Site icon Vistara News

ವಿಧಾನಸೌಧ ರೌಂಡ್ಸ್‌ : ಸ್ಪೀಕರ್‌ ಆಗಿ ಮನಗೆದ್ದ ಖಾದರ್‌, ಲಕ್ಷ್ಮಿ ಈಗ ʼಗೃಹ ಲಕ್ಷ್ಮಿʼ ಹೆಬ್ಬಾಳ್ಕರ್‌!

Vidhana Soudha Rounds Column

U T Khader Gives A New Dimension To Speaker Chair, Lakshmi Hebbalkar Is Now Griha Lakshmi Hebbalkar

ರಾಜ್ಯದಲ್ಲಿ ಮಳೆ ಕೆಲವು ಜಿಲ್ಲೆಗಳಿಗೆ ಸೀಮಿತವಾದಂತೆ ವಿಧಾನಸಭೆಯಲ್ಲೂ ಚರ್ಚೆಗಳು ಕೇವಲ ಎರಡು ಮೂರು ವಿಚಾರಗಳಿಗೆ ಮಾತ್ರ ಸೀಮಿತವಾಗಿರುವುದು ಬೇಸರ ತರಿಸಿದೆ. ಈ ಬಾರಿ ಹಲವು ಜಿಲ್ಲೆಗಳಲ್ಲಿ ಬರ ಆಗುವುದು ಖಚಿತ ಎನ್ನುವ ಸುಳಿವು ಇದ್ದರೂ ಬಯಲು ಸೀಮೆಯ ಶಾಸಕರು ಈ ಬಗ್ಗೆ ತುಟಿಕ್‌‌ ಪಿಟಿಕ್‌ ಅನ್ನುತ್ತಿಲ್ಲ. ಸದನವನ್ನು ಖಡಕ್‌ ಆಗಿ ನಡೆಸುವಲ್ಲಿ ಸ್ಪೀಕರ್‌ ಯು ಟಿ ಖಾದರ್‌ ಅವರು ಯಶಸ್ವಿಯಾಗಿದ್ದಾರೆ. ಗೃಹ ಲಕ್ಷ್ಮೀ ಯೋಜನೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರನ್ನೇ ಬದಲಾಯಿಸಲು ಕಾರಣವಾಗಿದೆ! ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ನಡುವೆ ಎಚ್ ಡಿ ರೇವಣ್ಣ ಪೌರೋಹಿತ್ಯ ವಹಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಸ್ಪೀಕರ್‌ ಸ್ಥಾನದ ತೂಕ ಹೆಚ್ಚಿಸಿದ ಯು ಟಿ ಖಾದರ್‌‌

ರಾಜ್ಯದಲ್ಲಿ ಕಾಂಗ್ರೆಸ್‌‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವನ್ನು ಸ್ಪೀಕರ್‌ ಯು ಟಿ ಖಾದರ್‌ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಖಾದರ್‌ ಅವರು ಸ್ಪೀಕರ್‌ ಆಗಿ ಅಧಿಕಾರ ವಹಿಸಿಕೊಂಡಾಗ ಬಸನಗೌಡ ಪಾಟೀಲ್ ಯ‌ತ್ನಾಳ್‌ ಎರಡು ದಿನ ಅವರ ಭಾಷೆಯ ಬಗ್ಗೆ ಕಿರಿಕಿರಿ ಮಾಡಿದ್ದರು. ಆದರೆ ಆ ಮಾತಿಗೆ ವಿಚಲಿತರಾಗದೆ ಖಾದರ್‌ ಅವರು ಯಶಸ್ವಿಯಾಗಿ ಸದನವನ್ನು ಕಂಟ್ರೋಲ್‌ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಮಂದಿ ಸ್ಪೀಕರ್‌ ಸ್ಥಾನ ಅಲಂಕರಿಸದವರು ತಮ್ಮ ಪಕ್ಷದ ಕಡೆ ವಾಲುತ್ತಾರೆ ಅನ್ನೋ ಆಕ್ಷೇಪಗಳಿಂದ ಖಾದರ್‌ ಹೊರತಾಗಿರುವುದು ಕಾಣುತ್ತಿದೆ. ಸರ್ಕಾರಕ್ಕೆ ಸಲಹೆ, ವಿಪಕ್ಷಗಳಿಗೆ ಅವಕಾಶ ಕೊಡುವುದರ ಜತೆಗೆ ಕಿರಿಯ ಶಾಸಕರಿಗೆ ಧೈರ್ಯ ತುಂಬಿ ಮಾತನಾಡಲು ಅವಕಾಶ ಮಾಡಿ ಕೊಡುವ ಸ್ಪೀಕರ್‌ ನಡೆ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸದನಕ್ಕೆ ತಪ್ಪದೇ ಹಾಜರಾಗುವ ಶಾಸಕರ ಹೆಸರನ್ನು ಸದನದಲ್ಲಿ ಪ್ರಕಟಿಸುವ ಮೂಲಕ ಇತರ ಶಾಸಕರಿಗೂ ಸದನದ ಬಗ್ಗೆ ಆಸಕ್ತಿ ಬರುವ ಹಾಗೆ ಮಾಡಿದ್ದಾರೆ.

ಸಿದ್ದರಾಮಯ್ಯ-ಡಿಕೆಶಿ ಮೈತ್ರಿ ಮಾಡಿಸಿದ ರೇವಣ್ಣ!

ರಾಜ್ಯದಲ್ಲಿ ಯಾವುದೇ ಶಾಸಕರ ಕೆಲಸ ಆಗದೇ ಇರಬಹುದು. ಆದರೆ ಹೊಳೆನರಸಿಪುರ ಶಾಸಕ ಎಚ್‌ ಡಿ ರೇವಣ್ಣ ಅವರ ಕೆಲಸ ಯಾವುದೇ ಇಲಾಖೆಯಲ್ಲಿ ಪೆಂಡಿಂಗ್‌ ಇರುವುದಿಲ್ಲ! ಯಾವುದೇ ಸರ್ಕಾರ ಬಂದರೂ ತಮ್ಮನ್ನ ಆಯ್ಕೆ ಮಾಡಿದ ಜನರ ಕೆಲಸ ಮಾಡಲು ಅವರ ಜತೆ ರೇವಣ್ಣ ಹೊಂದಿಕೊಂಡು ಬಿಡ್ತಾರೆ. ಕಳೆದ ವಾರ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ಒಂದೇ ಸಮಯಕ್ಕೆ ಸಿಕ್ಕಾಗ “”ನೀವಿಬ್ಬರು ಒಂದಾಗಿ ಹೋಗಿ. ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ಕೊಡಿ. ಡಿ ಕೆ ಶಿವಕುಮಾರ್‌ ನೀವು ಸಿದ್ದರಾಮಯ್ಯ ಅವರ ಕೈ ಬಿಡಬೇಡಿ, ಸಿದ್ದಣ್ಣ ನಂಬಿದವರ ಕೈ ಬಿಡಲ್ಲʼʼ ಅಂತ ಹೇಳಿ ಇಬ್ಬರ ನಡುವೆ “ಘಟಬಂಧನ್‌ʼ ಮಾಡಿಸಿದ್ದಾರಂತೆ! ಕಾಂಗ್ರೆಸ್‌ ಹೈಕಮಾಂಡ್‌ ಬಳಿ ಆಗದನ್ನು ಒಂದು ನಿಂಬೆಹಣ್ಣು ತೋರಿಸಿ ರೇವಣ್ಣ ಒಂದು ಮಾಡಿ ಮುಗಿಸಿದ್ದಾರೆ ಎಂದು ವಿಧಾನಸೌಧದ ಮೊಗಸಾಲೆಯಲ್ಲಿ ಚರ್ಚೆ ಆಗುತ್ತಿದೆ!

ವಿಪಕ್ಷ ನಾಯಕ ಆದರೆ ಒಬ್ಬರೇ ಲೀಡರ್‌, ಈಗ 65 ಶಾಸಕರೂ ಲೀಡರ್‌ಗಳೇ!

ಜಂಟಿ ಅಧಿವೇಶನ ಆರಂಭವಾಗಿ ಹದಿನೈದು ದಿನ ಕಳೆದರೂ ಬಿಜೆಪಿ ಹೈಕಮಾಂಡ್‌ ಎರಡೂ ಸದನಗಳಿಗೆ ವಿಪಕ್ಷ ನಾಯಕರನ್ನು ನೇಮಕ ಮಾಡಿಲ್ಲ. ಇದು ಸಹಜವಾಗಿಯೇ ರಾಜ್ಯ ಬಿಜೆಪಿ ನಾಯಕರಿಗೆ ಮುಜುಗರ ತರಿಸಿದೆ. ಆದರೆ ಈ ಬಗ್ಗೆ ಲಾಂಜ್‌ನಲ್ಲಿ ಮಾತನಾಡುವ ಬಿಜೆಪಿ ಹಿರಿಯ ಶಾಸಕರೊಬ್ಬರು “”ಹೈಕಮಾಂಡ್‌‌ ಆಯ್ಕೆ ಮಾಡಿದರೆ ಒಬ್ಬರೇ ವಿಪಕ್ಷ ನಾಯಕ, ಈಗ 65 ಶಾಸಕರೂ ವಿಪಕ್ಷ ನಾಯಕರೇ. ನಮಗೆ ಇದೇ ಮಜಾ ಕೊಡ್ತಿದೆʼʼ ಎಂದು ವ್ಯಂಗ್ಯವಾಗಿ ಹೇಳಿದ್ದು ಮಾರ್ಮಿಕವಾಗಿಯೂ ಇದೆ.

ರಾಜಕೀಯ ನಿವೃತ್ತಿ ಹೇಳಿಕೆ ಓನ್ಲಿ ಜೋಕ್‌!‌

ಈ ಬಾರಿಯ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಮಾತುಗಳನ್ನು ಆಡಿದ್ದಾರೆ. ಇದನ್ನು ಕೇಳಿಸಿಕೊಂಡಿರುವ ಜನ ಮಾತ್ರ ನಮ್ಮ ನಾಯಕರು ಈ ಹೇಳಿಕೆಗಳು “ಓನ್ಲಿ ಜೋಕ್‌, ನಾಟ್‌ ಸಿರಿಯಸ್‌ʼ ಅಂತಿದ್ದಾರೆ. ಯಾಕೆಂದರೆ ಸಿದ್ದರಾಮಯ್ಯ 2013ರಲ್ಲಿಯೇ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಬಳಿಕ ಎರರಡು ಚುನಾವಣೆ ಫೇಸ್‌ ಮಾಡಿದರು. 2023ರಲ್ಲಿ ಕುಮಾರಸ್ವಾಮಿ 123 ಸ್ಥಾನ ಗೆಲ್ಲದಿದ್ರೆ ನಾನು ಪಕ್ಷವನ್ನ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟು 19 ಸ್ಥಾನ ಗೆದ್ದಿದ್ದರು. ಈಗ ಆ ಬಗ್ಗೆ ಮಾತಿಲ್ಲ ಕಥೆಯಿಲ್ಲ. ಹೀಗಾಗಿ ವರ್ಗಾವಣೆ ವಿಚಾರದಲ್ಲಿ ನಾವು ದುಡ್ಡು ಮಾಡಿಲ್ಲ ಅನ್ನೋ ರೀತಿಯ ಇವರ ಹೇಳಿಕೆಗಳು ಕೇವಲ ಜೋಕ್‌ ಬಿಟ್ಟರೆ ಇದರಲ್ಲಿ ಗಂಭೀರತೆ ಏನಿಲ್ಲ ಎಂಬ ಮಾತು ವಿಧಾನಸೌಧ ಆವರಣದಲ್ಲಿ ಕೇಳಿ ಬರುತ್ತಿದೆ.

ಲಕ್ಷ್ಮಿ ಹೆಬ್ಬಾಳ್ಕರ್‌ ಅಲ್ಲ ಗೃಹ ಲಕ್ಷ್ಮಿ ಹೆಬ್ಬಾಳ್ಕರ್‌!

ಗೃಹ ಲಕ್ಷ್ಮಿ ಯೋಜನೆಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಇನ್ನಿಲ್ಲದ ತಯಾರಿ ಶುರು ಮಾಡಿದ್ದಾರೆ. ಜುಲೈ 19ರಿಂದ ಚಾಲನೆ ಕೊಡುತ್ತಿರುವ ಯೋಜನೆಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ಘೋಷಣೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಲಕ್ಷ್ಮಿ ಹೆಬ್ಬಾಳ್ಕರ್‌‌ ವಿಧಾನಸೌಧದಲ್ಲಿ ಓಡಾಡುತ್ತಿದ್ದರೆ ಅವರನ್ನು ಗೃಹ ಲಕ್ಷ್ಮಿ ಹೆಬ್ಬಾಳ್ಕರ್‌ ಎಂದು ಕರೆಯುತ್ತಿರುವುದು ಕಂಡು ಬಂತು!

ಇದನ್ನೂ ಓದಿ: ವಿಧಾನಸೌಧ ರೌಂಡ್ಸ್‌ : ಸಿದ್ದರಾಮಯ್ಯ ಬೊಂಬಾಟ್‌ ಬಜೆಟ್‌, ಪ್ರದೀಪ್‌ ಈಶ್ವರ್‌ ಮಾತಿನ ಎಡವಟ್‌!

ಹೊಸ ಶಾಸಕರ ಚಕ್ಕರ್‌; ಪ್ರದೀಪ್‌ ಈಶ್ವರ್‌‌, ನಯನ ಮೋಟಮ್ಮ ಹಾಜರ್‌

ಈ ಬಾರಿ ಚುನಾವಣೆಯಲ್ಲಿ ಮೂರು ಪಕ್ಷಗಳಿಂದ ಸುಮಾರು 70 ಶಾಸಕರು ನೂತನವಾಗಿ ಗೆದ್ದು ಬಂದಿದ್ದಾರೆ. ಆದರೆ ಅವರಲ್ಲಿ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಸದನಕ್ಕೆ ಹಾಜರಾಗುತ್ತಿದ್ದಾರೆ. ಅದರಲ್ಲೂ ಪ್ರದೀಪ್‌ ಈಶ್ವರ್‌‌, ದರ್ಶನ್‌ ಪುಟ್ಟಣಯ್ಯ, ದರ್ಶನ್‌ ಧ್ರುವನಾರಾಯಣ್‌‌ ನಿತ್ಯವೂ ಹಾಜರಾಗಿ ಸ್ಪೀಕರ್‌ ಮೆಚ್ಚುಗೆಗೆ ಕಾರಣಾರಾಗಿದ್ದಾರೆ. ಆದರೆ ಬಯಲುಸೀಮೆಯಿಂದ ಗೆದ್ದು ಬಂದಿರುವ ಕೆಲವು ಹೊಸ ಶಾಸಕರು ಬೆಳಗ್ಗೆ ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಜಾಗ ಖಾಲಿ ಮಾಡುತ್ತಾರೆ. ಹೊಸದರಲ್ಲೇ ಇಂಥ ನಿರಾಸಕ್ತಿ ಬೆಳೆಸಿಕೊಂಡರೆ ಮುಂದೆ ಹೇಗೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

Exit mobile version