ಉಡುಪಿ: ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ (Udupi Nethrajyothi College) ಟಾಯ್ಲೆಟ್‌ನಲ್ಲಿ ಮೊಬೈಲ್ (Udupi Toilet Case) ಇಟ್ಟು ಹಿಂದು ವಿದ್ಯಾರ್ಥಿನಿಯೊಬ್ಬಳ (Hindu student) ಟಾಯ್ಲೆಟ್ ಬಳಕೆಯ ದೃಶ್ಯಗಳನ್ನು ಸೆರೆ ಹಿಡಿದ ಆರೋಪ ಎದುರಿಸುತ್ತಿರುವ ಅದೇ ಕಾಲೇಜಿನ ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ (Three muslim students) ಕೋರ್ಟ್ ನಿರೀಕ್ಷಣಾ ಜಾಮೀನು (Anticipatory bail) ನೀಡಿದೆ.
ಜುಲೈ 18ರಂದು ಕಾಲೇಜಿನಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ಕಾಲೇಜು ಆಡಳಿತ ಮಂಡಳಿ ಈ ವಿದ್ಯಾರ್ಥಿನಿಯರನ್ನು ಆಗಲೇ ಅಮಾನತು ಮಾಡಿತ್ತು. ಸಂತ್ರಸ್ತ ವಿದ್ಯಾರ್ಥಿನಿ ಯಾವುದೇ ದೂರು ನೀಡಿಲ್ಲ ಮತ್ತು ಇದು ತಮಾಷೆಗಾಗಿ ಮಾಡಿದ್ದರಿಂದ ಪ್ರಕರಣ ಬೇಡ ಎಂದು ಹೇಳಿದ್ದರಿಂದ ಕಾಲೇಜು ಆಡಳಿತ ಮಂಡಳಿ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದು ಆಲ್ಲೇ ಮುಕ್ತಾಯಗೊಳಿಸಿತ್ತು. ಪೊಲೀಸರು ಕೂಡಾ ಯಾವುದೇ ಮುಂದಿನ ಕ್ರಮ ಕೈಗೊಂಡಿರಲಿಲ್ಲ.
ಆದರೆ, ಯಾವಾಗ ಈ ಪ್ರಕರಣ ದೇಶ ಮಟ್ಟದಲ್ಲಿ ಚರ್ಚೆಯಾಗಲು ಆರಂಭವಾಯಿತೋ, ಪ್ರಕರಣದ ತನಿಖೆ, ಮುಸ್ಲಿಂ ವಿದ್ಯಾರ್ಥಿನಿಯರ ಬಂಧನಕ್ಕೆ ಒತ್ತಡ ಹೆಚ್ಚಾಯಿತೋ ತಕ್ಷಣ ಎಚ್ಚೆತ್ತ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದ್ದರು. ಮೊದಲು ಈ ವಿಷಯದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲು ಯಾವುದೇ ಸುಳಿವುಗಳು ಇಲ್ಲ ಎಂದು ಉಡುಪಿ ಪೊಲೀಸರು ಹೇಳಿದ್ದರು.
ಆದರೆ, ಒತ್ತಡ ಹೆಚ್ಚಾದ ಹಿನ್ನೆಲೆ, ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಂಡ ಕಾರಣ ಮೂವರು ವಿದ್ಯಾರ್ಥಿನಿಯರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಹೀಗೆ ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಬಂಧನ ಭೀತಿಯಿಂದ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರು.
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆದು ಇದೀಗ ಕೋರ್ಟ್ ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು ಮಂಜೂರು ಮಾಡಿದೆ. ವಿಡಿಯೊ ಚಿತ್ರೀಕರಣ ಮಾಡಿದ ಆರೋಪ ಎದುರಿಸುತ್ತಿರುವ ಶಬನಾಜ್, ಆಲ್ಫಿಯಾ, ಆಲಿಮಾತುಲ್ ಶಾಫಿಯಾ ಎಂಬ ಮೂವರು ಈಗ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಹೀಗೆ ನಿರೀಕ್ಷಣಾ ಜಾಮೀನು ಪಡೆದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣಕ್ಕೆ ಈ ವಿದ್ಯಾರ್ಥಿನಿಯರನ್ನು ಬಂಧಿಸುವ ಸಾಧ್ಯತೆಗಳಿಲ್ಲ.
ಉಡುಪಿ ಪೊಲೀಸರ ಮೇಲೆ ಕಾಲೇಜು ಆಡಳಿತ ಮಂಡಳಿ ಕೆಂಡ
ಈ ನಡುವೆ, ವಿದ್ಯಾರ್ಥಿನಿಯರ ಮೇಲೆ ಕೇಸು ದಾಖಲಿಸಿಕೊಂಡ ಉಡುಪಿ ಪೊಲೀಸರು ಕಾಲೇಜು ಆಡಳಿತ ಮಂಡಳಿಯ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇದನ್ನು ಕಾಲೇಜು ಆಕ್ಷೇಪಿಸಿದೆ. ತಾವು ಮೊದಲೇ ದೂರು ನೀಡಿದ್ದರೂ ಪ್ರಕರಣ ದಾಖಲಿಸದೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಈಗ ನಮ್ಮ ಮೇಲೆ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ ಎಂದು ಅದು ಪ್ರಶ್ನಿಸಿದೆ.
ಕಾಲೇಜು ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ವಿಡಿಯೋ ಮಾಡಿದ ಬಗ್ಗೆ ಮಾತನಾಡಿದ ಬಳಿಕವೇ ಮಾಹಿತಿ ಸಿಕ್ಕಿತು, ಆಗಷ್ಟೇ ಮಕ್ಕಳು ತಪ್ಪೊಪ್ಪಿಗೆ ಕೊಟ್ಟ ವಿಚಾರ ತಿಳಿಯಿತು. ಇದೇ ಆಧಾರದಲ್ಲಿ ಸುಮೋಟೋ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ಮಲ್ಪೆ ಪೊಲೀಸರು ಈಗ ಹೇಳುತ್ತಿದ್ದಾರೆ.
ಆದರೆ, ಟಾಯ್ಲೆಟ್ ವಿಡಿಯೋ ರೆಕಾರ್ಡಿಂಗ್ ಬಗ್ಗೆ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಜುಲೈ 22ರಂದು ಮಲ್ಪೆ ಠಾಣೆಗೆ ಭೇಟಿ ನೀಡಿದ್ದೆವು. ಮೊಬೈಲ್ ನಲ್ಲಿ ವಿಡಿಯೋ ದಾಖಲಾದ ಬಗ್ಗೆ ಮಾಹಿತಿ ನೀಡಿದ್ದೆವು. ಮೊಬೈಲ್ ನಲ್ಲಿ ವಿಡಿಯೋ ದಾಖಲಾಗಿದೆಯೇ, ಅದು ಯಾರಿಗಾದರೂ ಫಾರ್ವರ್ಡ್ ಆಗಿದೆಯೇ ಎಂಬ ಬಗ್ಗೆ ತಾಂತ್ರಿಕ ಮಾಹಿತಿ ಕೇಳಿದ್ದೆವು. ಈ ಬಗ್ಗೆ ಲಿಖಿತ ಅರ್ಜಿ ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದೆವು ಎಂದು ಕಾಲೇಜು ಆಡಳಿತ ಮಂಡಳಿ ಹೇಳುತ್ತಿದೆ.
ಮೊಬೈಲ್ ಮಲ್ಪೆ ಪೊಲೀಸರಿಗೆ ನೀಡಿರುವ ಬಗ್ಗೆ ಸ್ವೀಕೃತಿ ಅರ್ಜಿಯನ್ನು ಕೂಡ ಪಡೆದಿದ್ದೇವೆ ಎಂದಿರುವ ಕಾಲೇಜು ಆಡಳಿತ ಮಂಡಳಿ ಅಂದು ಕೇಸು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಪೊಲೀಸರು ಈಗ ಕಾಲೇಜಿನ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದಿದೆ.
ಇದನ್ನೂ ಓದಿ: Udupi Toilet Case : ಉಡುಪಿ ಟಾಯ್ಲೆಟ್ ವಿಡಿಯೊ ಪ್ರಕರಣಕ್ಕೆ ಭಯೋತ್ಪಾದನೆ, ಲವ್ ಜಿಹಾದ್ ಟ್ವಿಸ್ಟ್