Site icon Vistara News

Husband Harrassed: ಗಂಡನ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಸಂಶಯ ಪಿಶಾಚಿ ಹೆಂಡತಿ!

Suspicious wife thows hot water at husband

ಉಡುಪಿ: ಸಂಬಂಧಗಳು ಗಟ್ಟಿಯಾಗಿ ಬೆಸೆದುಕೊಳ್ಳಲು ನಂಬಿಕೆಯೇ ಮೂಲಾಧಾರ, ನಂಬಿಕೆ ಇಲ್ಲದಿದ್ದರೆ ಯಾವ ಸಂಬಂಧಗಳು ಕೂಡ ಉಳಿಯುವುದಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ಉಡುಪಿಯ ಕಟಪಾಡಿ ಸಮೀಪ ದೊರಕಿದೆ. ಇಲ್ಲಿ ಸಂಶಯ ಅತಿರೇಕಕ್ಕೆ ಹೋಗಿ ಪತ್ನಿ ತನ್ನ ಗಂಡನ ಮೇಲಿನ ಅನುಮಾನದಿಂದಾಗಿ (Suspicious wife) ಮೆಣಸಿನ ಹುಡಿ ಮಿಶ್ರಿತ ಬಿಸಿನೀರು (Hot water mixed with Chilli powder) ಎರಚಿ ಜೀವ ಬೆದರಿಕೆ ಹಾಕಿದ್ದಾಳೆ.

ಈ ಘಟನೆ ನಡೆದಿರುವುದು ಉಡುಪಿಯ ಸಮೀಪದ ಕಟಪಾಡಿಯ ಮಣಿಪುರ (Manipura Near Udupi) ಎನ್ನುವ ಗ್ರಾಮದಲ್ಲಿ. ಮಹಮ್ಮದ್ ಆಸಿಫ್ (22) ಸದ್ಯ ಪತ್ನಿಯಿಂದ ಸಂತ್ರಸ್ತರಾಗಿ ಸುಟ್ಟ ಗಾಯಗಳೊಂದಿಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕ್ಕ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸಿಫ್‌ ಮೂಲತಃ ಕಾರ್ಕಳದವನು. 11 ತಿಂಗಳುಗಳ ಹಿಂದೆ ಮಣಿಪುರದ ಗುಜ್ಜಿ ಎಂಬಲ್ಲಿನ ನಿವಾಸಿ ಹುಸೈನ್ ಅವರ ಮಗಳಾದ ಆಫ್ರಿನ್‌ಳನ್ನು ಆಸಿಫ್ ಮದುವೆಯಾಗಿದ್ದ. ಪತ್ನಿಯನ್ನು ತನ್ನ ಕಾರ್ಕಳದ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ಸುಮಾರು ಒಂದುವರೆ ತಿಂಗಳುಗಳ ಕಾಲ ಗಂಡನ ಮನೆಯಲ್ಲಿದ್ದ ಆಫ್ರೀನ್, ತನ್ನ ತವರು ಮನೆಗೆ ತೆರಳಿದ್ದಾಳೆ. ಮನೆಗೆ ಮರಳುವಂತೆ ಆಸಿಫ್ ಆಫ್ರೀನ್ ಗೆ ಕರೆ ಮಾಡಿದಾಗ ʻನೀನೇ ಇಲ್ಲಿಗೆ ಬಾʼ ಎಂದಿದ್ದಾಳೆ. ಹಾಗಾಗಿ ಕಳೆದ 9 ತಿಂಗಳುಗಳಿಂದ ಹೆಂಡತಿಯ ಮನೆಯಲ್ಲಿ ಆಸಿಫ್ ವಾಸವಾಗಿದ್ದ.

ಸಂಶಯ ಪಿಶಾಚಿಯಂತೆ ಆಫ್ರಿನ್‌!

ಹೆಂಡತಿ ಮನೆಗೆ ತೆರಳಿದ ಆಸಿಫ್‌ಗೆ ಅಲ್ಲಿ ಹೊಸ ಸಮಸ್ಯೆ ಶುರುವಾಯಿತು. ಯಾಕೆಂದರೆ ಪತ್ನಿ ಆಫ್ರಿನ್‌ ಆಸಿಫ್‌ನ ಪ್ರತಿಯೊಂದು ನಡೆಯನ್ನೂ ಸಂಶಯದಿಂದಲೇ ನೋಡುತ್ತಿದ್ದಳಂತೆ. ಗಂಡನಿಗೆ ಬೇರೆ ಹುಡುಗಿರ ಜೊತೆ ಸಂಬಂಧವಿದೆ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದ ಆಫ್ರೀನ್, ಯಾವಾಗಲೂ ಸಂಶಯದಿಂದಲೇ ನೋಡುತ್ತಿದ್ದಳು

ಆಸಿಫ್ ಮೊಬೈಲ್ ಪರಿಶೀಲನೆ ಮಾಡುವುದು ಕರೆ, ವಾಟ್ಸಾಪ್ ಚಾಟ್, ಸೋಶಿಯಲ್ ಮೀಡಿಯಾದ ಚಾಟ್ ಗಳನ್ನು ಪತ್ನಿ ಆಫ್ರೀನ್ ಸದಾಕಾಲ ಸಂಶಯದಿಂದಲೇ ನೋಡುತ್ತಿದ್ದಳು ಎನ್ನಲಾಗಿದೆ.

ಜೋಡಿ ಹೇಗಿತ್ತು ನೋಡಿ..

ಮಂಗಳವಾರ ಸಂಜೆ ಏನಾಯಿತು?

ಮಂಗಳವಾರ ಸಂಜೆ ಆಸಿಫ್‌ ಎಂದಿನಂತೆ ಮೈದಾನದಲ್ಲಿ ಆಟವಾಡಿ ಮನೆಗೆ ಬಂದಿದ್ದಾನೆ. ಬಂದವನೇ ಬಾತ್‌ ರೂಮ್‌ಗೆ ಹೋಗಿ ಸ್ನಾನ ಮಾಡಲು ಶುರು ಮಾಡಿದ್ದಾನೆ. ಆಗ ಹೊರಗಿನಿಂದ ಆಫ್ರಿನ್ ಬಾಗಿಲು ಬಡಿದಿದ್ದಾಳೆ.

ಬಾಗಿಲು ತೆಗೆದಿದ್ದು ಒಂದೇ ಗೊತ್ತು. ಸ್ಟೀಲ್ ಪಾತ್ರೆಯಲ್ಲಿ ತಂದಿದ್ದ ಮೆಣಸಿನ ಹುಡಿ ಮಿಶ್ರಿತ ಬಿಸಿ ಬಿಸಿ ನೀರನ್ನು ಆಸೀಫ್ ಮೇಲೆ ಎರಚಿದ್ದಾಳೆ. ಆಸಿಫ್ ನೋವಿನಿಂದ ಕೂಗಿಕೊಂಡು ಮನೆಯಿಂದ ಹೊರಗೆ ಓಡಿದ್ದಾನೆ.

ಆದರೆ, ಅಲ್ಲಿ ಎದುರಾದ ಮಾವ ಹುಸೇನ್ ಅವರು ಆಸಿಫ್‌ನನ್ನು ಮನೆ ಒಳಗೆ ಕರೆದುಕೊಂಡು ಬಂದಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಸಿಫ್ ಆಸ್ಪತ್ರೆಗೆ ಹೋಗುತ್ತೇನೆ ಎಂದರೂ ಅತ್ತೆ ಮೈಮುನ, ಮಾವ ಹುಸೇನ್, ನೆರೆಮನೆಯ ಲತೀಫ್ ಮತ್ತು ಪತ್ನಿ ಆಫ್ರಿನ್ ಸೇರಿ ಆಸಿಫ್ ಅವರನ್ನು ಮನೆಯಿಂದ ಹೊರಗೆ ಹೋಗಲು ಬಿಡದೆ ರೂಮಿನಲ್ಲಿ ಕೂಡಿ ಹಾಕಿದ್ದಾರೆ. ಅಲ್ಲದೆ ಈ ವಿಚಾರವನ್ನು ಹೊರಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಸಿಫ್‌ ದೂರು ನೀಡಿದ್ದಾರೆ. ಇದರ ನಡುವೆ ಉಳ್ಳಾಲದ ನಿವಾಸಿ ಜಮಾತ್ ಎನ್ನುವಾತ ಆಸಿಫ್ ಅವರಿಗೆ ಕರೆ ಮಾಡಿ ಪ್ರಕರಣ ದಾಖಲಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಗಂಡನ ಮೇಲಿನ ಅನುಮಾನವನ್ನೇ ಅಸ್ತ್ರವಾಗಿಸಿಕೊಂಡು ಆಫ್ರಿನ್ ಗಂಭೀರವಾಗಿ ಹಲ್ಲೆ ಮಾಡಿದ್ದಾಳೆ. ಸದ್ಯ ಸುಟ್ಟ ಗಾಯಗಳೊಂದಿಗೆ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಆಸೀಫ್, ಚಿಕಿತ್ಸೆ ಪಡೆಯುತ್ತಿದ್ದು ಮನೆಯವರು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ. ಇದು ಆಸಿಫ್‌ ವರ್ಷನ್‌. ಇನ್ನು ಆಫ್ರಿನ್‌ ಅವರ ವಾದ ಏನು ಅನ್ನುವುದನ್ನು ನೋಡಬೇಕಾಗಿದೆ!

Exit mobile version