ಉಡುಪಿ: ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Udupi-Chikkamagaluru Constituency) ಬಿಜೆಪಿ ಟಿಕೆಟನ್ನು ಶೋಭಾ ಕರಂದ್ಲಾಜೆ (Shobha Karandlaje) ಅವರಿಗೆ ಕೊಡುವುದಿಲ್ಲ. ಅದು ನಂಗೆ ಅಂತ ಫಿಕ್ಸ್ ಆಗಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಳು ಚೈತ್ರಾ ಕುಂದಾಪುರ (Chaitra Kundapura). ಹಾಗಿದ್ದರೆ, ಈ ವಂಚನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಚೈತ್ರಾ ಬಗ್ಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ, ನಂಗೆ ಟಿಕೆಟ್ ಕೊಡ್ಬೇಕೋ ಬಿಡ್ಬೇಕೋ ಅಂತ ಡಿಸೈಡ್ ಮಾಡಲು ಅವಳು ಯಾರು ಎಂಬರ್ಥದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಉಡುಪಿಗೆ ಆಗಮಿಸಿದ್ದ ಶೋಭಾ ಕರಂದ್ಲಾಜೆ ಅವರು ಚೈತ್ರಾ ಪ್ರಕರಣದ ಬಗ್ಗೆ ಮಾತನಾಡಿದರು. ಚೈತ್ರಾ ಜತೆ ನನಗೆ ವೈಯಕ್ತಿಕ ಸಂಪರ್ಕ ಇರಲಿಲ್ಲ, ನಾವ್ಯಾರೂ ಆಕೆಯನ್ನು ರಕ್ಷಿಸುತ್ತಿಲ್ಲ ಎಂದು ಹೇಳಿದರು.
ʻʻಚೈತ್ರಾ ಕುಂದಾಪುರ ಅರೆಸ್ಟ್ ಆಗಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವಳ ಜತೆ ನನಗೆ ವೈಯಕ್ತಿಕ ಸಂಪರ್ಕ ಇರಲಿಲ್ಲ. ನನಗೆ ಯಾವುದೇ ರೀತಿಯ ನೇರ ಸಂಪರ್ಕ ಇರಲಿಲ್ಲ. ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಫೋಟೊ ತೆಗೆದಿರಬಹುದು, ಅದು ನನಗೆ ಗೊತ್ತಿಲ್ಲ. ರಾಜಕೀಯ ಸಾಮಾಜಿಕ ಜೀವನದಲ್ಲಿ ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು. ಪ್ರಕರಣದ ಕುರಿತು ತನಿಖೆ ಆಗುತ್ತಿದೆ ನಿಷ್ಪಕ್ಷವಾಗಿ ತನಿಖೆಯಾಗಲಿʼʼ ಎಂದು ಅವರು ಹೇಳಿದರು. ಅದೇ ವೇಳೆ, ʻʻತಪ್ಪು ಮಾಡಿದ್ರೆ ಆಕೆಗೆ ಶಿಕ್ಷೆ ಆಗಲಿ ತಪ್ಪು ಮಾಡದೆ ಇದ್ದರೆ ಅನಾವಶ್ಯಕವಾಗಿ ತೊಂದರೆ ಕೊಡುವುದು ಬೇಡʼʼ ಎಂದು ಕೂಡಾ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ʻʻನೂರಾರು ಜನರು ನನ್ನ ಜತೆ ಫೋಟೊ ತೆಗೆದುಕೊಳ್ಳುತ್ತಾರೆ. ಹಾಗೆ ಚೈತ್ರಾಳು ಫೋಟೋ ತೆಗೆದುಕೊಂಡಿರಬಹುದು ನನಗೆ ಚೈತ್ರಾ ಫೋನ್ ಮಾಡ್ಲಿಲ್ಲ. ನಾನು ಕೂಡ ಅವಳಿಗೆ ಫೋನ್ ಮಾಡಿದ್ದು ಇಲ್ಲʼʼ ಎಂದು ಹೇಳಿದರು.
ʻʻಪ್ರಕರಣದ ಬಗ್ಗೆ ಮಾಹಿತಿಗಳನ್ನು ಪೊಲೀಸರು ಸಂಗ್ರಹ ಮಾಡುತ್ತಿದ್ದಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನಾನು ಆಗ್ರಹಿಸುತ್ತೇನೆ. ನಾವು ಯಾರೂ ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ. ನಾವು ಯಾರು ಅವಳನ್ನು ರಕ್ಷಣೆ ಮಾಡುತ್ತಿಲ್ಲʼʼ ಎಂದು ಸ್ಪಷ್ಟಪಡಿಸಿದರು.
ʻʻಕಾನೂನು ಮೂಲಕ ಕ್ರಮ ಕೈಗೊಂಡು ತನಿಖೆ ಆಗಬೇಕು. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆʼʼ ಎಂದರು. ʻʻʻಕಾಸು ಕೊಟ್ಟು ಟಿಕೆಟ್ ಪಡೆಯುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲʼʼ ಎಂದರು ಶೋಭಾ ಕರಂದ್ಲಾಜೆ.
ಹಾಗಿದ್ದರೆ ಶೋಭಾ ಕರಂದ್ಲಾಜೆಗೆ ಉಡುಪಿ ಕ್ಷೇತ್ರದ ಟಿಕೆಟ್ ಇಲ್ವಾ?
ಚೈತ್ರಾ ಕುಂದಾಪುರ ಈ ವಂಚನೆಯ ಪ್ರಕರಣದ ನಡುವೆ ಬಿ.ಎಲ್. ಚನ್ನಾನಾಯಕ್ ಎಂಬವರ ಜತೆ ಮಾತನಾಡುತ್ತಾ ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟನ್ನು ಶೋಭಾ ಕರಂದ್ಲಾಜೆಗೆ ಕೊಡುವುದಿಲ್ಲ. ಅದು ನಂಗೆ ಅಂತ ಆಗಿದೆ. ನಾನು ಗೆಲ್ಲಬೇಕಾದರೆ ಕೆಲವು ಎಂಎಲ್‌ಎಗಳು ಗೆಲ್ಲಬೇಕು. ಹಾಗಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರಂತೆ. ಇದರ ಬಗ್ಗೆ ಗಮನ ಸೆಳೆದಾಗ, ʻʻಯಾರಿಗೆ ಟಿಕೆಟ್ ಕೊಡಬೇಕು ಎಲ್ಲಿ ಟಿಕೆಟ್ ಕೊಡಬೇಕು ಅನ್ನೋದು ವರಿಷ್ಠರು ತೀರ್ಮಾನ ಮಾಡುತ್ತಾರೆ. ಭಾರತೀಯ ಜನತಾ ಪಾರ್ಟಿಗೆ ಗಟ್ಟಿಮುಟ್ಟಾದ ನೇತೃತ್ವ ಇದೆ. ನರೇಂದ್ರ ಮೋದಿ ಅಮಿತ್ ಶಾ ನಡ್ದ ಲೋಕಸಭೆಗೆ ಯಾರಿಗೆ ಟಿಕೆಟ್ ನೀಡಬೇಕು ಅಂತ ತೀರ್ಮಾನ ಮಾಡುತ್ತಾರೆ. ನಾನು ಸ್ಪರ್ಧೆ ಮಾಡುತ್ತೇನೆ, ಇಲ್ಲಿ ಟಿಕೆಟ್ ಸಿಗುತ್ತದೆ ಅಂತ ಯಾರು ಹೇಳಿಕೊಂಡರೂ ಅದಕ್ಕೆ ಬೆಲೆ ಇರುವುದಿಲ್ಲ. ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಲ್ಲಿ ಸ್ಪರ್ಧೆ ಮಾಡಬೇಕು ಅಂತʼʼ ಎಂದು ಹೇಳಿದರು.
ಈ ನಡುವೆ, ಚೈತ್ರಾ ಕುಂದಾಪುರ ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡರೆ ಕ್ರಮ ಕೈಗೊಳ್ಳುತ್ತೇನೆʼʼ ಎಂದು ಕೂಡಾ ಹೇಳಿದರು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ.