Site icon Vistara News

Udupi Murder : ನಾಲ್ವರನ್ನು ಕೊಂದವನ ಟಾರ್ಗೆಟ್‌ ಅವಳೇ ಅಯ್ನಾಜ್‌; ಕಾರಣ ಬಿಚ್ಚಿಟ್ಟ ಹಂತಕ

Udupi Murder Praveen chougule and Aynaz

ಉಡುಪಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four of Family murdered) ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ (Udupi Murder) ಮಾಡಿದ ಹಂತಕ (Killer Arrest) ಪ್ರವೀಣ್‌ ಅರುಣ್‌ ಚೌಗುಲೆಯನ್ನು ಉಡುಪಿಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿಗೆ (14 day Police Custody) ಒಪ್ಪಿಸಿದೆ. ಈ ನಡುವೆ ಈ ಕೊಲೆಗೆ ಪ್ರವೀಣ್‌ ಚೌಗುಲೆಯ ಟಾರ್ಗೆಟ್‌ ಆಗಿದ್ದದ್ದು ನೂರ್‌ ಮಹಮದ್‌ ಅವರ ಎರಡನೇ ಮಗಳು, ಏರ್‌ ಹೋಸ್ಟೆಸ್‌ ಆಗಿರುವ ಅಯ್ನಾಜ್‌ ಎನ್ನುವುದು ಸ್ಪಷ್ಟವಾಗಿದೆ. ಇದನ್ನು ಸ್ವತಃ ಪ್ರವೀಣ್‌ ಚೌಗುಲೆ ಬಾಯಿ ಬಿಟ್ಟಿದ್ದಾನೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್‌ ಅರುಣ್‌ ಚೌಗುಲೆಯನ್ನು ಪೊಲೀಸರು ಪ್ರಾಥಮಿಕ ಹಂತದ ವಿಚಾರಣೆಯನ್ನು ನಡೆಸಿದ್ದಾರೆ. ಬಳಿಕ ಬುಧವಾರ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಯಿತು.

ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲು ಕರೆದೊಯ್ಯುತ್ತಿರುವುದು.

ಇದನ್ನೂ ಓದಿ: Family Murder : ಒಂದೇ ಕುಟುಂಬದ ನಾಲ್ವರ ಕೊಲೆ; ಹಂತಕನ ಟಾರ್ಗೆಟ್‌ ಏರ್‌ ಹೋಸ್ಟೆಸ್‌?

ಕಳೆದ ಭಾನುವಾರ ಮುಂಜಾನೆ ಕೆಮ್ಮಣ್ಣು ನೇಜಾರಿನ ತೃಪ್ತಿ ನಗರದಲ್ಲಿರುವ ನೂರ್‌ ಮಹಮದ್‌ ಅವರ ಮನೆಗೆ ನುಗ್ಗಿದ ಪ್ರವೀಣ್‌ ಅರುಣ್‌ ಚೌಗುಲೆ ನೂರ್‌ ಮಹಮದ್‌ ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್‌ (23), ಅಯ್ನಾಜ್‌ (21) ಮತ್ತು ಮಗ ಅಸೀಮ್‌ (14)ನನ್ನು ಕೊಂದು ಹಾಕಿದ್ದ. ಕೊಲೆಯಾದವರ ಪೈಕಿ ಅಫ್ನಾನ್‌ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರೆ, ಅಯ್ನಾಜ್‌ ಏರ್‌ ಹೋಸ್ಟೆಸ್‌ ಆಗಿ ಕೆಲಸ ಮಾಡುತ್ತಿದ್ದಳು. ಅಸೀಂ ಏಳನೇ ತರಗತಿಯಲ್ಲಿ ಓದುತ್ತಿದ್ದ.

ಅವನ ಟಾರ್ಗೆಟ್‌ ಅಯ್ನಾಜ್‌ ಮಾತ್ರ, ಸಾಕ್ಷಿ ನಾಶಕ್ಕೆ ಉಳಿದವರ ಕೊಲೆ!

ಪ್ರವೀಣ್‌ ಚೌಗುಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅವನ ಟಾರ್ಗೆಟ್‌ ಆಗಿದ್ದದ್ದು ಅಯ್ನಾಜ್‌ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಆಕೆಯನ್ನು ಕೊಲ್ಲಲೆಂದು ಹೋದವನು ತನ್ನ ಕೃತ್ಯಕ್ಕೆ ಸಾಕ್ಷಿಯಾದ ಇತರ ಮೂವರನ್ನು ಕೂಡಾ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ್ದಾನೆ.

ʻʻಕೊಲೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆ ಇದೆ. ಸಂಪೂರ್ಣ ತನಿಖೆ ಮಾಡದೆ ಕಾರಣ ಹೇಳಲು ಸಾಧ್ಯವಿಲ್ಲ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ. ಅವನ ಉದ್ದೇಶ ಅಯ್ನಾಝ್ ಕೊಲೆ ಮಾಡುವುದಾಗಿತ್ತು. ಆತ ತಪ್ಪಿಸಿಕೊಳ್ಳಲು ಮತ್ತು ಸಾಕ್ಷಿ ನಾಶ ಮಾಡಲು ಇತರರನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆʼʼ ಎಂದು ಉಡುಪಿ ಎಸ್ .ಪಿ ಡಾ. ಅರುಣ್ ಕೆ. ಹೇಳಿದ್ದಾರೆ.

ಕೊಲೆ ಕಾರಣ ಏನು ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಅಯ್ನಾಝ್ ಮತ್ತು ಪ್ರವೀಣ್ ಚೌಗುಲೆ ನಡುವಿನ ಸಂಬಂಧಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಆರೋಪಿ ಪ್ರವೀಣ್ ಚೌಗುಲೆಗೆ ಮದುವೆಯಾಗಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ.

ಚೌಗುಲೆಗೆ ಅಯ್ನಾಜ್‌ ಮೇಲೆ ಅಷ್ಟೊಂದು ದ್ವೇಷ ಯಾಕೆ?

ಅಯ್ನಾಜ್‌ ಕಾರಣಕ್ಕಾಗಿಯೇ ಈ ನರಮೇಧ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆ ತಿಳಿಸಿದೆ. ಆದರೆ, ಅದಕ್ಕೆ ನಿಜವಾದ ಕಾರಣ ಏನು ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ನಿಜವೆಂದರೆ ಅಂದು ಕೊಲೆ ನಡೆದ ದಿನವೇ ಪೊಲೀಸರಿಗೆ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರ ಮೇಲಿನ ದ್ವೇಷಕ್ಕಾಗಿ ಈ ಕೊಲೆ ನಡೆದಿದೆ ಎನ್ನುವುದರ ಸುಳಿವು ಸಿಕ್ಕಿತ್ತು. ಹೀಗಾಗಿ ಅವರಿಬ್ಬರ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು.

ಅದರಲ್ಲಿ ಅಯ್ನಾಜ್‌ ಮೊಬೈಲ್‌ನಲ್ಲಿ ಪ್ರವೀಣ್‌ ಚೌಗುಲೆಗೆ ಸಂಬಂಧಿಸಿ ಕೆಲವೊಂದು ಮಾಹಿತಿಗಳು ಸಿಕ್ಕಿದ್ದವು. ಅದನ್ನು ಆಧರಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರಿಬ್ಬರ ಸಂಬಂಧದ ಬಗ್ಗೆಯೂ ಮಾಹಿತಿ ಪಡೆದಿದ್ದರು. ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಕಾರ ಅವರಿಬ್ಬರೂ ಆತ್ಮೀಯರಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆದರೆ, ಅವರಿಬ್ಬರ ನಡುವೆ ದ್ವೇಷ ಹುಟ್ಟಲು ಕಾರಣವಾದ ಅಂಶಗಳ ಬಗ್ಗೆ ಯಾರಿಗೂ ಸ್ವಷ್ಟತೆ ಇರಲಿಲ್ಲ.

ಇದನ್ನೂ ಓದಿ : Udupi Murder : ಒಂದೇ ಕುಟುಂಬದ ನಾಲ್ವರನ್ನು ಕೊಂದವ ಅರೆಸ್ಟ್‌; ಕೊಲೆಗಾರ ಭದ್ರತಾ ಸಿಬ್ಬಂದಿ

ಒಂದು ಮಾಹಿತಿಯ ಪ್ರಕಾರ, ಪ್ರವೀಣ್‌ ಚೌಗುಲೆಗೆ ಮದುವೆಯಾಗಿದ್ದರೂ ಆತ ಅಯ್ನಾಜ್‌ ಮೇಲೆ ಅನುರಕ್ತನಾಗಿದ್ದ. ಇದು ಆತನ ಹೆಂಡತಿಗೆ ಕೂಡಾ ಗೊತ್ತಾಗಿತ್ತು. ಈ ವಿಚಾರದಲ್ಲಿ ಅವನ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಇದರಿಂದ ಪ್ರವೀಣ ಚೌಗುಲೆಯ ಸಂಸಾರದಲ್ಲಿ ಬಿರುಕು ಮೂಡಿತ್ತು. ಈ ನಡುವೆ, ಅಯ್ನಾಜ್‌ ಕೂಡಾ ಆತನಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದಳು. ಇದು ಚೌಗುಲೆಯ ಆಕ್ರೋಶಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.

ತಾನೇ ಮನೆಗೆ ಬರುವುದಾಗಿ ಆತ ಬೆದರಿಕೆ ಹಾಕಿರುವ ಸಾಧ್ಯತೆ ಇದ್ದು, ಹಾಗೆ ಬಂದವನು ಕೊಲೆ ಮಾಡಿ ಹೋಗಿದ್ದಾನೆ ಎನ್ನುವುದು ಈಗಿರುವ ಮಾಹಿತಿ. ಆದರೆ, ಇದನ್ನೂ ಮೀರಿದ ಬೇರೆ ಕಾರಣಗಳೇನಾದರೂ ಇವೆಯಾ ಎನ್ನುವ ಬಗ್ಗೆ ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ.

Exit mobile version