Site icon Vistara News

Udupi Election Results: ಕೃಷ್ಣನ ನಾಡು ಉಡುಪಿಯಲ್ಲಿ ಯಶ ಕಂಡ ಯಶಪಾಲ್‌ ಸುವರ್ಣ

Udupi Karnataka Election results winner Yashpal suvarna

ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರವೂ ಎಲ್ಲರ ಗಮನ ಸೆಳೆದಿತ್ತು. ಬಿಜೆಪಿಯಲ್ಲಿ ಹಾಲಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಇಲ್ಲಿನ ಫಲಿತಾಂಶದ ಮೇಲೆ ಎಲ್ಲರ ಕಣ್ಣೂ ಇತ್ತು. ಇದೀಗ ಫಲಿತಾಂಶ (Udupi Election Results) ಹೊರಬಿದ್ದಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಅವರು ಜಯ ಸಾಧಿಸಿದ್ದಾರೆ.

ಸ್ಥಾನ ಉಳಿಸಿಕೊಂಡ ಬಿಜೆಪಿ

ಉಡುಪಿ ವಿಧಾನಸಭೆ ಕ್ಷೇತ್ರವನ್ನು ಪರಿಗಣಿಸಿದರೆ ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲಿನಿಂದಲೂ ಬಿಜೆಪಿ ಹಾಲಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ನೀಡುತ್ತದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಘುಪತಿ ಭಟ್ ಬದಲಿಗೆ ಕಾರ್ಯಕರ್ತ, ಮೊಗವೀರ ಸಮುದಾಯದ ಯಶ್ ಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡುವ ಮೂಲಕ ಆಕಾಂಕ್ಷಿಗಳ ಜತೆಗೆ ಮತದಾರರನ್ನು ಕೂಡ ಆಶ್ಚರ್ಯಕ್ಕೀಡಾಗುವಂತೆ ಮಾಡಿತ್ತು. ಪ್ರಾರಂಭದಲ್ಲಿ ರಘುಪತಿ ಭಟ್, ಪಕ್ಷದ ಈ ಅಚಾನಕ್ ನಿರ್ಧಾರದಿಂದ ಬೇಸರಗೊಂಡರೂ ಬಳಿಕ ಅಭ್ಯರ್ಥಿಯ ಜತೆ ಕಣದಲ್ಲಿ ತಮ್ಮದೇ ಚುನಾವಣೆ ಎನ್ನುವಂತೆ ಪ್ರಚಾರವನ್ನು ನಡೆಸಿದ್ದರು. ಹೀಗಾಗಿ ಬಿಜೆಪಿಗೆ ಸಾಂಪ್ರದಾಯಿಕ ಮತ ಸೇರಿದಂತೆ ಕಾರ್ಯಕರ್ತರೊಬ್ಬರಿಗೆ ಟಿಕೆಟ್‌ ಕೊಟ್ಟಿರುವುದೂ ಇಲ್ಲಿ ವರ್ಕೌಟ್‌ ಆಗಿದೆ. ಅಲ್ಲದೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗಿದ್ದೂ ಮತ್ತೊಂದು ಪ್ಲಸ್‌.

ಉಡುಪಿ ಚುನಾವಣಾ ಫಲಿತಾಂಶ

ಕಾಂಗ್ರೆಸ್‌ಗೆ ಪ್ರಮೋದ್‌ ಮಧ್ವರಾಜ್‌ ಏಟು!

ಕಾಂಗ್ರೆಸ್ ಪಾಳಯದಲ್ಲಿ ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಒಂದಿಷ್ಟು ಆಕಾಂಕ್ಷಿಗಳು ಪಟ್ಟಿಯಲ್ಲಿದ್ದರೂ ಕೊನೆಯ ಕ್ಷಣದಲ್ಲಿ ಮೊಗವೀರ ಸಮುದಾಯದ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಟಿಕೆಟ್‌ ನೀಡಿತ್ತು. ಇದರಿಂದ ಒಂದಿಷ್ಟು ಗೊಂದಲ, ಬಂಡಾಯದಂತಹ ಬೆಳವಣಿಗೆಗಳಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅದನ್ನು ಶಮನ ಮಾಡಲಾಗಿತ್ತು. ಹೀಗಾಗಿ ಪ್ರಸಾದ್‌ ರಾಜ್‌ ಭರ್ಜರಿ ಪ್ರಚಾರ ನಡೆಸಿದರಾದರೂ ಗೆಲುವು ಅವರ ಕೈ ಹಿಡಿಯಲಿಲ್ಲ.

ಪ್ರಭಾವ ಬೀರಿದ ಅಂಶಗಳೇನು?

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮೊಗವೀರ ವರ್ಸಸ್ ಮೊಗವೀರ ಸ್ಪರ್ಧೆ ಏರ್ಟಟ್ಟಿದ್ದಂತೂ ಸತ್ಯ. ಹೆಚ್ಚಾಗಿ ಜನರ ಮಧ್ಯೆ ಇರುವ ಯಶ್ ಪಾಲ್ ಸುವರ್ಣ ಅವರಿಗೆ ಕ್ಷೇತ್ರದಲ್ಲಿ ಹಿಡಿತ ಹೆಚ್ಚಿತ್ತು. ಹೀಗಾಗಿ ಬಿಜೆಪಿಯ ಪ್ರಭಾವ, ಹಿಜಾಬ್ ಪ್ರಕರಣದ ಕುರಿತದಾದ ಎರಡೂ ಪಕ್ಷಗಳ ನಿಲುವು, ರಾಜ್ಯ ಮತ್ತು ರಾಷ್ಟ್ರ ನಾಯಕರ ಹೇಳಿಕೆಗಳು ಮತ್ತು ಅಭಿವೃದ್ಧಿ ವಿಚಾರವು ಈ ಚುನಾವಣೆಯಲ್ಲಿ ಪ್ರಭಾವ ಬೀರಿದೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಚುನಾವಣೆ ಫಲಿತಾಂಶ
ರಘುಪತಿ ಭಟ್ (ಬಿಜೆಪಿ): 84,946 | ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್) 72,902 | ಗೆಲುವಿನ ಅಂತರ- 12,044

ಈ ಬಾರಿಯ ಚುನಾವಣಾ ಫಲಿತಾಂಶ
ಯಶ್‌ಪಾಲ್‌ ಸುವರ್ಣ (ಬಿಜೆಪಿ): 97079 | ಪ್ರಸಾದ್ ರಾಜ್ ಕಾಂಚನ್ (ಕಾಂಗ್ರೆಸ್‌) 64303 | ಗೆಲುವಿನ ಅಂತರ: 32776 | ನೋಟಾ: 1316

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version