ಉಡುಪಿ : ಉಡುಪಿಯ ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ಒಂಬತ್ತು ಮಂದಿ ಬಾಂಗ್ಲಾದೇಶಿಯರನ್ನು ಪೊಲೀಸರು ವಶಕ್ಕೆ (Udupi News ) ಪಡೆದಿದ್ದಾರೆ. ಬಾಂಗ್ಲಾದೇಶೀಯರು ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಆರಿಸಿಕೊಂಡು ಬಂದಿದ್ದರು. ಮಹಮ್ಮದ್ ಮಾಣಿಕ್ ಎಂಬಾತ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಲು ಪ್ರಯತ್ನಿಸಿದ್ದ. ಬಾಂಗ್ಲಾದೇಶದ ಇಮಿಗ್ರಷನ್ ಅಧಿಕಾರಿಗಳ ಪರಿಶೀಲನೆ ವೇಳೆ ಈತ ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿ ಎಂದು ತಿಳಿದುಬಂದಿದೆ.
ಈತನ ವಿಚಾರಣೆ ವೇಳೆ ಮತ್ತೆ ಹಲವರು ಮಲ್ಪೆಯಲ್ಲಿರುವುದು ಪತ್ತೆಯಾಗಿದೆ. ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಎಂಬುವವರನ್ನು ಬಂಧಿಸಲಾಗಿದೆ. ನಕಲಿಯಾಗಿ ಭಾರತೀಯ ದಾಖಲಾತಿ ಸೃಷ್ಟಿಸಿ ಪ್ರವೇಶಿಸಿದ್ದರು. ಆರೋಪಿಗಳ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದ. ಆರೋಪಿಗಳ ಪೈಕಿ ಉಸ್ಮಾನ್ ಅಕ್ರಮವಾಗಿ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ. ಮಲ್ಪೆ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಉಡುಪಿ ಮಲ್ಪೆಯಲ್ಲಿ ಬಾಂಗ್ಲಾದೇಶಿಯರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಮಲ್ಪೆ ಠಾಣಾವ್ಯಾಪ್ತಿಯ ಹೂಡೆಯಲ್ಲಿ ಏಳು ಮಂದಿ ಬಾಂಗ್ಲಾದೇಶೀಯರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿ ಬಂತು. ಅಕ್ರಮ ನೆಲೆಸಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಮಹಮ್ಮದ್ ಮಾಣಿಕ್ ಎಂಬವನು ಇವರ ಜತೆ ವಾಸವಿದ್ದ. ಆತ ನಕಲಿ ಪಾಸ್ ಪೋರ್ಟ್ ಬಳಸಿ, ಮಂಗಳೂರು ವಿಮಾನ ನಿಲ್ದಾಣ ಮೂಲಕ ದುಬೈಗೆ ತೆರಳಲು ಮುಂದಾಗಿದ್ದ. ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರಲ್ಲಿ ಬಂಧಿತ ವ್ಯಕ್ತಿಯ ಮಾಹಿತಿಯನ್ನು ಇಮಿಗ್ರೇಶನ್ ಅಧಿಕಾರಿಗಳು ನಮಗೆ ನೀಡಿದ್ದಾರೆ. ಈತನ ಜತೆ ವಾಸವಿದ್ದ ಏಳು ಮಂದಿಯನ್ನು ಪತ್ತೆ ಮಾಡಲಾಗಿದೆ. ಸದ್ಯ ಏಳು ಮಂದಿ ನಮ್ಮ ವಶದಲ್ಲಿದ್ದಾರೆ, ವಿಚಾರಣೆ ನಡೆಸಿದಾಗ ಅವರ ಬಳಿ ನಕಲಿ ದಾಖಲೆಗಳು ಪತ್ತೆಯಾಗಿವೆ. ಕಳೆದ ಮೂರು ವರ್ಷಗಳಿಂದ ಈ ಕಡೆ ವಾಸವಿದ್ದಾರೆ. ನಕಲಿ ಆಧಾರ್ ಕಾರ್ಡ್ ಹೇಗೆ ಬಂತು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಬಾರ್ಡರ್ ಹೇಗೆ ಕ್ರಾಸ್ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಲ್ಪೆ ಠಾಣೆಯಲ್ಲಿ ಕ್ರೈಂ ಸಂಖ್ಯೆ 138/24, 318, 319,336 ಕೇಸು ದಾಖಲಾಗಿದೆ. ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ, ನ್ಯಾಯಾಲಯಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.