Site icon Vistara News

108ನೇ ವಯಸ್ಸಿನಲ್ಲೂ ಧ್ವಜಾರೋಹಣ ಮಾಡಿದ್ದ ಮಾಜಿ ಸೈನಿಕ ಮೈಕೆಲ್‌ ಡಿಸೋಜ ಇನ್ನಿಲ್ಲ, ಅವ್ರಿಗೆ 2024ರವರೆಗೂ ಡಿಎಲ್‌ ಇತ್ತು!

michael dsuza

ಉಡುಪಿ: ತಮ್ಮ ೧೦೮ನೇ ವಯಸ್ಸಿನಲ್ಲೂ ಗಟ್ಟಿಮುಟ್ಟಾಗಿದ್ದ, ಕಣ್ಣು ಅತಿ ಸೂಕ್ಷ್ಮವಾಗಿದ್ದ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಭ್ರಮದಿಂದ ಬಂದು ಧ್ವಜಾರೋಹಣ ಮಾಡಿದ್ದ ಮಾಜಿ ಸೈನಿಕ ಮೈಕೆಲ್‌ ಡಿಸೋಜ ಅವರು ಗುರುವಾರ ನಿಧನರಾಗಿದ್ದಾರೆ.

ಮೈಕೆಲ್‌ ಡಿಸೋಜ

ಉಡುಪಿ ಪರ್ಕಳದ ಅಚ್ಯುತ ನಗರ ನಿವಾಸಿಯಾಗಿರುವ ಮೈಕೆಲ್‌ ಡಿಸೋಜ ಅವರು ಮದ್ರಾಸ್‌ ಸರಕಾರ ಇದ್ದಾಗ ಭಾರತೀಯ ಸೇನೆ ಸೇರಿದ್ದರು. ಹತ್ತು ವರ್ಷ ಕಾಲ ಮೆಕ್ಯಾನಿಕ್‌ ಕಂ ಡ್ರೈವರ್‌ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ನಾನಾ ಉದ್ಯೋಗಗಳನ್ನು ಮಾಡುತ್ತಾ ಅವರು ಸದಾ ಕಾಲ ಚಟುವಟಿಕೆಯಲ್ಲಿದ್ದರು. ಮೃತರ ಪತ್ನಿ ಅವರ ೯೮ನೇ ವಯಸ್ಸಿನಲ್ಲಿ ಇತ್ತೀಚೆಗೆ ನಿಧನರಾಗಿದ್ದರು. ಮೈಕೆಲ್‌ ಅವರ ತಾಯಿ ಕೂಡಾ ೧೦೮ ವರ್ಷ ಬದುಕಿದ್ದರು ಎನ್ನುವುದು ಕೂಡಾ ವಿಶೇಷ. ಮಕ್ಕಳಿಲ್ಲದ ಮೈಕಲ್ ಡಿಸೋಜರವರು ಪರ್ಕಳದ ತಮ್ಮ ಸಂಬಂಧಿಕರ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

ಲೋಕೋಪಯೋಗಿ ಇಲಾಖೆಯಲ್ಲಿ ಸೇತುವೆ ಕಟ್ಟಿದರು
೧೦ ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿದ ಅವರು, ನಿವೃತ್ತಿ ಬಳಿಕ ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗ ಪಡೆದರು. ಉಡುಪಿ ರಥ ಬೀದಿಯ ಸುತ್ತಲಿನ ನಾಲ್ಕು ಬೀದಿ ಕಾಂಕ್ರೀಟ್‌ ರಸ್ತೆ, ಮಂಗಳೂರಿನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು, ಉಭಯ ಜಿಲ್ಲೆಯ ಹೆಚ್ಚಿನ ಹಳೆಯದಾದ ಸೇತುವೆಗಳನ್ನು ನಿರ್ಮಾಣದಲ್ಲಿ ಮೈಕೆಲ್‌ ತೊಡಗಿಸಿಕೊಂಡಿದ್ದರು.

ಡ್ರೈವಿಂಗ್‌ ಲೈಸೆನ್ಸ್‌ ಪ್ರತಿ

೨೦೨೪ರವರೆಗೂ ಡ್ರೈವಿಂಗ್‌ ಲೈಸೆನ್ಸ್‌ ಇತ್ತು!
ಶತಾಯುಷಿ ಸೈನಿಕ ಮೈಕಲ್ ತಮ್ಮ ಕುಟುಂಬಿಕರ ಮರಿ ಮಕ್ಕಳ ಜತೆಗೆ ತುಂಬ ಖುಷಿಯಿಂದ ಬೆರೆಯುತ್ತಿದ್ದರು. ಈ ವಯಸ್ಸಿನಲ್ಲೂ ಅವರ ಕಣ್ಣಿನ ದೃಷ್ಟಿ ಎಷ್ಟು ಸೂಕ್ಷ್ಮವಾಗಿತ್ತು ಎಂದರೆ 2024ರ ತನಕ ಮಂಗಳೂರಿನ ಆರ್‌ಟಿಓ ಅವರಿಗೆ (ನಾಲ್ಕು ಚಕ್ರ) ಡ್ರೈವಿಂಗ್ ಲೈಸೆನ್ಸ್‌ ನೀಡಿತ್ತು. 75ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಅವರ ಕೋರಿಕೆಯ ಮೇರೆಗೆ ಇಂದ್ರಾಳಿಯಲ್ಲಿ ಲಯನ್ಸ್ ಕ್ಲಬ್ ನ ಜಯಸಿಂಹ ಸಭಾಂಗಣದಲ್ಲಿ ಕೊನೆಯದಾಗಿ ಧ್ವಜಾರೋಹಣ ಮಾಡಿದ್ದರು.

ನಾಳೆ ಅಂತ್ಯಕ್ರಿಯೆ
ಗುರುವಾರ ನಿಧನರಾದ ಮೈಕೆಲ್‌ ಡಿಸೋಜರ ಪರ್ಕಳದ ಅಚ್ಯುತ ನಗರದ ಮನೆಯಲ್ಲಿ ಶನಿವಾರ ಬೆಳಗ್ಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ಮಂಗಳೂರಿನಲ್ಲಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.

Exit mobile version