ಉಡುಪಿ: ಮಗಳ ಪ್ರೀತಿ ವಿಷಯ (Love Case) ತಿಳಿದು ಸಿಟ್ಟಾದ ತಂದೆಯೊಬ್ಬ ನೀಚ ಕೆಲಸಕ್ಕೆ ಕೈಹಾಕಿದ್ದಾನೆ. ಮಗಳ ಅಶ್ಲೀಲ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ. ಉಡುಪಿಯ (Udupi News) ಪಡುಬಿದ್ರಿಯಲ್ಲಿ ವಿಲಕ್ಷಣ ಘಟನೆ ನಡೆದಿದೆ. ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಮಾತು ಈ ಸಮಾಜ ಸೇವಕನಿಗೆ ಸರಿಯಾಗಿ ಒಪ್ಪುತ್ತೆ. ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವ ಆಸಿಫ್, ಆಪದ್ಬಾಂಧವ ಮೊಹಮ್ಮದ್ ಆಸಿಫ್ ಎಂದೇ ಹೆಸರು ಪಡೆದಿದ್ದಾನೆ. ಒಳ್ಳೆ ಹೆಸರು ಪಡೆದಿರುವ ಆಸಿಫ್ ಅನಾಚಾರಗಳನ್ನು ಪತ್ನಿ ಶಬನಮ್ ಹೊರಗೆಳೆದಿದ್ದಾರೆ.
ಮನೆಯೊಳಗೆ ಸಮಾಜ ಸೇವಕನ ಮೃಗೀಯ ವರ್ತನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗಳ ಪ್ರೀತಿ ವಿಚಾರ ಗೊತ್ತಾಗಿದ್ದಕ್ಕೆ ಕಾಲಿನಲ್ಲಿ ತುಳಿದು ಹಲ್ಲೆ ನಡೆಸಿದ್ದಾನೆ. ಮಗಳ ಮೇಲಿನ ಹಲ್ಲೆ ತಪ್ಪಿಸಲು ಹೋದ ಪತ್ನಿಗೂ ಯದ್ವಾತದ್ವಾ ಹಲ್ಲೆ ನಡೆಸಿದ್ದಾನೆ. ಇಷ್ಟು ಮಾತ್ರವಲ್ಲ ಆಫಿಸ್ ನೀಚತನ ಎಷ್ಟಿದೆ ಎಂದರೆ ತನ್ನ ಮಗಳ ವಿಡಿಯೋವನ್ನು ಎಡಿಟ್ ಮಾಡಿ ಹರಿಬಿಟ್ಟಿದ್ದಾನೆ.
ಇದನ್ನೂ ಓದಿ: Physical Abuse : ಬಸ್ನಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟವನಿಗೆ ಮಹಿಳೆಯರಿಂದ ಗೂಸಾ
ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ
ಅಪ್ಪನ ಕೃತ್ಯಕ್ಕೆ ಬೇಸತ್ತ ಮಗಳು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಆಫಿಸ್ ಮಗಳು ಸಂಬಂಧಿ ಹುಡುಗನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಮಗಳ ಹಾಗೂ ಆ ಹುಡುಗನ ಫೋಟೊ, ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವಾಟ್ಸ್ ಆ್ಯಪ್ ಗ್ರೂಪ್‌ವೊಂದಕ್ಕೆ ವೈರಲ್ ಮಾಡಿದ್ದಾನೆ.
ಡ್ರಗ್ಸ್ ವ್ಯಸನಿ
ಶಬನಮ್ ತನ್ನ ಪತಿ ಆಸಿಫ್‌ನ ಅಸಲಿ ಮುಖ ತೆರೆದಿಟ್ಟಿದ್ದಾರೆ. ನನ್ನ ಪತಿ ಡ್ರಗ್ಸ್ ವ್ಯಸನಿಯಾಗಿದ್ದು, ಬ್ರೌನ್ ಶುಗರ್ ತೆಗೆದುಕೊಂಡು ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ವೃದ್ಧರಿಗೆ, ವಿಶೇಷ ಚೇತನರಿಗೆ ಮೈಮುನಾ ಫೌಂಡೇಶನ್ ಹೆಸರಿನಲ್ಲಿ ಆಶ್ರಮ ನಡೆಸುತ್ತಿದ್ದ ಆಸಿಫ್, ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಎಂದಿದ್ದಾರೆ.
ಸಮಾಜಮುಖಿ ಕಾರ್ಯದಿಂದ ಆಸಿಫ್ ಪೊಲೀಸರ ಜತೆಗೆ ಉತ್ತಮ ಸಖ್ಯ ಹೊಂದಿದ್ದಾನೆ. ಹೀಗಾಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಉಡುಪಿಯಲ್ಲಿ ಆಸಿಫ್ ಪತ್ನಿ ಶಬನಮ್ ಆರೋಪಿಸಿದ್ದಾರೆ. ಸದ್ಯ ಪಡುಬಿದ್ರಿ ಠಾಣೆಯಲ್ಲಿ ಹಲ್ಲೆ, ಐಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಲೇ ಆರೋಪಿ ಆಸಿಫ್ ತಲೆಮರೆಸಿಕೊಂಡಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ