Site icon Vistara News

Naxal Karnataka: ಇಬ್ಬರು ಕುಖ್ಯಾತ ನಕ್ಸಲರನ್ನು ಕುಂದಾಪುರ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್


ಉಡುಪಿ: ಕೇರಳದಲ್ಲಿ ಕೆಲವು ತಿಂಗಳ ಹಿಂದೆ ಸೆರೆ ಹಿಡಿಯಲಾಗಿದ್ದ ಇಬ್ಬರು ಕುಖ್ಯಾತ ನಕ್ಸಲರನ್ನು (Naxalites) ಸ್ಥಳೀಯ ನ್ಯಾಯಾಲಯ ಬುಧವಾರ ಕುಂದಾಪುರ ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ. ಇವರಿಬ್ಬರ ಪಾತಕ ಕೃತ್ಯಗಳ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

B G Krishnamurthy

ಶೃಂಗೇರಿಯ ಭುವನಹಕ್ಲು ನಿವಾಸಿ ಬಿ.ಜಿ.ಕೃಷ್ಣಮೂರ್ತಿ (B G Krishnamurty) ಮತ್ತು ಸಾವಿತ್ರಿ ಬಂಧಿತ ನಕ್ಸಲ್ ವಾದಿಗಳಾಗಿದ್ದಾರೆ. 2006ರಲ್ಲಿ ಕುಂದಾಪುರದ ಅಮಾಸೆಬೈಲ್ ನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕೃಷ್ಣಮೂರ್ತಿ ವಿರುದ್ಧ 53 ಮತ್ತು ಸಾವಿತ್ರಿ ವಿರುದ್ಧ 22 ಪ್ರಕರಣಗಳು ಕರ್ನಾಟಕದ ನಾನಾ ಠಾಣೆಗಳಲ್ಲಿ ದಾಖಲಾಗಿವೆ. ಮಲೆನಾಡಿನಲ್ಲಿ ಸಕ್ರಿಯರಾಗಿ ಹಲವಾರು ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದ ಇವರು, ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆ ಬಿರುಸುಗೊಂಡ ಬಳಿಕ ಕೇರಳಕ್ಕೆ ಪರಾರಿಯಾಗಿದ್ದರು.

ಹಲವು ವರ್ಷ ತಲೆಮರೆಸಿಕೊಂಡಿದ್ದ ಇವರಿಬ್ಬರನ್ನು ಕೇರಳ ಭಯೋತ್ಪಾದನಾ ನಿಗ್ರಹ ಪಡೆ ವಯನಾಡಿನಲ್ಲಿ ಕಳೆದ ನವೆಂಬರ್ 10ರಂದು ಬಂಧಿಸಿತ್ತು. ತೀವ್ರ ವಿಚಾರಣೆ ಬಳಿಕ ಕೇರಳ ಪೊಲೀಸರು, ಹಲವು ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಗಾಗಿ ಫೆಬ್ರವರಿ 24ರಂದು ಇವರನ್ನು ಕರ್ನಾಟಕದ ಪೊಲೀಸರಿಗೆ ಒಪ್ಪಿಸಿದ್ದರು. ಇವರಿಬ್ಬರನ್ನು ಕುಂದಾಪುರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದಾಗ, ನ್ಯಾಯಾಲಯವು ಮೇ 20ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

Savithri

ಈಗಾಗಲೆ ಹೆಬ್ರಿ, ಕಾರ್ಕಳ ಮತ್ತು ಅಜೆಕಾರು ಠಾಣಾ ವ್ತಾಪ್ತಿಯ ಪ್ರಕರಣದ ಮಹಜರನ್ನು ಈ ನಕ್ಸಲರಿಂದ ಮಾಹಿತಿ ಪಡೆದು ಮುಕ್ತಾಯಗೊಳಿಸಲಾಗಿದೆ. ಸದ್ಯ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವ್ ಯಡಿಯಾಳ ಹತ್ಯೆ ಪ್ರಕರಣದ ವಿಚಾರಣೆ ಬಾಕಿ ಇದೆ.

ನಕ್ಸಲರಾದ ಕೃಷ್ಣಮೂರ್ತಿ ಮತ್ತು ಸಾವಿತ್ರಿ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ 4, ಶಂಕರನಾರಾಯಣದಲ್ಲಿ 6 ಮತ್ತು ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ ದಾಖಲಾಗಿವೆ. ಹೊರ ರಾಜ್ಯಗಳಲ್ಲೂ ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಇವರಿಬ್ಬರನ್ನು ಪೊಲೀಸರು ಸೆರೆ ಹಿಡಿದಿರುವುದು, ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮಹತ್ವದ ಮುನ್ನಡೆಯಾಗಿದೆ.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮತ್ತು ತಂಡ ಈ ನಕ್ಸಲ್ ವಾದಿಗಳ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ಜೈಲಿನಲ್ಲೇ ಕುಳಿತು ದರೋಡೆ ಸಂಚು ರೂಪಿಸಿದರು: 105 ಗ್ರಾಂ ಚಿನ್ನಾಭರಣದ ಜತೆಗೆ ಬಂಧನ

Exit mobile version