Site icon Vistara News

Kochi Blast : ಕೇರಳ ಸ್ಫೋಟ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್‌; ಕರಾವಳಿ, ಗಡಿಭಾಗದಲ್ಲಿ ತೀವ್ರ ನಿಗಾ

DR G Parameshwar

ಉಡುಪಿ: ಕೇರಳದಲ್ಲಿ ಬಾಂಬ್‌ ಸ್ಫೋಟ (Kochi Blast) ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲ ಕಡೆ ಸೂಕ್ಷ್ಮ ಗಮನವನ್ನು ಇರಿಸಿದ್ದೇವೆ. ಕೆಲ ಸಂಘಟನೆಗಳು ಸಕ್ರಿಯ ಆಗಬಹುದು ಅಥವಾ ಆಗದೇ ಇರಬಹುದು. ಆದರೆ, ಎಲ್ಲ ಕಡೆ ನಿಗಾ ಇಡುವಂತೆ ಎಲ್ಲ ಎಸ್‌ಪಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಕರಾವಳಿ ಭಾಗ ಮತ್ತು ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ Home Minister Dr G Parameshwara) ಹೇಳಿದರು.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ್‌, ತೀವ್ರ ನಿಗಾ ಇರಿಸುವಂತೆ ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಇಂತಹ ಘಟನೆ ನಡೆಯಲು ಬಿಡುವುದಿಲ್ಲ. ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಮೇಲೆ ಅನುಮಾನ ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮತ್ತೊಮ್ಮೆ ಆಪರೇಷನ್ ಕಮಲ ವಿಚಾರ ಮುನ್ನೆಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ. ಜಿ. ಪರಮೇಶ್ವರ್‌, ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಬಿಜೆಪಿ ಕಾಯ್ದುಕೊಂಡು ಇರಲಿ. ಇನ್ನು ಐದು ವರ್ಷ ಕಾಯುತ್ತಲಿರಲಿ ಎಂದು ರಾಜ್ಯದ ಜನರೇ ತೀರ್ಮಾನಿಸಿದ್ದಾರೆ. ಇನ್ನು ಸರ್ಕಾರದ ಅಧಿಕಾರ ಹಂಚಿಕೆ ಎರಡೂವರೆ ವರ್ಷ, ಒಂದೂ ಕಾಲು ವರ್ಷ ಎಂದು ಮಾಧ್ಯಮಗಳು ಹೇಳುತ್ತವೆ. ಆದರೆ, ನಮ್ಮಲ್ಲಿ ಅಂತಹ ಯಾವುದೇ ಚರ್ಚೆ ಆಗಿಲ್ಲ. ಇವೆಲ್ಲವೂ ಮಾಧ್ಯಮಗಳ ಸೃಷ್ಟಿ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಏನಾದರೂ ಹೇಳಿದ್ದಾರಾ? ಕೇವಲ ಊಹೆಯ ಮೇಲೆ ಚರ್ಚೆಯಾಗುತ್ತಿದೆ. ಅಧಿಕಾರ ಹಂಚಿಕೆಯ ಪ್ರಶ್ನೆಯನ್ನು ಮಾಧ್ಯಮ ಯಾಕೆ ಕೇಳಬೇಕು? ಈ ಪ್ರಶ್ನೆ ಯಾಕಾದರೂ ಉದ್ಭವ ಆಗಬೇಕು? ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ, ಮಿಕ್ಕಿದ್ದೆಲ್ಲ ಅಪ್ರಸ್ತುತ. ಬದಲಾವಣೆಗಳಿದ್ದರೆ, ಸಂದರ್ಭ ಬಂದಾಗ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್‌, ಸತೀಶ್ ಜಾರಕಿಹೊಳಿ ಸಮಾಧಾನವಾಗಿದ್ದಾರೆ. ಅವರಿಗೆ ಏನಾಗಿದೆ? ಎಂದು ಕೇಳಿದರು. ಇನ್ನು ಮನೆಯಲ್ಲಿ ಊಟ ಮಾಡೋದು ತಪ್ಪೇನ್ರಿ? ಈ ವಿಶೇಷ ಅರ್ಥಗಳನ್ನು ಯಾಕೆ ಕಲ್ಪಿಸುತ್ತೀರಿ? ಬೆಳಗಾವಿಯಲ್ಲಿ ಏನಾಗಿದೆ ಎಲ್ಲವೂ ಸರಿಯಾಗಿದೆ. ಚೆನ್ನಾಗಿ ಅಧಿಕಾರ ನಡೆಸುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿ ಕೇಳಿಕೊಂಡು ಆಡಳಿತ ನಡೆಸುತ್ತಿಲ್ಲ

ರಾಷ್ಟ್ರೀಯ ಚಿಂತಕರು, ಬಿಜೆಪಿ ಶಾಸಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ್‌, ನಾವು ಬಿಜೆಪಿಯವರನ್ನು ಕೇಳಿಕೊಂಡು ಆಡಳಿತ ಮಾಡುತ್ತಾ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯ ಸಲಹೆ ಕೊಟ್ಟರೆ ಪರಿಗಣಿಸಬಹುದು. ಟೀಕೆ, ಟಿಪ್ಪಣಿ ಮಾಡುವುದು ಬಿಡಿ, ರಾಜ್ಯದ ಹಿತ ದೃಷ್ಟಿಯಿಂದ ಸಲಹೆ ಕೊಡಿ ಎಂದು ಹೇಳಿದರು.

ಇದನ್ನೂ ಓದಿ: Congress Karnataka : ಸಂಪುಟ ಪುನಾರಚನೆ ಬಗ್ಗೆ ಸಿದ್ದರಾಮಯ್ಯ ಮಾತು; ಕೈ ಪಾಳೆಯಕ್ಕೆ ತಲೆ ನೋವಾದ ಡಿನ್ನರ್‌ ಪಾಲಿಟಿಕ್ಸ್‌!

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಗೋಲ್ಮಾಲ್ ನಡೆದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್‌, ಅದು ಸಹಕಾರಿ ಸಂಸ್ಥೆಗೆ ಸೇರಿದ ಕಾರ್ಖಾನೆಯಾಗಿದೆ. ಸಹಕಾರಿ ಮತ್ತು ಸಕ್ಕರೆ ಸಚಿವರು ಈ ಬಗ್ಗೆ ಜಂಟಿಯಾಗಿ ತನಿಖೆ ಮಾಡುತ್ತಾರೆ. ಪೊಲೀಸ್ ತನಿಖೆಗೆ ಸೂಚನೆ ಬಂದರೆ ನಾವು ಮಾಡುತ್ತೇವೆ. ಸರ್ಕಾರ ಪೊಲೀಸ್ ಇಲಾಖೆಗೆ ತನಿಖೆಗೆ ಸೂಚಿಸಿದರೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

Exit mobile version