಾರ್ ಹಾಗೂ ನಾಗರಾಜ್ ಎಂಬುವರು ಪ್ರತಿ ದೂರು ನೀಡಿದ್ದರು. 5 ಕೋಟಿ ರೂ. ಕೇಳಿ ಕೊನೆಗೆ 22 ಲಕ್ಷ ರೂ. ನೀಡಬೇಕು ಎಂದು ಅರಣ್ಯ, ಮನು ಮಾಜಿ ಸಚಿವರ ಮುಂದೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ | Tourists Rescued : ಗೋಕರ್ಣ ಕಡಲಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಮಂದಿ ರಕ್ಷಣೆ
ಇದೀಗ ಜೀವರಾಜ್ ವಿರುದ್ಧದ ಆರೋಪಕ್ಕೆ ದಾಖಲೆ ಇಲ್ಲ, ಸುಳ್ಳು ಆರೋಪ ಎಂದು ಸಿಐಡಿ ಬಿ ರಿಪೋರ್ಟ್ ಸಲ್ಲಿಸಿದೆ. ಹೀಗಾಗಿ ಐದು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಎನ್.ಆರ್.ಪುರ ಕೋರ್ಟ್ ಆರೋಪಿಗಳಿ ಜೈಲು ಶಿಕ್ಷೆ ನೀಡಿದೆ.
ಸುಳ್ಳು ಆರೋಪವೇ ನನ್ನ ಎರಡು ಸೋಲಿಗೆ ಕಾರಣವಾಯ್ತು
ಸುಳ್ಳು ಅತ್ಯಾಚಾರ ಪ್ರಕರಣದ ಬಗ್ಗೆ ಶೃಂಗೇರಿ ಬಿಜೆಪಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಪ್ರತಿಕ್ರಿಯಿಸಿ, ಸುಳ್ಳು ಆರೋಪವೇ ನನ್ನ ಎರಡು ಸೋಲಿಗೆ ಕಾರಣವಾಯ್ತು. ನಟರಿಗೆ ಶಿಕ್ಷೆಯಾಗಿದೆ, ಪ್ರೊಡ್ಯೂಸರ್, ಡೈರಕ್ಟರ್‌ಗೆ ಭಗವಂತನ ಕೋರ್ಟ್‌ನಲ್ಲಿ ಶಿಕ್ಷೆಯಾಗಲಿದೆ ಎಂದು ಹೆಸರೇಳದೆ ಹಾಲಿ ಶಾಸಕ ರಾಜೇಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.