ಬೆಂಗಳೂರು: ಬೈಂದೂರಿನ ಉದ್ಯಮಿಗೆ ಬಿಜೆಪಿ ಎಂಎಲ್ಎ ಸೀಟ್ ಟಿಕೆಟ್ ಕೊಡಿಸುವುದಾಗಿ ವಂಚಿಸಿದ (Fraud case) ಪ್ರಕರಣದಲ್ಲಿ ನಿನ್ನೆ ಚೈತ್ರ ಕುಂದಾಪುರಳನ್ನು ( Chaitra Kundapura) ಪೊಲೀಸರು ತೀವ್ರ ತನಿಖೆಗೊಳಪಡಿಸಿದ್ದಾರೆ. ಆದರೆ ಆರೋಪಿ ಬಾಯಿ ಬಿಟ್ಟಿಲ್ಲ. ʼನಾನು ತಪ್ಪು ಮಾಡಿಲ್ಲ, ನನಗೇನೂ ಗೊತ್ತಿಲ್ಲʼ ಎಂಬುದನ್ನೇ ಗಿಳಿಪಾಠದಂತೆ ಹೇಳುತ್ತಿದ್ದಾಳೆ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿಯಿಡೀ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಚೈತ್ರ ಕಾಲ ಕಳೆದಿದ್ದಾಳೆ. ವಿಚಾರಣೆ ವೇಳೆ ʼನಾನು ತಪ್ಪು ಮಾಡಿಲ್ಲ, ನಾನು ಹಣ ಪಡೆದಿಲ್ಲʼ ಎಂದು ಪದೇ ಪದೆ ಹೇಳಿದ್ದಾಳೆ. ಹೀಗಾಗಿ ಮೊದಲ ದಿನ ಸಾಂತ್ವನ ಕೇಂದ್ರಕ್ಕೆ ಆಕೆಯನ್ನು ಬಿಡಲಾಗಿದ್ದು, ಇಂದು 10 ಗಂಟೆಗೆ ಮತ್ತೆ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಯಲಿದೆ. ಸಿಸಿಬಿ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಈಗಾಗಲೇ ಬಂಧಿತರ ಎಲ್ಲಾ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ಯಾರೆಲ್ಲ ವಂಚನೆಯಲ್ಲಿ ಇವರ ಜೊತೆ ಭಾಗಿಯಾಗಿದ್ದಾರೆ, ಜೊತೆಗೆ ಎಷ್ಟು ದಿನದಿಂದ ಕೃತ್ಯ ಎಸಗುತ್ತಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲಾ ಆರೋಪಿಗಳ ಮೊಬೈಲ್ ಕಾಲ್ ಲಿಸ್ಟ್ ಪಡೆಯಲಾಗುತ್ತಿದೆ. ಕೇಸು ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಚಾಟಿಂಗ್ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಕೋರ್ಟ್ ಅನುಮತಿ ಪಡೆದು ಮೊಬೈಲ್ ರಿಟ್ರೀವ್ ಮಾಡಿಸಲು ತೀರ್ಮಾನಿಸಲಾಗಿದೆ.
ವಿಚಾರಣೆ ವೇಳೆ ನಾನು ಹಣ ಪಡೆದಿಲ್ಲವೆಂದು ಚೈತ್ರಾ ಕುಂದಾಪುರ ವಾದ ಮುಂದುವರಿಸಿದ್ದರೂ, ವಂಚನೆಯಲ್ಲಿ ಚೈತ್ರಾ ಸಹಚರರಾಗಿದ್ದವರು ಸಿಸಿಬಿ ಪೊಲೀಸರ ಎದುರು ಬಾಯಿಬಿಟ್ಟಿದ್ದಾರೆ. ಚೈತ್ರಾ ಕುಂದಾಪುರಗೆ
ಗೋವಿಂದ ಪೂಜಾರಿಯನ್ನು ಪರಿಚಯ ಮಾಡಿಸಿದ್ದೆ ಎಂದು ಸಿಸಿಬಿ ಅಧಿಕಾರಿಗಳ ಎದುರು ಪ್ರಸಾದ್ ಒಪ್ಪಿಕೊಂಡಿದ್ದಾನೆ. ಇತ್ತ ಶಿವವೊಗ್ಗ ಆರ್‌ಎಸ್‌ಎಸ್ ಕಚೇರಿ ಎದುರು 50 ಲಕ್ಷ ರೂ. ಹಣ ಪಡೆದಿರುವ ಬಗ್ಗೆ ಗಗನ್ ಕಡೂರು ಒಪ್ಪಿಕೊಂಡಿದ್ದು, 50 ಲಕ್ಷದಲ್ಲಿ ಚೈತ್ರಾಗೆ ಅರ್ಧ ಹಣ ನೀಡಿರುವ ಬಗ್ಗೆ ತಿಳಿಸಿದ್ದಾನೆ.
ಗೋವಿಂದ ಪೂಜಾರಿ ಮಾತ್ರವಲ್ಲದೆ ಮತ್ತಷ್ಟು ಜನರಿಗೆ ಚೈತ್ರಾ ಹೀಗೆ ಮೋಸ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹೆಸರಲ್ಲಿ ಮತ್ತಷ್ಟು ಜನರಿಗೆ ಮೋಸ ಮಾಡಿರಬಹುದು ಎಂಬ ಆಯಾಮದಲ್ಲಿ ಸಿಸಿಬಿ ಪೊಲೀಸರಿಂದ ತನಿಖೆ ನಡೆದಿದೆ. ಮೋಸ ಹೋಗಿದ್ದರೆ ಬಂದು ದೂರು ನೀಡುವಂತೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಚೈತ್ರಾ ಕುಂದಾಪುರಳನ್ನು ಪೊಲೀಸರು ಕರೆತರಲಿದ್ದು, ತನಿಖೆ ಮುಂದುವರಿಯಲಿದೆ. ನಿನ್ನೆ ತನಿಖೆ ಮುಗಿದ ನಂತರ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ನ್ಯಾಯಾಲಯ ಹತ್ತು ದಿನಗಳ ಕಾಲ ಈಕೆಯನ್ನು ಸಿಸಿಬಿ ಕಸ್ಟಡಿಗೆ ನೀಡಿದೆ.
ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ ನನ್ನ ಮನೆಯಲ್ಲಿರಲಿಲ್ಲ, ವರ್ಷದಿಂದ ನೋಡಿಲ್ಲ; ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ