Site icon Vistara News

ʼನಮ್ಮದು ಹೊಟ್ಟೆ ಪಾಡಿನ ರಾಜಕಾರಣʼ; ʼಒಕ್ಕಲಿಗ ಸಮಾಜ ನನ್ನ ಜತೆ ನಿಲ್ಲಲಿʼ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

congress-fighting-politics-for-peoples-livelyhood-says-dk-shivakumar

ಉಡುಪಿ: ಹಳೆ ಮೈಸೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಬಿಜೆಪಿ ಧರ್ಮ ಮತ್ತು ಭಾವನೆಯನ್ನು ಮುಂದಿಟ್ಟುಕೊಂಡು ಹೋಗುತ್ತಾರೆ. ನಮ್ಮದು ಹೊಟ್ಟೆಪಾಡಿನ ರಾಜಕಾರಣ ಎಂದಿದ್ದಾರೆ.

ಪುತ್ತೂರಿನಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ 78 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದಾಗ ಮಾಧ್ಯಮಗಳಿಗೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದರು. ಮದ್ದೂರಿನಿಂದ ಸ್ಪರ್ಧೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿ, ಮದ್ದೂರಿನಿಂದ ಸ್ಪರ್ಧಿಸುವಂತೆ ಕೇಳಿದ್ದಾರೆ, ನಿಜ ನಾನು ಇಲ್ಲ ಅಂತ ಹೇಳಲ್ಲ. ಮಂಡ್ಯ ಮದ್ದೂರಿನವರು ಬಂದು ನನ್ನ ಜತೆ ಮಾತನಾಡಿದ್ದಾರೆ. ಈ ಬಗ್ಗೆ ಸದ್ಯ ನಾನು ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದರು.

ಮಗಳು ಅಥವಾ ಅಳಿಯನ ಸ್ಪರ್ಧೆ ಬಗ್ಗೆ ಮಾತನಾಡಲು ನಿರಾಕರಿಸಿದ ಡಿ.ಕೆ. ಶಿವಕುಮಾರ್‌, ಟಾರ್ಗೆಟ್ ಓಲ್ಡ್ ಮೈಸೂರು ಎಂದು ಬಿಜೆಪಿಯವರು ಮುಂದಾಗಿದ್ದಾರೆ. ಅವರು ಮೊದಲು ಟಾರ್ಗೆಟ್ ಕನಕಪುರ ಮಾಡಲಿ. ಮಳೆ ಹಾನಿಯಾದಾಗ, ಜನರು ಕಷ್ಟದಲ್ಲಿದ್ದಾಗ ಪ್ರಧಾನಿ ಮೋದಿ ಬರಲಿಲ್ಲ. ರಾಜ್ಯಕ್ಕೆ ಕಳಂಕ ಬಂದಾಗ, ಆರೋಪಗಳು ಬಂದಾಗ ನಿವಾರಣೆ ಮಾಡಲು ಮೋದಿ ಬರಲಿಲ್ಲ. 25 ಜನ ಸಂಸದರಿದ್ದಾರೆ, ಅವರನ್ನು ಕರೆಸಿ ಒಂದು ದಿನ ಸಭೆ ಮಾಡಿಲ್ಲ.

ಮತ್ತೊಮ್ಮೆ ಬಿಜೆಪಿ ಬರುವುದಿಲ್ಲ ಎನ್ನುವುದು ಪ್ರಧಾನಿಗೆ ಖಾತ್ರಿಯಾಗಿದೆ. ಎಲ್ಲ ವರದಿಗಳು ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದಿಲ್ಲ ಎಂದು ಹೇಳಿವೆ. ನಮ್ಮ ಪಕ್ಷದ , ಆಂತರಿಕ , ಮಾಧ್ಯಮ ವರದಿಗಳೂ ಹೇಳಿವೆ. 65 ಸ್ಥಾನಕ್ಕಿಂತ ಹೆಚ್ಚು ಬಿಜೆಪಿ ಬರುವುದಿಲ್ಲ. ಇದನ್ನು ಏನಾದರೂ ಮ್ಯಾಚ್ ಅಫ್‌ ಮಾಡುವುದಕ್ಕೆ ಆಗುತ್ತದೆಯೇ ಎಂದು ನೋಡಲು ಬರುತ್ತಿದ್ದಾರೆ.

ಇದನ್ನೂ ಓದಿ | ರಾಜಕೀಯವಾಗಿ ಡಿ‌.ಕೆ.ಶಿವಕುಮಾರ್‌ ಮುಗಿಸಲು 500 ಕೋಟಿ ರೂಪಾಯಿ ಸುಪಾರಿ: ಸಚಿವ ಆರ್.ಅಶೋಕ್ ಆರೋಪ

ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಮೊದಲು ಅಮಿತ್ ಶಾ ಘೋಷಿಸಿದ್ದರು. ಈಗ ಬೊಮ್ಮಾಯಿ ಕೈ ಬಿಟ್ಟು ಮೋದಿ ಅವರ ಮುಖ ತೋರಿಸಲು ಹೊರಟಿದ್ದಾರೆ. ನಮ್ಮ ಕರ್ನಾಟಕಕ್ಕೆ ಮೋದಿ ಅವರ ಮುಖ ಯಾಕೆ ಬೇಕು? ಇಲ್ಲಿ ಆಡಳಿತ ಮಾಡುವವರ ಮುಖ ಮುಂದಿಟ್ಟು ಚುನಾವಣೆ ಎದುರಿಸಿ. ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ. ಇನ್ನು 60 ದಿನ ಈ ಸರ್ಕಾರ ಇರುತ್ತದೆ ಅಷ್ಟೆ. ಬಿಜೆಪಿ ಸರ್ಕಾರದ ಕೊನೆಯ ದಿನಗಳು ಬಂದಿವೆ, ಕೌಂಟ್ ಡೌನ್ ಶುರುವಾಗಿದೆ.

ಫೆಬ್ರವರಿ 28ಕ್ಕೆ ಇವರದ್ದು ಕ್ಲೋಸ್ ಆಗುತ್ತದೆ. ಬಳಿಕ ಚುನಾವಣಾ ನೀತಿ ಸಂಹಿತೆ ಬರುತ್ತದೆ. 40 ದಿನದಲ್ಲಿ ಇವರು ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ ಎಂದರು.

ಪುತ್ತೂರಿನಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ 78 ನೇ ಜಯಂತಿಯಲ್ಲಿ ಮಾತನಾಡಿ, ಒಕ್ಕಲಿಗ ಸಮುದಾಯ ನನ್ನ ಜತೆ ನಿಲ್ಲಬೇಕು. ಯಾವುದೇ ಸಮಸ್ಯೆ ಬಂದರೂ ನಾನು ಸಮಾಜದ ಜತೆಗಿದ್ದೇನೆ. ಒಕ್ಕಲಿಗ ಸಮಾಜಕ್ಕೆ 12 ಶೇಕಡಾ ಮೀಸಲಾತಿ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಆದಿಚುಂಚನಗಿರಿ ಮಠದ ಸ್ವಾಮೀಜಿ, ಸಚಿವ ಆರ್. ಅಶೋಕ್‌ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ರಾಜ್ಯದಲ್ಲಿ 16 ಶೇಕಡಾ ಜನಸಂಖ್ಯೆ ಇರುವ ಜನಸಂಖ್ಯೆಗೆ 12 ಶೇಕಡಾ ಮೀಸಲಾತಿಗೆ ಒತ್ತಾಯಿಸಲಾಗಿದೆ. ಆದರೆ ಸಚಿವರು ಈವರೆಗೆ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಒಕ್ಕಲಿಗರ ಒತ್ತಾಯಕ್ಕೆ ಸರ್ಕಾರ ಸ್ಪಂದಿಸಬೇಕಿದೆ ಎಂದರು.

Exit mobile version