ಉಡುಪಿ: ಉಡುಪಿಯಲ್ಲಿ ಈ ಹಿಂದೆ ನಡೆದ ತಾಯಿ ಮಗಳ ಕೊಲೆ ಪ್ರಕರಣವನ್ನು ಪೋಲಿಸರು ಭೇದಿಸಿದ್ದಾರೆ. ಉಡುಪಿಯ ಆತ್ರಾಡಿಯ ಮದಗದ ಮನೆಯೊಂದರಲ್ಲಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವಿಸಲಾಗಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಹರೀಶ್ ಎಂಬಾತನನ್ನು ಬಂಧಿಸಿದ್ದಾರೆ.
ಮೃತದೇಹ ಇದೇ ಮೇ 9 ರಂದು ಪತ್ತೆಯಾಗಿತ್ತು. ತಾಯಿ ಚೆಲುವಿ(28) ಹಾಗೂ ಮಗಳು ಪ್ರಿಯಾ (10) ಮೃತಪಟ್ಟವರು. ಮೊದಲು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಇದೊಂದು ಕೊಲೆ ಎನ್ನುವುದು ದೃಢವಾಗಿತ್ತು. ಚೆಲುವಿಗೆ ಹದಿನೈದು ವರ್ಷಗಳ ಹಿಂದೆ ಸುಬ್ರಹ್ಮಣ್ಯ ಎನ್ನುವವರ ಜತೆಗೆ ಮದುವೆಯಾಗಿತ್ತು. ಆತನನ್ನು ಬಿಟ್ಟು, ರಶೀದ್ ಜೊತೆಗೆ ಚೆಲುವಿ ಸಂಸಾರ ನಡೆಸಿದಳು.
ಇದನ್ನೂ ಓದಿ | ಉಡುಪಿಯಲ್ಲಿ ಪೊಲೀಸ್ ಆತ್ಮಹತ್ಯೆ: ಗುಂಡಿಕ್ಕಿಕೊಂಡ ಕಾನ್ಸ್‌ಟೇಬಲ್
ಕೊನೆಗೆ ಆತನನ್ನೂ ಬಿಟ್ಟು ಎರಡು ಮಕ್ಕಳ ಜತೆಗೆ ಮಣಿಪಾಲದಲ್ಲಿ ಬಾಡಿಗೆ ಮನೆಯಲ್ಲಿದ್ದಳು. ಚೆಲುವಿಯ ದೂರದ ಸಂಬಂಧಿ ಹರೀಶ್ ಚೆಲುವಿಯ ಮನೆಗೆ ಆಗಾಗ್ಗೆ ಬಂದು ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ ಚೆಲುವಿ ಬೇರೆ ಯಾರೊಂದಿಗೋ ಪೋನ್‌ನಲ್ಲಿ ಹೆಚ್ಚು ಮಾತಾಡುತ್ತಿರುವ ಬಗ್ಗೆ ಗಲಾಟೆಯಾಗಿ ಚೆಲುವಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನೆ ಕುರಿತು ಚೆಲುವಿ ಮಗಳು ಪ್ರಿಯಾ ಸಾಕ್ಷಿ ಹೇಳಬಹುದು ಎಂದು ಆಕೆಯನ್ನೂ ಕೊಂದಿದ್ದ. ಜೋಡಿ ಕೊಲೆಯ ನಂತರ ಚೆಲುವಿಯ ಆಕೆಯ ಚಿನ್ನ ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದ.
ಪ್ರಕರಣದ ಕುರಿತು ಚೆಲುವಿ ತಂಗಿ ದೇವಿ ನೀಡಿದ ದೂರಿನಂತೆ ತನಿಖೆ ಕೈಗೊಂಡ ಪೋಲಿಸರು, ಸಂಶಯದ ಮೇರೆಗೆ ಹರೀಶ್‌ನನ್ನು ವಿಚಾರಣೆ ನಡೆಸಿದಾಗ, ಹರೀಶ್ ಕೊಲೆ ಮಾಡಿರುದನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಕೊಲೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆದರೆ ತಾಯಿ ಚೆಲುವಿ ಹಾಗೂ ತಂಗಿ ಪ್ರಿಯಾಳನ್ನು ಕಳೆದುಕೊಂಡ ಚೆಲುವಿಯ ದೊಡ್ಡ ಮಗ ಅನಾಥನಾಗಿದ್ದಾನೆ.
ಇದನ್ನೂ ಓದಿ | ನೇಕಾರರ, ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಣೆ : CM ಬಸವರಾಜ ಬೊಮ್ಮಾಯಿ